ಪಿಎಸ್​ಐ, ಪೇದೆ ಸೇರಿ 14 ಜನರಿಗೆ ಕರೊನಾ ಪಾಸಿಟಿವ್

carona logo
Published on

ಹಾವೇರಿ: ಜಿಲ್ಲೆಯಲ್ಲಿ ಭಾನುವಾರ ಪೊಲೀಸ್ ಸಬ್​ಇನ್ಸಪೆಕ್ಟರ್, ಸಿಆರ್​ಪಿಎಫ್ ಕಾನ್​ಸ್ಟೇಬಲ್ ಸೇರಿ 14 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದು, ಮೂವರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರದ 13ಪ್ರಕರಣಗಳು ಸೇರಿ ಈವರೆಗೆ 302 ಜನರಿಗೆ ಕರೊನಾ ದೃಢಗೊಂಡಿದೆ. ಇಂದಿನವರೆಗೆ 137ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಇಂದಿನ 2ಪ್ರಕರಣಗಳು ಸೇರಿ ಈವರೆಗೆ ಆರು ಜನರು ಮೃತಪಟ್ಟಿದ್ದಾರೆ. 159 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಇಂದಿನ ಸೋಂಕಿತರಲ್ಲಿ ಹಾವೇರಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ ತಲಾ ಐವರು, ಶಿಗ್ಗಾಂವಿ, ರಾಣೆಬೆನ್ನೂರ, ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಸೋಂಕಿತರ ವಿವರ: ಹಿರೇಕೆರೂರ ತಾಲೂಕು ರಾಮತೀರ್ಥದ 69 ವರ್ಷದ ಪುರುಷ, 13 ವರ್ಷದ ಬಾಲಕ, 25 ವರ್ಷದ ಮಹಿಳೆ, ತಿಪ್ಪಾಯಿಕೊಪ್ಪದ 45 ವರ್ಷದ ಪುರುಷ, 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರೂ ಕಂಟೇನ್ಮೆಂಟ್ ಜೋನ್ ನಿವಾಸಿಗಳಾಗಿದ್ದು, ಜು. 1 ಹಾಗೂ ಜು. 5ರಂದು ಸ್ವಾ್ಯಬ್ ಸಂಗ್ರಹಿಸಿ ಟೆಸ್ಟ್​ಗೆ ಕಳಿಸಲಾಗಿತ್ತು. ಜು. 11ರಂದು ಪಾಸಿಟಿವ್ ಬಂದಿದೆ. ನಿಯಮಾನುಸಾರ ರಾಮತೀರ್ಥ ಹಾಗೂ ತಿಪ್ಪಾಯಿಕೊಪ್ಪದ ಸೋಂಕಿತರ ನಿವಾಸದ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಎರಡು ಗ್ರಾಮಗಳನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಬಸವೇಶ್ವರನಗರದ 25 ವರ್ಷದ ಪುರುಷ, ಹಾವೇರಿ ನಗರದ ನಾಗೇಂದ್ರನಮಟ್ಟಿ ಸಿದ್ಧರಾಮೇಶ್ವರ ಗುಡಿಯ ಹತ್ತಿರದ ನಿವಾಸಿ 25 ವರ್ಷದ ಮಹಿಳೆ, ತಾಲೂಕಿನ ಹೊಸರಿತ್ತಿಯ ಪೆಟ್ರೋಲ್ ಬಂಕ್ ಸಮೀಪದ ನಿವಾಸಿ, ಜಮ್ಮುವಿನಿಂದ ಬಂದಿದ್ದ ಸಿಆರ್​ಪಿಎಫ್ ಕಾನ್ಸಟೇಬಲ್ ಆಗಿರುವ 39 ವರ್ಷದ ಪುರುಷ, ಬೆಂಗಳೂರ ಪ್ರಯಾಣ ಮಾಡಿದ್ದ ತಾಲೂಕಿನ ಯತ್ನಳ್ಳಿಯ ಗೌಡರ ಓಣಿಯ 41 ವರ್ಷದ ಪುರುಷ, ಹಾಗೂ ಕೆರಿಮತ್ತಿಹಳ್ಳಿಯ ಗೋಲ್ಡನ್ ಲೇಔಟ್​ನ ನಿವಾಸಿ ಡಿಎಆರ್​ನ ರಿಜರ್ವ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿದ್ದ 41ವರ್ಷದ ಪುರುಷನಿಗೆ ಸೋಂಕು ಖಚಿತವಾಗಿದೆ. ಈ ಸೋಂಕಿತರ ಸ್ವಾ್ಯಬ್ ಟೆಸ್ಟ್ ಅನ್ನು ಜು. 7ರಂದು ಸಂಗ್ರಹಿಸಲಾಗಿತ್ತು. ಜು. 11ರಂದು ಪಾಸಿಟಿವ್ ಬಂದಿದೆ. ಸೋಂಕಿತರ ನಿವಾಸದ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ನಗರದ ಪ್ರದೇಶದ 200 ಮೀ. ಹಾಗೂ ಗ್ರಾಮಗಳನ್ನು ಸಂಪೂರ್ಣ ಬಫರ್ ಜೋನ್ ಆಗಿ ಘೊಷಿಸಲಾಗಿದೆ.

ಇನ್ನು ಬೆಂಗಳೂರನಿಂದ ಬ್ಯಾಡಗಿ ತಾಲೂಕು ಕಲ್ಲೇದೇವರ ಗ್ರಾಮಕ್ಕೆ ಬಂದಿದ್ದ ಐಎಲ್​ಐ ಲಕ್ಷಣ ಹೊಂದಿದ್ದ 25 ವರ್ಷದ ಪುರುಷ, ಹಾನಗಲ್ಲ ಮಟನ್ ಮಾರುಕಟ್ಟೆಯ 36 ವರ್ಷದ ಪುರುಷ, ಶಿಗ್ಗಾಂವಿಯ ಹಳೆಪೇಟೆಯ 24 ವರ್ಷದ ಮಹಿಳೆ, ರಾಣೆಬೆನ್ನೂರ ಎಕೆಜಿ ಕಾಲನಿಯ 42 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಇಬ್ಬರ ಸಾವು: ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶಿಗ್ಗಾಂವಿ ನಗರದ ಖಾಜೆಖಾನ್ ಓಣಿಯ ನಿವಾಸಿ 70 ವರ್ಷದ ಮಹಿಳೆ ಭಾನುವಾರ ನಿಧನರಾಗಿದ್ದಾರೆ. ಜು. 4ರಂದು ಮಧುಮೇಹ ರೋಗದ ಹೆಚ್ಚಳ, ಉಸಿರಾಟದ ತೊಂದರೆಯಿಂದ ಶಿಗ್ಗಾಂವಿ ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಯ ಸಾರಿ ವಾರ್ಡ್​ಗೆ ದಾಖಲಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆಯನ್ನು ನೀಡಲಾಗುತಿತ್ತು. ಹಲವಾರು ಬಾರಿ ರಾಜ್ಯ ವಿಷಯ ತಜ್ಞರ ನೆರವಿನಿಂದ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಭಾನುವಾರ ಬೆಳಗ್ಗೆ ಬಹು ಅಂಗಾಂಗ ವೈಫಲ್ಯದಿಂದ ಈ ಮಹಿಳೆ ಮೃತಪಟ್ಟಿದ್ದಾರೆ. ಕೊವೀಡ್-19 ನಿಯಮದಂತೆ ಶವ ಸಂಸ್ಕಾರ ನಡೆಸಲಾಗಿದೆ. ರಾಣೆಬೆನ್ನೂರ ನಗರದ ಎಕೆಜೆ ಕಾಲನಿ ನಿವಾಸಿ 42ವರ್ಷದ ಮಹಿಳೆ ಜ್ವರ ಪೀಡಿತವಾಗಿದ್ದರಿಂದ ಜು. 8ರಂದು ರಾಣೆಬೆನ್ನೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಆಡಳಿತ ವೈದ್ಯಾಧಿಕಾರಿ ಪರೀಕ್ಷಿಸಿ ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕಳಿಸಿದ್ದರು. ಮಹಿಳೆಯ ಸ್ವಾ್ಯಬ್ ಪರೀಕ್ಷೆಗೆ ಕಳಿಸಲಾಗಿದ್ದು ಪಾಸಿಟಿವ್ ಬಂದಿದೆ. ಕೊವೀಡ್-19 ನಿಯಮದಂತೆ ಶವ ಸಂಸ್ಕಾರ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

ಮೂವರ ಬಿಡುಗಡೆ: ಹಿರೇಕೆರೂರ ತಾಲೂಕಿನ ಇಬ್ಬರು, ಹಾನಗಲ್ಲ ತಾಲೂಕಿನ ಒಬ್ಬರು ಸೇರಿ ಒಟ್ಟು ಮೂವರು ಭಾನುವಾರ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net