ಶಾಮಿಯಾನ ಉದ್ಯಮಕ್ಕೆ ಕರೊನಾ ಪೆಟ್ಟು

2sirsi1
Published on

ಶಿರಸಿ: ವಿವಾಹ, ಸಭೆ- ಸಮಾರಂಭ, ಜಾತ್ರೆ ಸೇರಿ ವಿವಿಧ ಕಾರ್ಯಕ್ರಮಗಳ ಅಂದ ಹೆಚ್ಚಿಸುತ್ತಿದ್ದ ಶಾಮಿಯಾನ ಉದ್ಯಮ ಕರೊನಾ 2ನೇ ಅಲೆಗೆ ತತ್ತರಿಸಿದೆ. ಜಿಲ್ಲೆಯ ಅಂದಾಜು 150 ಹೆಚ್ಚಿನ ಶಾಮಿಯಾನ ಮಾಲೀಕರು ಹೊಟ್ಟೆಪಾಡಿನ ಚಿಂತೆಯಲ್ಲಿದ್ದಾರೆ.
ಪ್ರತಿವರ್ಷ ಜನವರಿ ನಂತರ ಸಾಲು ಸಾಲು ವಿವಾಹಗಳು, ಜಾತ್ರೆಗಳು ನಡೆಯುತ್ತವೆ. ಇದರಿಂದ ಸಮಾರಂಭಗಳಿಗೆ ಶಾಮಿಯಾನ, ಕುರ್ಚಿ, ಲೈಟ್, ವೇದಿಕೆ ಸಿದ್ಧತೆ ಮಾಡುವ ಶಾಮಿಯಾನ ಮಾಲೀಕರಿಗೆ ಒಂದು ರೀತಿಯ ಸುಗ್ಗಿಕಾಲವೇ ಆಗಿರುತ್ತದೆ. ಆದರೆ, ಕರೊನಾ 2ನೇ ಅಲೆ ಹೆಚ್ಚಾಗುತ್ತಿರುವುದರಿಂದ ಶಾಮಿಯಾನ ಮಾಲೀಕರು ಮತ್ತು ಅದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕಾರ್ವಿುಕರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ.
ಕಳೆದ ಜನವರಿಯಿಂದ ಮಾರ್ಚ್​ವರೆಗೆ ಒಂದಷ್ಟು ಕೆಲಸ ದೊರೆತಿದ್ದು, ಇನ್ನೇನು ಆರ್ಥಿಕ ಸಂಕಷ್ಟ ಮುಗಿಯುತ್ತದೆ ಎನ್ನುವ ಸಂದರ್ಭದಲ್ಲಿಯೇ ಕೋವಿಡ್ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಜನತಾ ಕರ್ಫ್ಯೂ ಘೊಷಿಸಿತು. ಇದರಿಂದಾಗಿ ಸಭೆ, ಸಮಾರಂಭ, ಜಾತ್ರೆ, ವಿವಾಹ ಸಮಾರಂಭಗಳು ರದ್ದಾದವು. ಹೀಗಾಗಿ ಶಾಮಿಯಾನ ಮಾಲೀಕರು ಮತ್ತು ಕಾರ್ವಿುಕರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಬುಕ್ಕಿಂಗ್ ಬಂದ್:
ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಶಾಮಿಯಾನ ಅಂಗಡಿಗಳಿದ್ದು, 500ಕ್ಕೂ ಹೆಚ್ಚು ಕಾರ್ವಿುಕರಿದ್ದಾರೆ. ಏಪ್ರಿಲ್​ನಿಂದ ಜುಲೈ ಮತ್ತು ಅಕ್ಟೋಬರ್​ನಲ್ಲಿ ಹೆಚ್ಚಾಗಿ ಮದುವೆ ಸಮಾರಂಭಗಳು ನಡೆಯುತ್ತವೆ. ಅದಕ್ಕಾಗಿ ಜನವರಿ, ಫೆಬ್ರವರಿಯಲ್ಲಿ ಬಹುತೇಕ ಬುಕ್ಕಿಂಗ್ ಆಗಿರುತ್ತವೆ. ಆದರೆ, ಜನತಾ ಕರ್ಫ್ಯೂ ಘೊಷಣೆಯಿಂದ ಗ್ರಾಹಕರು ಶಾಮಿಯಾನದ ಬುಕ್ಕಿಂಗ್​ಗಳನ್ನು ರದ್ದು ಮಾಡಿದ್ದಾರೆ. ಅಲ್ಲದೆ, ಮುಂಗಡ ಹಣ ಮರುಪಾವತಿಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಮದುವೆ ಸಿದ್ಧತೆಗೆ ಬೇಕಾದ ವಸ್ತುಗಳನ್ನು ತಯಾರಿಸಲು ಹಣ ನೀಡಿದ್ದರಿಂದ ಬುಕ್ಕಿಂಗ್ ನೀಡಿದವರಿಗೆ ಹಣ ವಾಪಸ್ ಕೊಡಲು ತೊಂದರೆ ಆಗುತ್ತಿದೆ ಎಂದು ಶಾಮಿಯಾನ ಅಂಗಡಿಗಳ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ.
ಸೂಕ್ತ ಪರಿಹಾರ ಕೊಡಿ:
ಶಾಮಿಯಾನ ಮಾಲೀಕರು ಅಂಗಡಿಗಳ ಬಾಡಿಗೆ ಕಟ್ಟಲು ಪರದಾಡುವಂತಾಗಿದೆ. ಒಂದು ರೂಪಾಯಿ ಕೂಡ ಸಂಪಾದನೆ ಆಗುತ್ತಿಲ್ಲ. ಇಂಥ ಸಮಯದಲ್ಲಿ ಸಾವಿರಾರು ರೂ. ಬಾಡಿಗೆ ನೀಡುವುದು ಹೇಗೆ ಎಂದು ಮಾಲೀಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಶಾಮಿಯಾನ ಹಾಕುವ ಕೆಲಸಗಾರರು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಸಂಬಳ ನೀಡಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಬರುವುದಿಲ್ಲ, ಆದಾಯವಿಲ್ಲದೆ ಸಂಬಳ ನೀಡಲು ಮಾಲಿಕರಿಗೂ ಭಾರವಾಗುತ್ತದೆ. ಹೀಗಾಗಿ ಸರ್ಕಾರ ಶಾಮಿಯಾನದವರಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕರೊನಾ 2ನೇ ಅಲೆ ತಡೆಗೆ ಸರ್ಕಾರ ಘೊಷಿಸಿರುವ ಜನತಾ ಕರ್ಫ್ಯೂನಿಂದಾಗಿ ನಮಗೆ ಕೆಲಸವಿಲ್ಲದಂತಾಗಿದೆ. ಶಾಮಿಯಾನ ಹಾಕುವುದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಅದರಿಂದ ಬರುವ ಹಣದಲ್ಲಿಯೇ ಮನೆ ನಿರ್ವಹಣೆ, ಸಾಲ ತೀರಿಸುವುದನ್ನು ಮಾಡುತ್ತಿದ್ದೇವು. ಆದರೆ, ಈಗ ಕೆಲಸ ಇಲ್ಲದಿರುವುದರಿಂದ ಬದುಕು ನಡೆಸುವುದು ಕಷ್ಟವಾಗಿದೆ. ಇನ್ನು ನಮ್ಮ ಮಾಲೀಕರು ಒಂದಷ್ಟು ಸಹಾಯ ನೀಡುವ ನಿರೀಕ್ಷೆಯಲ್ಲಿದ್ದೇವೆ.| ಬಸವರಾಜಪ್ಪಶಾಮಿಯನ ಕಾರ್ವಿುಕಶಾಮಿಯಾನದವರ ಕಾರ್ಯ 6 ತಿಂಗಳ ಮೊದಲೇ ಪ್ರಾರಂಭವಾಗುತ್ತವೆ. ಒಂದು ಶಾಮಿಯಾನ ಅಂಗಡಿಗೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಬುಕ್ ಆಗಿರುತ್ತವೆ. ಆದರೆ, ಈ ಬಾರಿ ಎಲ್ಲ ಕಾರ್ಯಕ್ರಮಗಳು ರದ್ದಾದ ಕಾರಣ 20 ರಿಂದ 30 ಲಕ್ಷ ರೂ.ಗಳಷ್ಟು ಆದಾಯ ನಷ್ಟವಾಗಿದೆ.| ಆನಂದಶಾಮಿಯಾನ ಮಾಲೀಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net