

ಕಾರವಾರ: ನಗರಸಭೆಯಿಂದಲೇ ನಿಯಮ ಮೀರಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಿರುವುದು ಸಾಬೀತಾಗಿದ್ದು, ಅದನ್ನು ತೆರವು ಮಾಡುವಂತೆ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಜಿಲ್ಲಾ ಪ್ರಧಾನ ಮತ್ತು ಸೆಶನ್ಸ್ ನ್ಯಾಯಾಲಯ ಎತ್ತಿ ಹಿಡಿದಿದೆ.
ನಗರದ ಗ್ರೀನ್ ಸ್ಟ್ರೀಟ್ ಶಹರ ಪೊಲೀಸ್ ಠಾಣೆಯ ಎದುರು ನಿರ್ಮಿಸಲಾದ ವಾಣಿಜ್ಯ ಸಂಕೀರ್ಣದಲ್ಲಿ ಕಾನೂನು ಉಲ್ಲಂಘಿಸಲಾಗಿದ್ದು, ಅದನ್ನು ತೆರವು ಮಾಡುವಂತೆ 2015 ರಲ್ಲಿ ಕಾರವಾರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ನಗರಸಭೆ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ನಗರಸಭೆಯ ಮೇಲ್ಮನವಿಯನ್ನು ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ತಿರಸ್ಕರಿಸಿ ಗುರುವಾರ ತೀರ್ಪು ಪ್ರಕಟಿಸಿದ್ದಾರೆ.
2004 ರಲ್ಲಿ ನಗರಸಭೆಯಲ್ಲಿ ಠರಾವು ಮಂಡಿಸಿ, 2007 ರ ಹೊತ್ತಿಗೆ ಐಡಿಎಸ್‌ಎಂಟಿ ನಿಧಿಯಲ್ಲಿ ನಗರದ ಗ್ರೀನ್ ಸ್ಟ್ರೀಟ್ ನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿತ್ತು. ನೆಲ ಅಂತಸ್ಸಿನಲ್ಲಿ 10 ಹಾಗೂ ಮೊದಲ ಅಂತಸ್ಸಿನಲ್ಲಿ 20 ಮಳಿಗೆಗಳನ್ನು ನಿರ್ಮಿಸಿ, ಬಾಡಿಗೆಗೆ ನೀಡಲಾಗಿತ್ತು.
ಖಾಸಗಿ ವ್ಯಕ್ತಿಗಳು ನಗರಸಭೆಗೆ ದೇಣಿಗೆ ನೀಡಿದ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ವಾಹನ ದಟ್ಟಣೆ ಇರುವ 100 ಮೀಟರ್ ರಸ್ತೆಯನ್ನು ನಗರಸಭೆಯಿಂದಲೇ ಅತಿಕ್ರಮಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಕಟ್ಟಡಕ್ಕೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ . ನಗರಾಭಿವೃದ್ಧಿ ಪ್ರಾಧಿಕಾರದಿಂದ ಯೋಜನೆಗೆ ಅನುಮೋದನೆ ಪಡೆದಿಲ್ಲ ಎಂದು ಆಕ್ಷೇಪಿಸಿ ನಗರದ ಜಗದೀಶ ಬಿರ್ಕೋಡಿಕರ್, ವಿವೇಕಾನಂದ ನಾಯಕ, ಆನಂದರಾವ್ ಖಾರ್ಗೇಕರ್, ದೀಪಕ್ ಪೆಡ್ನೇಕರ್ ಎಂಬುವವರು ನಗರಸಭೆಯ ವಿರುದ್ಧ 2007 ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜಗದೀಶ ಬಿರ್ಕೋಡಿಕರ್ ಪರವಾಗಿ ವಕೀಲ ಬಿ.ಎಸ್.ಪೈ, ನಗರಸಭೆಯ ಪರವಾಗಿ ವಕೀಲ ನಾಗರಾಜ ನಾಯಕ ವಾದ ಮಂಡಿಸಿದ್ದರು.