ಮೆಕ್ಕೆಜೋಳಕ್ಕೆ ಕರೊನಾ ಎಫೆಕ್ಟ್

4-RNR-01
Published on

ರಾಣೆಬೆನ್ನೂರ: ಜಗತ್ತಿನಾದ್ಯಂತ ಹರಡುತ್ತಿರುವ ಕರೊನಾ ವೈರಸ್ ಎಫೆಕ್ಟ್ ವಾಣಿಜ್ಯ ನಗರಿ ರಾಣೆಬೆನ್ನೂರಿನ ಪ್ರಮುಖ ಬೆಳೆಯಾದ ಮೆಕ್ಕೆಜೋಳದ ಮೇಲೂ ಪರಿಣಾಮ ಬೀರಿದೆ. ವ್ಯಾಪಾರಸ್ಥರು ಮೆಕ್ಕೆಜೋಳ ಖರೀದಿಸಲು ಹಿಂದೇಟು ಹಾಕುತ್ತಿದ್ದು, ಬೆಲೆ ಗಣನೀಯ ಕುಸಿತ ಕಂಡಿದೆ.

ಸಮಸ್ಯೆ ಏನು ?: ಇಲ್ಲಿಯ ಎಪಿಎಂಸಿಯಿಂದ ಮೆಕ್ಕೆಜೋಳ ಖರೀದಿಸುವ ವ್ಯಾಪಾರಸ್ಥರು ಚೀನಾ, ಬಾಂಗ್ಲಾ, ಥಾಯ್ಲಾಂಡ್​ಗೆ ರಫ್ತು ಮಾಡುತ್ತಿದ್ದರು. ಜತೆಗೆ ಗುಜರಾತ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್ ರಾಜ್ಯಗಳಿಂದ ವ್ಯಾಪಾರಸ್ಥರು ಬಂದು ಖರೀದಿ ಮಾಡುತ್ತಿದ್ದರು. ಮೆಕ್ಕೆಜೋಳದಿಂದ ಬಹುತೇಕ ಪಿಡ್ಸ್ ತಯಾರಿಸಿ ಕೋಳಿ ಸಾಕಾಣಿಕೆದಾರರಿಗೆ ಮಾರಾಟ ಮಾಡಲಾಗುತ್ತಿತ್ತು. ಕರೊನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಮೂರು ದೇಶದಲ್ಲಿ ಕೋಳಿ ಸಾಕಾಣಿಕೆ ಕೈ ಬಿಡಲಾಗಿದೆ. ಹೊರ ರಾಜ್ಯದಲ್ಲೂ ಕೋಳಿ ಸಾಕಾಣಿಕೆ ಕಡಿಮೆ ಮಾಡಲಾಗಿದೆ. ಹೀಗಾಗಿ ಮೆಕ್ಕೆಜೋಳಕ್ಕೆ ಡಿಮಾಂಡ್ ಇಲ್ಲದಂತಾಗಿದೆ. ಆದ್ದರಿಂದ ಸ್ಥಳೀಯ ಮಾರುಕಟ್ಟೆಯಿಂದ ಮೆಕ್ಕೆಜೋಳ ವಿದೇಶಕ್ಕೆ ರಫ್ತಾಗುವುದು ನಿಂತಿದೆ.

ಬೆಲೆಯೂ ಗಣನೀಯ ಕುಸಿತ: ಕಳೆದ ಒಂದು ತಿಂಗಳ ಹಿಂದೆ 1 ಕ್ವಿಂಟಾಲ್ ಮೆಕ್ಕೆಜೋಳ 1900 ರೂ.ಯಿಂದ 2 ಸಾವಿರ ರೂ.ವರೆಗೂ ಮಾರಾಟವಾಗಿದೆ. ಆದರೀಗ 1400 ರೂ.ಯಿಂದ 1600 ರೂ.ಗೆ ಕುಸಿತ ಕಂಡಿದೆ. ವ್ಯಾಪಾರಸ್ಥರು ಖರೀದಿಗೆ ಹಿಂದೇಟು ಹಾಕುತ್ತಿರುವ ಕಾರಣ ಈ ಹಿಂದೆ ಎಪಿಎಂಸಿಗೆ ನಿತ್ಯವೂ 1 ಸಾವಿರ ಕ್ವಿಂಟಾಲ್​ನಷ್ಟು ಆವಕ ಆಗುತ್ತಿದ್ದ ಮೆಕ್ಕೆಜೋಳ ಈಗ 150 ಕ್ವಿಂಟಾಲ್​ಗೆ ಬಂದು ನಿಂತಿದೆ. ಆವಕ ಕಡಿಮೆಯಿದ್ದರೂ ಬೆಲೆ ಮಾತ್ರ ಚೇತರಿಕೆ ಕಾಣದಿರುವುದು ಮೆಕ್ಕೆಜೋಳ ಬೆಳೆಗಾರರನ್ನು ಕಂಗಾಲಾಗಿಸಿದೆ.

ರಾಣೆಬೆನ್ನೂರಿನ ಪ್ರಮುಖ ಬೆಳೆ: ಮೆಕ್ಕೆಜೋಳ ರಾಣೆಬೆನ್ನೂರಿನ ಪ್ರಮುಖ ಬೆಳೆ. ಈ ಬಾರಿ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. 1 ಎಕರೆಗೆ ಬೀಜ, ಗೊಬ್ಬರ, ಕೂಲಿಕಾರರ ಸಂಬಳ ಸೇರಿ 15 ಸಾವಿರ ರೂ.ಯಿಂದ 20 ಸಾವಿರ ರೂ.ವರೆಗೂ ಖರ್ಚು ಮಾಡಿದ್ದಾರೆ. ಎಕರೆಗೆ 20 ಕ್ವಿಂಟಾಲ್ ಇಳುವರಿ ಬಂದರೂ ಈಗಿರುವ ಬೆಲೆಗೆ ಮಾರಾಟ ಮಾಡಿದರೆ, ಖರ್ಚು ಮಾಡಿದ ಹಣ ಕೂಡ ಕೈಗೆಟುಕುವುದಿಲ್ಲ. ಆದ್ದರಿಂದ ಬೆಲೆಗಾಗಿ ಕಾಯುತ್ತ ಮೆಕ್ಕೆಜೋಳವನ್ನು ಒಣಗಿಸುತ್ತಿದ್ದೇವೆ ಎಂಬುದು ರೈತರ ಅಭಿಪ್ರಾಯ.

ಬೆಂಬಲ ಬೆಲೆ ಕನಸಿನ ಮಾತು...! : ಮೆಕ್ಕೆಜೋಳ ಆಹಾರ ಪದಾರ್ಥದ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿಸುವ ವಿಚಾರ ಕೈಬಿಟ್ಟಿದೆ. ಬೆಲೆ ಕಡಿಮೆಯಿದ್ದರೂ ವ್ಯಾಪಾರಸ್ಥರು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಆಗಸ್ಟ್-ಅಕ್ಟೋಬರ್ ಮಳೆಯ ನಂತರ ಬೆಳೆದ ಮೆಕ್ಕೆಜೋಳ ಉತ್ತಮ ಇಳುವರಿ ಬಂದಿದೆ. ಹೀಗಾಗಿ ಮಾರಾಟ ಮಾಡಿ ನೆರೆಹಾವಳಿಯಲ್ಲಿ ಕಳೆದುಕೊಂಡ ಬೆಳೆಯ ನಷ್ಟವನ್ನಾದರೂ ಭರಿಸಿಕೊಳ್ಳೋಣ ಎಂದುಕೊಂಡಿದ್ದ ರೈತರ ಲೆಕ್ಕಾಚಾರವೀಗ ತಲೆ ಕೆಳಗಾಗಿದೆ.

ಕರೊನಾ ಎಫೆಕ್ಟ್​ನಿಂದ ಬೇರೆ ಬೇರೆ ದೇಶಗಳಿಗೆ ರಫ್ತಾಗುತ್ತಿದ್ದ ಮೆಕ್ಕೆಜೋಳ ನಿಂತಿದೆ. ಇಲ್ಲಿಂದ ಖರೀದಿಸಿಕೊಂಡು ಹೋಗುತ್ತಿದ್ದವರ ರಾಜ್ಯಗಳಲ್ಲೂ ಈ ಬಾರಿ ಮೆಕ್ಕೆಜೋಳ ಚೆನ್ನಾಗಿ ಬೆಳೆದಿದ್ದಾರೆ. ಆದ್ದರಿಂದ ಅನಿವಾರ್ಯ ಎಂಬಂತೆ ಖರೀದಿಗೂ ಸಮಸ್ಯೆ ಆಗಿದೆ. ಬೆಲೆಯೂ ಕುಸಿತ ಆಗಿದೆ. | ಜಿ.ಜಿ. ಹೊಟ್ಟಿಗೌಡ್ರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net