ಸಹಕಾರಿಗಳು ಜನರ ನಂಬಿಕೆ ಉಳಿಸಿಕೊಳ್ಳಲಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

kkkk (1)
Published on

ಬೆಂಗಳೂರು: ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದ್ದು, ಸಹಕಾರಿಗಳು ಜನರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳವಂತಾಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೂಚ್ಯವಾಗಿ ಹೇಳಿದ್ದಾರೆ.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದಿಂದ ಶುಕ್ರವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಸೌಹಾರ್ದ ಸಹಕಾರಿ ಕಾಯ್ದೆ ಹಾಗೂ ಸೌಹಾರ್ದ ಸಹಕಾರಿ ಚಳವಳಿ’ಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರ ಕ್ಷೇತ್ರ ಬಂಗಾರದ ಮೊಟ್ಟೆ ಇಡುವ ಕೋಳಿಯಾಗಿದ್ದು, ಸರಿಯಾಗಿ ಉಪಯೋಗಿಸಿಕೊಂಡರೆ ಬಂಗಾರದ ಮೊಟ್ಟೆ ಸಿಗುತ್ತಲೇ ಇರುತ್ತದೆ. ಆದರೆ, ಬಂಗಾರದ ಆಸೆಗೆ ಬಿದ್ದರೆ ಕೋಳಿಯೂ ಇರುವುದಿಲ್ಲ. ಮೊಟ್ಟೆಯೂ ಇರುವುದಿಲ್ಲ. ಹಾಗಾಗಿ, ಸಹಕಾರಿಗಳು ವಿಶ್ವಾಸದಿಂದ ಕೆಲಸ ಮಾಡಬೇಕು ಎಂದರು.

ಬ್ಯಾಂಕಿಂಗ್ ವ್ಯವಸ್ಥೆಗಿಂತ ಮೊದಲು ಜನರು ಸಹಕಾರ ಕ್ಷೇತ್ರವನ್ನೇ ಅವಲಂಬಿಸಿದ್ದರು. 1914-15ರಲ್ಲಿ ರಾಜ್ಯದಲ್ಲಿ 725 ಸಹಕಾರಿ ಸಂಘಗಳಲ್ಲಿ 50 ಸಾವಿರಕ್ಕಿಂತ ಅಧಿಕ ಸದಸ್ಯರಿದ್ದರು. ಆ ಕಾಲದಲ್ಲೇ 30 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದರು. 725 ಸಂಘಗಳಲ್ಲಿ 621 ವ್ಯವಸಾಯ ಸಹಕಾರ ಸಂಘಗಳಾಗಿದ್ದವು. ಇವೆಲ್ಲವೂ ಕೃಷಿ ಮೂಲವಾಗಿದ್ದು ಹಳ್ಳಿಗಳಲ್ಲಿದ್ದವು. ಇದು ಈ ಮಣ್ಣಿಗೆ ಮಾಡಿದ ಸೇವೆಯಾಗಿದೆ ಎಂದು ಜೋಶಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ರಂಗ, ಸಹಕಾರಿ ಚಳಚಳಿ ಯಶಸ್ವಿಯಾಗಬೇಕು ಎಂದರೆ ಅದಕ್ಕೆ ಬಹುದೊಡ್ಡ ಮೂಲವಾಗಿರುವುದು ಠೇವಣಿ ಮತ್ತು ಸಾಲ ನೀಡಿಕೆ. ಇದನ್ನು ಅರಿತರೆ ಜನರೇ ಮುಂದೆ ಬಂದು ಠೇವಣಿ ಇಡುತ್ತಾರೆ. ಆಡಳಿತ ಮಂಡಳಿಯವರು ಇದನ್ನು ಮರೆಯಬಾರದು ಎಂದು ಪ್ರಲ್ಹಾದ ಜೋಶಿ ಸಲಹೆ ನೀಡಿದರು. ಶಾಸಕರಾದ ಅರಗ ಜ್ಞಾನೇಂದ್ರ, ಬಿ.ಆರ್.ಪಾಟೀಲ್, ಸುನೀಲ್ ಪಾಟೀಲ್, ಜಗದೀಶ್ ಗುಡಗುಂಟಿ, ಯಶಪಾಲ್ ಸುವರ್ಣ, ಮಹಂತೇಶ ಕವಟಗಿಮಠ, ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜನಗೌಡ, ಉಪಾಧ್ಯಕ್ಷ ಎ.ಆರ್.ಪ್ರಸನ್ನ ಕುಮಾರ್ ಮತ್ತಿತರರಿದ್ದರು.

ಡಿಜಿಟಲೀಕರಣಕ್ಕೆ 2,516 ಕೋಟಿ: ಕೇಂದ್ರ ಸರ್ಕಾರದ ಅವಧಿಯಲ್ಲಿ ಪ್ರಥಮ ಬಾರಿಗೆ ಸಹಕಾರಿ ಇಲಾಖೆ ಸ್ಥಾಪಿಸಲಾಗಿದೆ. ಡಿಜಿಟಲೀಕರಣಕ್ಕೆ 2,516 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಪಾರದರ್ಶಕತೆ ತರಲಾಗಿದೆ. ಸೇವಾ ಕೇಂದ್ರ, ಪೆಟ್ರೋಲ್ ಬಂಕ್, ನ್ಯಾಯಬೆಲೆ ಅಂಗಡಿ ಮತ್ತಿತರ ಸೇವೆಗಳನ್ನು ಸಹಕಾರಿರಂಗದ ಮೂಲಕ ಕೈಗೊಳ್ಳಲು ರಾಜ್ಯಗಳಿಗೆ ಮಾರ್ಗಸೂಚಿ ನೀಡಿದ್ದೇವೆ. ಇದರಿಂದ ಎಲ್ಲರಿಗೂ ಲಾಭ ತಲುಪುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಗುತ್ತದೆ ಎಂದು ಪ್ರಲ್ಹಾದ ಜೋಶಿ ಹೇಳಿದರು.

ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ನೀಡುತ್ತಿದ್ದ ಸಬ್ಸಿಡಿಯನ್ನು ಶೇ.12ಕ್ಕೆ ಇಳಿಸಿದೆ. ಇದರಿಂದ ಲಕ್ಷಾಂತರ ಕೃಷಿಕರಿಗೆ ಅನ್ಯಾಯವಾಗಿದ್ದು, ಇದನ್ನು ಸರಿಪಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದ್ದಾರೆ.

ಡಿ. ಸುಧಾಕರ್, ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net