ರೋಗನಿರೋಧಕ ಶಕ್ತಿ ಹಲವು, ಆಯುರ್ವೇದದತ್ತ ಒಲವು: ಕರೊನೋತ್ತರ ಶೇ.30ರಿಂದ 100 ಬೇಡಿಕೆ ಹೆಚ್ಚಳ

ayurveda-corona
Published on

| ರಮೇಶ ದೊಡ್ಡಪುರ

ಬೆಂಗಳೂರು: ವಿಶ್ವವನ್ನೇ ಕಾಡುತ್ತಿರುವ ಕರೊನಾ ವೈರಸ್​ಗೆ ಔಷಧ ಕಂಡುಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದರೆ, ರಾಜ್ಯದಲ್ಲಿ ಪಾರಂಪರಿಕ ಆಯುರ್ವೇದ ವೈದ್ಯಪದ್ಧತಿ ಮೇಲೆ ಜನರ ಒಲವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಕರೊನಾ ಸೋಂಕು ಎದುರಿಸಲು ಪ್ರಮುಖವಾರಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅತ್ಯಾವಶ್ಯಕ ಎಂಬುದರ ಸಲುವಾಗಿ ಆಯುರ್ವೇದ ಔಷಧ ಉತ್ಪನ್ನಕ್ಕೆ ಬೇಡಿಕೆ ಹೆಚ್ಚುವ ಜತೆಗೆ ಮನೆಯಲ್ಲಿ ಔಷಧ ತಯಾರಿಸಿಕೊಳ್ಳುವವರ ಪ್ರಮಾಣದಲ್ಲೂ ಏರಿಕೆಯಾಗಿದೆ. ಔಷಧ ಮಾರಾಟದ ಪ್ರಮಾಣ ಶೇ.30ರಿಂದ ಶೇ.100ರವರೆಗೆ ಹೆಚ್ಚಿದೆ ಎಂದು ಆಯುರ್ವೇದ ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಆಯುರ್ವೆದದಿಂದ ವೈರಾಣು ಸಮಸ್ಯೆಗೆ ಅತ್ಯುತ್ತಮ ಪರಿಹಾರ ಸಿಗುತ್ತದೆ ಎಂಬುದು ಈಗಾಗಲೆ ಸಾಬೀತಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿದರೆ ವೈರಾಣು ದಾಳಿ ಮಾಡುವುದಿಲ್ಲ. ಸೋಂಕು ತಗುಲಿದರೂ ಹೆಚ್ಚಿನ ತೊಂದರೆ ನೀಡದೆ ಗುಣವಾಗುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕಷಾಯ, ಮಾತ್ರೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಮುಖವಾಗಿ ಡಾಬರ್, ಬೈದ್ಯನಾಥ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಯುರ್ವೇದ, ಬಾಬಾ ರಾಮದೇವ್ ಅವರ ಪತಂಜಲಿ, ಡಾ.ಗಿರಿಧರ ಕಜೆ ಔಷಧಗಳಿಗೆ ಜನರು ಮುಗಿ ಬೀಳುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀ ಶ್ರೀ ಆಯುರ್ವೇದ ಸಂಸ್ಥೆಯ ಹಿರಿಯ ಶಿಕ್ಷಕ ಪಟಾಪಟ್ ಶ್ರೀನಿವಾಸ್, ಆಯುರ್ವೇದ ಬಗ್ಗೆ ಸ್ವಲ್ಪ ಮಟ್ಟಿನ ಜಾಗೃತಿ ಭಾರತದಲ್ಲಿ ಇತ್ತು, ಅಷ್ಟೇ ಪ್ರಮಾಣದಲ್ಲಿ ವಿದೇಶಗಳಲ್ಲೂ ಇತ್ತು. ಕರೊನಾ ಸೋಂಕು ಆರಂಭದ ಬಳಿಕ ಅದಕ್ಕೆ ಔಷಧ ಸಂಶೋಧನೆ ಆಗಿಲ್ಲ ಎಂಬುದು ತಿಳಿದ ನಂತರ ಏಪ್ರಿಲ್​ನಿಂದ ಆಯುರ್ವೇದದತ್ತ ತೀವ್ರ ಬೇಡಿಕೆ ಉಂಟಾಗಿದೆ. ಶ್ರೀ ಶ್ರೀ ಆಯುರ್ವೇದ ಸಂಸ್ಥೆಯಿಂದ 4 ಔಷಧಗಳ ಕಿಟ್​ಗೆ ಭಾರಿ ಬೇಡಿಕೆ ಬಂದಿದೆ. ಕರೊನಾಕ್ಕೂ ಮುನ್ನದ ಬೇಡಿಕೆಗೆ ಹೋಲಿಸಿದರೆ ಶೇ.150-200ಕ್ಕೂ ಹೆಚ್ಚಿನ ಬೇಡಿಕೆ ಬರುತ್ತಿದೆ. ಎಲ್ಲ ಆಯುರ್ವೆದ ಸಂಸ್ಥೆಗಳಿಗೂ ಇದರ ಪ್ರಭಾವ ಆಗಿದೆ ಎಂದಿದ್ದಾರೆ.

ಪ್ರಮುಖರ ವಿಶ್ವಾಸವೂ ಕಾರಣ: ಕರೊನಾ ಗುಣಪಡಿಸುವಲ್ಲಿ ಆಯುರ್ವೇದ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಮಾಧ್ಯಮಗಳ ಮೂಲಕ ತಿಳಿಸಿದ್ದು ಸಾಕಷ್ಟು ಪ್ರಭಾವ ಬೀರಿದೆ. ಕರ್ನಾಟಕದಲ್ಲಿ ಸಚಿವ ಸಿ.ಟಿ.ರವಿ, ತಾವು ಡಾ.ಗಿರಿಧರ ಕಜೆ ಔಷಧದಿಂದಲೇ ಗುಣಮುಖರಾಗಿರುವುದಾಗಿ ತಿಳಿಸಿದರು, ಸಚಿವ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಔಷಧ ಕಿಟ್​ಗಳನ್ನು ವಿತರಣೆ ಮಾಡಿದ್ದೂ ಜನರಲ್ಲಿ ವಿಶ್ವಾಸ ಮೂಡಿಸಿದೆ. ಡಾ.ಕಜೆ ಅವರ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು, ಆಯುಷ್ ಇಲಾಖೆ ಸಂಶೋಧನೆಯಲ್ಲೂ ಉತ್ತಮ ಪರಿಣಾಮ ವ್ಯಕ್ತವಾಗಿತ್ತು. ಈ ಕುರಿತು ಮಾತನಾಡಿದ ಡಾ.ಗಿರಿಧರ ಕಜೆ, ವೈರಾಣು ತೊಂದರೆಗಳಿಗೆ ನಮ್ಮ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಸಾತ್ಮ್ಯ ಹಾಗೂ ಭೌಮ್ಯ ಮಾತ್ರೆ ನೀಡುತ್ತಿದ್ದೆವು. ಕ್ಲಿನಿಕಲ್ ಟ್ರಯಲ್ ಆರಂಭಿಸುವ ಸಮಯದಿಂದಲೇ ಆ ಮಾತ್ರೆಗಳ ಮಾರಾಟ ಸ್ಥಗಿತಗೊಳಿಸಿದ್ದೇವೆ. ಆದರೆ ಇನ್ನಿತರ ರೋಗನಿರೋಧಕ ಶಕ್ತಿ ವೃದ್ಧಿಯ ಔಷಧಗಳಿಗೆ ಬೇಡಿಕೆ ಇದೆ. ಒಟ್ಟಾರೆ ಭಾರತೀಯ ವೈದ್ಯಪದ್ಧತಿಯ ಬಗ್ಗೆ ಜನರು ಒಲವು ತೋರುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ.

ಅಂಗಡಿಗಳ ಮುಂದೆ ಕ್ಯೂ: ಸಾಮಾನ್ಯವಾಗಿ ದಿನಕ್ಕೆ 15-20 ಜನರು ಆಗಮಿಸುತ್ತಿದ್ದವರು ಕರೊನಾ ನಂತರದಲ್ಲಿ ಔಷಧ ಕೊಳ್ಳಲು 50-100 ಜನರಿಗೆ ಏರಿಕೆಯಾಗಿದೆ ಎಂದು ಮಲ್ಲೇಶ್ವರದ ಪ್ರಮುಖ ಆಯುರ್ವೇದ ಮೆಡಿಕಲ್ ಸ್ಟೋರ್ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಬಹುತೇಕರು ರೋಗನಿರೋಧಕ ಶಕ್ತಿ ವೃದ್ಧಿಸುವ ಕಷಾಯದ ಪುಡಿ ಮತ್ತು ಮಾತ್ರೆ, ಚ್ಯವನಪ್ರಾಶ ಖರೀದಿಸುತ್ತಾರೆ. ಪ್ರಸಿದ್ಧ ಕಂಪನಿಗಳ ಜತೆಗೆ ಮಡಿಕೇರಿ, ಉತ್ತರ ಕನ್ನಡ, ಚಿಕ್ಕಮಗಳೂರು ಮುಂತಾದೆಡೆ ಗುಡಿಕೈಗಾರಿಕೆಗಳಲ್ಲಿ ತಯಾರಾಗುವ ಉತ್ಪನ್ನಗಳನ್ನೂ ಕೊಳ್ಳುತ್ತಾರೆ. ಅನೇಕ ಆಯುರ್ವೇದ ಆಸ್ಪತ್ರೆಗಳ ಒಪಿಡಿ ರೋಗಿಗಳ ಸಂಖ್ಯೆಯಲ್ಲೂ ಏರಿಕೆ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ವೋಕಲ್ ಫಾರ್ ಲೋಕಲ್ ಎಂದು ಕರೆ ನೀಡಿದ್ದು ಸಾಕಷ್ಟು ಪ್ರಭಾವ ಬೀರಿದ್ದು, ಪತಂಜಲಿ ಸಂಸ್ಥೆಯ ಉತ್ಪನ್ನಗಳ ಮಾರಾಟದಲ್ಲಿ ಶೇ.25-30 ಹೆಚ್ಚಳವಾಗಿದೆ. ಆಯುರ್ವೇದ ಉತ್ಪನ್ನಗಳಿಗೆ ಹೆಚ್ಚಿರುವ ಬೇಡಿಕೆ ಕರೊನಾ ನಂತರವೂ ಮುಂದುವರಿಯುವ ವಿಶ್ವಾಸವಿದೆ.

| ಭವರ್​ಲಾಲ್ ಆರ್ಯ

ಕರ್ನಾಟಕ ಪ್ರಭಾರಿ, ಪತಂಜಲಿ ಯೋಗ ಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net