

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೂ ಕರೊನಾ ಸೋಂಕು ದೃಢಪಟ್ಟಿದ್ದು, ರೋಗ ಲಕ್ಷಣಗಳಿಲ್ಲದ ಕಾರಣ ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ.
ಕರೊನಾ ತಗುಲಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿನಯ್ ಕುಲಕರ್ಣಿ, 'ಕ್ಷೇತ್ರದ ಅಭಿವೃದ್ಧಿ ಕಾರ್ಯ ಮತ್ತು ಕರೊನಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ತೊಡಗಿದ್ದೆ. ಹಾಗಾಗಿ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದೆ. ವರದಿಯು ಪಾಸಿಟಿವ್ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಹೋಂ ಕ್ವಾರಂಟೈನ್ಗೆ ಒಳಪಟ್ಟಿದ್ದೇನೆ' ಎಂದು ವಿವರಿಸಿದ್ದಾರೆ.
'ಆತಂಕಕ್ಕೆ ಕಾರಣ ಇಲ್ಲ, ನಾಡಿನ ಹಾಗೂ ಕ್ಷೇತ್ರದ ಜನರ ಪ್ರೀತಿ ಆಶೀರ್ವಾದದಿಂದ ಬೇಗ ಗುಣಮುಖನಾಗಿ ನಿಮ್ಮ ಸೇವೆಗೆ ಮರಳುತ್ತೇನೆ' ಎಂದಿರುವ ವಿನಯ್ ಕುಲಕರ್ಣಿ, 'ಕಳೆದ ಕೆಲ ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು' ಎಂದಿದ್ದಾರೆ.
ಇತ್ತೀಚೆಗಷ್ಟೇ ಮೇಕೆ ಖರೀದಿಸಲೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧಾರವಾಡದಲ್ಲಿರುವ ವಿನಯ್ ಕುಲಕರ್ಣಿ ಅವರ ಫಾರ್ಮ್ ಹೌಸ್ಗೆ ಭೇಟಿ ನೀಡಿದ್ದರು. ಈ ವೇಳೆ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದರು. ಇದೀಗ ಅವರಿಗೂ ಕರೊನಾ ಸೋಂಕಿನ ಭೀತಿ ಆವರಿಸಿದೆ.