ಸಹಕಾರ ಕ್ಷೇತ್ರದ ಅನರ್ಘ್ಯ ರತ್ನ ಚೊಕ್ಕ ಬಸವನಗೌಡರಿಗೆ ವಿಜಯವಾಣಿ ಪತ್ರಿಕೆಯ ಪ್ರತಿಷ್ಠಿತ "ವಿಜಯರತ್ನ ಪ್ರಶಸ್ತಿ"

Chokka Basavanagouda Siraguppa Vijayarathana Award
ಬೆಂಗಳೂರಿನಲ್ಲಿ ವಿಜಯವಾಣಿ ಆಯೋಜಿಸಿದ್ದ ಸಮಾರಂಭದಲ್ಲಿ ಸಿರಗುಪ್ಪದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ಚೊಕ್ಕ ಬಸವನಗೌಡರು ಇವರಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಬಿಎಂಟಿಫ್ ಎಡಿಜಿಪಿ ಡಿ.ರೂಪಾ ಮೌದ್ಗಿಲ್ ಅವರು ‘ವಿಜಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಉಪಸ್ಥಿತರಿದ್ದರು.
Published on

ತಾನು ಎಲ್ಲರಿಗೂ... ತನಗಾಗಿ ಎಲ್ಲರೂ ಎಂಬ ತತ್ವದಂತೆಯೇ ಜೀವನ, ಬಡವರ ಪರ ಕಾಳಜಿ, ಸಾಮಾಜಿಕ ಕಳಕಳಿ. ಆರ್ಥಿಕ ಉನ್ನತಿಯಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ ಎಂಬ ಅಗಾಧ ನಂಬಿಕೆಯಿಂದ ಸಹಕಾರ ರಂಗದ ಮೂಲಕ ಎಲ್ಲರ ಬಾಳಿಗೆ ಆರ್ಥಿಕ ಶಕ್ತಿ ತುಂಬಿ ಸಾಮಾಜಿಕವಾಗಿ ಕಷ್ಟದಲ್ಲಿರುವವರನ್ನು ಮೇಲೆತ್ತುವ ಕಾಯಕದಲ್ಲಿ ತೊಡಗಿ ಯಶಸ್ಸು ಕಂಡವರು ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಕೆ.ಬೆಳಗಲ್ ಮೂಲದ ಸಹಕಾರಿ ರತ್ನ ಚೊಕ್ಕ ಬಸವನಗೌಡರು. ಇವರ ಸಾಧನೆಯನ್ನು ಗುರುತಿಸಿ ವಿಜಯವಾಣಿ ಪತ್ರಿಕೆಯು ಪ್ರತಿಷ್ಠಿತ ‘ವಿಜಯರತ್ನ ಪ್ರಶಸ್ತಿ’ ನೀಡಿ ಗೌರವಿಸಿದೆ.

ಬಳ್ಳಾರಿ: ಚೊಕ್ಕ ಎಂಬ ಕುಟುಂಬದ ಹೆಸರು ಹೇಗೆ ಬಂತು ಎಂಬುದು ಗೊತ್ತಿಲ್ಲ. ಆದರೆ, ಬಸವನಗೌಡರು ಮಾತ್ರ ಚೊಕ್ಕ ಚಿನ್ನವೇ ಆಗಿದ್ದಾರೆ. ಚೊಕ್ಕ ಬಸವನಗೌಡರದು ಸಹಕಾರಿ ರಂಗದಲ್ಲಿ ಬರೋಬ್ಬರಿ 50 ವರ್ಷಗಳ ಸೇವೆ. ಸಿರಗುಪ್ಪದಲ್ಲಿ 1962ರಲ್ಲಿ ಪ್ರಾರಂಭಗೊಂಡ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಸುದೀರ್ಘ 30 ವರ್ಷದ ಅವಧಿಗೆ ಅಪಾರ ಕೊಡುಗೆ ನೀಡಿದ್ದಾರೆ.

ಚೊಕ್ಕ ಬಸವನಗೌಡರ ಉಸಿರು ಎಂದರೆ ಅದು ಸಹಕಾರಿ ರಂಗ. ಜೀವನದ ಬಹುಭಾಗವನ್ನು ಸಹಕಾರಿ ರಂಗದ ಮೂಲಕ ಜನರ ಸೇವೆ ಮಾಡುವುದರಲ್ಲಿಯೇ ಅವರು ಸವೆಸಿದ್ದಾರೆ. ರಾಜ್ಯದ ಕಾಸ್ಕಾರ್ಡ ಬ್ಯಾಂಕ್ ಅಧ್ಯಕ್ಷರಾಗಿ, ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷರಾಗಿ, ಬಳ್ಳಾರಿ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷರಾಗಿ, ಸಹಕಾರಿ ಕ್ಷೇತ್ರದಲ್ಲಿ ಹಲವಾರು ರೀತಿಯಲ್ಲಿ ತಮ್ಮದೇ ಆದ ವಿನೂತನ ಸಾಧನೆಗಳ ಮೂಲಕ ಛಾಪು ಮೂಡಿಸಿದ್ದಾರೆ.

ಚೊಕ್ಕ ಬಸವನಗೌಡರು ಬಳ್ಳಾರಿ ಜಿಲ್ಲೆಯ ಹಿರಿಯ ಸಹಕಾರ ಧುರೀಣರು. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಗ್ರಾಮ ಕೆ.ಬೆಳಗಲ್ ಗ್ರಾಮದಲ್ಲಿ 1950ರ ಮಾ.4ರಂದು ಚೊಕ್ಕ ಗಂಗಮ್ಮ ಮತ್ತು ಚೊಕ್ಕ ಭೀಮನಗೌಡರ ಮಗನಾಗಿ ಜನಿಸಿದ ಇವರು ತುಂಬು ಕುಟುಂಬದ ಒಂಬತ್ತು ಮಕ್ಕಳಲ್ಲಿ ಇವರು ಐದನೇಯವರು. ಪ್ರಾಥಮಿಕ ಶಿಕ್ಷಣವನ್ನು ಕೆ.ಬೆಳಗಲ್ ಗ್ರಾಮದಲ್ಲಿ ಪೂರೈಸಿದ ಇವರ ಕುಟುಂಬದ ಮೂಲವೃತ್ತಿ ವ್ಯವಸಾಯ.

ಕುಟುಂಬದ ಜವಾಬ್ದಾರಿ ಇವರ ಮೇಲೆಯೇ ಉಂಟಾಗಿದ್ದರಿಂದ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಲು ಸಾಧ್ಯವಾಯಿತು. ತಮ್ಮ 200ಎಕರೆ ಕೃಷಿ ಜಮೀನಿನ ಉಸ್ತುವಾರಿ ಹೊತ್ತುಕೊಂಡು ಯಶಸ್ವಿ ಕೃಷಿಕರಾಗಿ ಪ್ರಗತಿ ಪರ ರೈತರಾಗಿ ಸಾಧನೆ ಮಾಡಿದರು. ಕೃಷಿಯಲ್ಲಿ ಮಾಡಿದ ಸಾಧನೆ ಪಡೆದ ಅನುಭವದ ಪಾಠದಿಂದಲೇ ಅವರು ರಾಜ್ಯಮಟ್ಟದಲ್ಲಿ ಸಹಕಾರಿ ನಾಯಕರಾಗಿ ಬೆಳೆಯಲು ದಾರಿಯಾಯಿತು.

ಬಾಲ್ಯದಿಂದಲೇ ಪರೋಪಕಾರಿ ಗುಣ ಹೊಂದಿದ್ದ ಚೊಕ್ಕ ಬಸವನಗೌಡರು ಇಂದಿಗೂ ಅದೇ ಗುಣ ದೈನಂದಿನ ಜೀವನದಲ್ಲಿ ಮುನ್ನಡೆಸಿಕೊಂಡು ಬಂದಿದ್ದಾರೆ. ಹೀಗೆ ಬಾಲ್ಯದಿಂದ ಕಂಡುಂಡ ಬದುಕಿನ ಪಾಠಗಳೇ ಅವರಿಗೆ ಮುಂದೆ ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ರಹದಾರಿಯಾಯಿತು. ಆನಂತರದಲ್ಲಿ ಅವರು 1990ರಿಂದ ಸಿರಗುಪ್ಪದಲ್ಲಿ ನೆಲೆಸಿದ್ದು, ತಮ್ಮ ಗುರುಗಳಾದ ವೆಂಕೋಬರಾವ್ ಮಾರ್ಗದರ್ಶನದಲ್ಲಿ ಚೊಕ್ಕ ಬಸವನಗೌಡರು ಪಿಎಸ್‌ಎಸ್‌ಎನ್ ಸಂಘದ ಪ್ರವೇಶ ಮಾಡುವ ಮೂಲಕ ಸಹಕಾರಿ ಕ್ಷೇತ್ರಕ್ಕೆ ಪಾದರ್ಪಣೆ ಮಾಡಿ, ಆನಂತರ ಹೊರಳಿಯೂ ನೋಡದಂತೆ ಮುನ್ನುಗ್ಗಿ ಸಹಕಾರಿ ಕ್ಷೇತ್ರದ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ.

ಶರಣರು ಹೇಳಿಕೊಟ್ಟ ಕಾಯಕ ತತ್ವಗಳನ್ನು ಚಾಚೂ ತಪ್ಪದೆ ಜೀವನದಲ್ಲಿ ಅಳವಡಿಸಿಕೊಂಡಿರುವ ಚೊಕ್ಕ ಬಸವನಗೌಡರು ಶರಣ ತತ್ವ, ಕಾಯಕತತ್ವ, ಸಹಕಾರ ತತ್ವಗಳಲ್ಲಿ ಅಪಾರ ನಂಬಿಕೆಯಿರಿಸಿಕೊಂಡವರು. ಅಂತೆಯೇ ಅದು ಅವರಿಗೆ ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ಅವಕಾಶ ಮಾಡಿಕೊಟ್ಟಿತು.

ಸಹಕಾರ ರಂಗದಿಂದ ಸಮಾಜವನ್ನು ಆರ್ಥಿಕವಾಗಿ ಪ್ರಗತಿಯತ್ತ ಕೊಂಡೊಯ್ಯಲು ಸಾಕಷ್ಟು ಅವಕಾಶಗಳಿವೆ. ಕಳೆದ 50 ವರ್ಷಗಳಿಂದ ಸಹಕಾರಿ ಕ್ಷೇತ್ರವನ್ನು ಸಿರಗುಪ್ಪ ತಾಲೂಕು ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಬಲಿಷ್ಠವಾಗಿ ಕಟ್ಟಿ ಬೆಳೆಸಿದ್ದೇವೆ. ಕೃಷಿ, ಆರೋಗ್ಯ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ಸಹಕಾರಿ ರಂಗದ ಕೊಡುಗೆಯಿದೆ. ನಮ್ಮ ಈ ಸಾಧನೆಗೆ ಸಿರಗುಪ್ಪ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರು, ಆಡಳಿತ ಸಿಬ್ಬಂದಿ ಬೆಂಬಲವಿದೆ. ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಸಹಕಾರ ಧುರೀಣರೂ ಕೈಜೋಡಿಸಿದ್ದರಿಂದ ಸಾಧನೆ ಮಾಡಲು ಸಾಧ್ಯವಾಗಿದೆ. | ಚೊಕ್ಕ ಬಸವನಗೌಡರು, ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕು, ಸಿರಗುಪ್ಪ

ಸಾಧನೆಗೆ ಕುಟುಂಬದ ಶಕ್ತಿ

ಚೊಕ್ಕ ಬಸವನಗೌಡರ ಜೀವನದ ಇದುವರೆಗಿನ ಸಾಧನೆಗೆ ಶಕ್ತಿಯಾಗಿ ನಿಂತವರು ಇವರ ಧರ್ಮಪತ್ನಿ ಗಿರಿಜಮ್ಮ. ಎರಡು ಹೆಣ್ಣು ಮತ್ತು ಎರಡು ಗಂಡುಮಕ್ಕಳ ತಂದೆಯಾಗಿ ಮಕ್ಕಳಿಗೆ ತಮ್ಮದೆ ರೀತಿಯಲ್ಲಿ ಕಾಯಕದ ತತ್ವದಡಿ ಬದುಕು ಕಟ್ಟಿಕೊಳ್ಳುವಂಥ ಮಾರ್ಗದರ್ಶನ ಮಾಡಿರುವ ಪರಿಣಾಮ ಇವರ ಮಕ್ಕಳಾದ ಚೊಕ್ಕ ಮಂಜುನಾಥಗೌಡ, ಚೊಕ್ಕ ಪಾಲಾಕ್ಷಿಗೌಡರು ತಮ್ಮ ತಂದೆ ಸಾಗಿದ ಹಾದಿಯಲ್ಲಿಯೇ ಕೃಷಿ ಮತ್ತು ಸಹಕಾರಿ ರಂಗದಲ್ಲಿ ಸಮನ್ವಯ ಸಾಧಿಸುತ್ತಾ ತಮ್ಮ ತಂದೆ ಸಾಧನೆಗೆ ಶಕ್ತಿಯಾಗಿ ನಿಂತಿದ್ದಾರೆ. ಶರಣರ ಕಾಯಕ ತತ್ವ, ಸಮಾಜದ ಪರ ಚಿಂತನೆ, ಪರಸ್ಪರ ಸಹಕಾರದಿಂದ ಸಮಾಜದಲ್ಲಿ ಎಲ್ಲರ ಪ್ರಗತಿ ಸಾಧ್ಯ ಎಂಬ ಧ್ಯೇಯದೊಂದಿಗೆ ಚೊಕ್ಕ ಬಸವನ ಗೌಡರ ಬದುಕೂ ಅತ್ಯಂತ ಚೊಕ್ಕವಾಗಿದೆ.

ಸಹಕಾರವೇ ಜೀವನ

1970-80ರ ದಶಕದಲ್ಲಿ ಶಿಕ್ಷಕರು ಸಹ ಸಹಕಾರಿ ಕ್ಷೇತ್ರದ ನಿರ್ದೇಶಕರಾಗಲು ಅವಕಾಶವಿತ್ತು. ಕೆ.ಬೆಳಗಲ್ ಗ್ರಾಮದಲ್ಲಿ ಶಿಕ್ಷಕರಾಗಿ ಹಾಗೂ ಪಿಎಲ್‌ಡಿ ಬ್ಯಾಂಕಿನ ನಿರ್ದೇಶಕರಾಗಿದ್ದ ಎಸ್. ವೆಂಕೋಬರಾವ್ ಅವರು ಚೊಕ್ಕ ಬಸವನಗೌಡರ ಗುರುಗಳು. ಇವರು ಗೌಡರನ್ನು 1974ರಲ್ಲಿ ಕೆ.ಬೆಳಗಲ್ ಗ್ರಾಮದಿಂದ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆ ಮಾಡಿದರು. ತಮ್ಮ 22ನೇ ವಯಸ್ಸಿನಲ್ಲಿಯೇ ಸಹಕಾರಿ ಕ್ಷೇತ್ರವನ್ನು ಪ್ರವೇಶಿಸಿದ ಚೊಕ್ಕ ಬಸವನಗೌಡರು ತಮ್ಮ 75ನೇ ವರ್ಷದಲ್ಲಿಯೂ ನಿರಂತರ ಸಾಧನೆ ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ. ಈ ಮೂಲಕ ಸಹಕಾರವೇ ಜೀವನ ಎಂಬ ನಿಯಮದಲ್ಲಿ ಬಾಳುತ್ತಿದ್ದಾರೆ. ಹೀಗೆ ಸಹಕಾರ ಕ್ಷೇತ್ರದಲ್ಲಿ ನಿರ್ದೇಶಕರಾಗಿ ಸೇವೆ ಆರಂಭಿಸಿದ ಗೌಡರು ಆನಂತರ 1993ರಲ್ಲಿ ಸಿರಗುಪ್ಪದ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದರು. 2010ರಲ್ಲಿ ಗೌಡರು ಕಾಸ್ಕಾರ್ಡ್ ಬ್ಯಾಂಕಿನ ರಾಜ್ಯಾಧ್ಯಕ್ಷರಾದಾಗ ಮತ್ತು ಆನಂತರ ಅಪೆಕ್ಸೃ್ ಬ್ಯಾಂಕಿನ ರಾಜ್ಯ ಉಪಾಧ್ಯಕ್ಷರಾಗಿದ್ದ ಅವಧಿ ಹೊರತುಪಡಿಸಿ ಉಳಿದ ಅವಧಿಗೆ ಸಿರಗುಪ್ಪದ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸುತ್ತಾ ಸಾಗಿದ್ದಾರೆ. ಬ್ಯಾಂಕಿನ ಸರ್ವಾಂಗೀಣ ಪ್ರಗತಿ ಮತ್ತು ರಾಜ್ಯ ಮಟ್ಟದಲ್ಲಿ ಬ್ಯಾಂಕಿನ ಹೆಸರು ಕಾಣುವಂತೆ ಸಾಧನೆಗೆ ಕಾರಣರಾಗಿದ್ದಾರೆ.

ಪ್ರಶಸ್ತಿ ಪುರಸ್ಕಾರ

ಚೊಕ್ಕ ಬಸವನಗೌಡರ ಅಧ್ಯಕ್ಷತೆಯಲ್ಲಿ ಸಿರಗುಪ್ಪದ ಪಿಎಲ್‌ಡಿ ಬ್ಯಾಂಕು ಮಾಡಿದ ಸಾಧನೆಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದೆ. 2007-08ರಲ್ಲಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, 2009-10ರಲ್ಲಿ ಗುಲ್ಬರ್ಗಾ ವಿಭಾಗದ ಅತ್ಯುತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿ, 2010-11ರಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯಕ್ಕೆ ಪ್ರಥಮ ಸ್ಥಾನದ ಗೌರವ, ಸಾಲ ವಸೂಲಾತಿಯಲ್ಲಿ ಅದೇ ವರ್ಷ ಜಿಲ್ಲಾ ಮಟ್ಟದ ಉತ್ತಮ ಬ್ಯಾಂಕ್‌ನ ಗೌರವ, ಅದೇ ವರ್ಷ ಅಖಿಲ ಭಾರತ ಮಟ್ಟದಲ್ಲಿ ದಕ್ಷಸೇವಾ ಪ್ರಶಸ್ತಿ, 2011-12ರಲ್ಲಿ ರಾಜ್ಯಮಟ್ಟದ ಸರ್ವಾಂಗೀಣ ಪ್ರಶಸ್ತಿ, ಅದೇ ರೀತಿ 2020 ರಿಂದ 2023ರ ವರೆಗೂ ಸರ್ವಾಂಗೀಣ ಅಭಿವೃದ್ಧಿ ಪ್ರಶಸ್ತಿ ಬ್ಯಾಂಕ್ ಪಾಲಾಗಿವೆ. ಬ್ಯಾಂಕನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮೂಲಕ ಸಾಧನೆ ಮಾಡಿದ ಚೊಕ್ಕ ಬಸವನಗೌಡರನ್ನು ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. 2007ರಲ್ಲಿ ಶ್ರೇಷ್ಠ ಸಹಕಾರಿ, 2009ರಲ್ಲಿ ಸಹಕಾರಿ ರತ್ನ ಪ್ರಶಸ್ತಿ ಗೌಡರ ಸಾಧನೆಗೆ ಮೆರುಗು ತಂದಿವೆ. 2025ರ ಮಾ.4ಕ್ಕೆ ಚೊಕ್ಕ ಬಸವನಗೌಡರು 75ನೇ ವಸಂತಕ್ಕೆ ಕಾಲಿರಿಸಿದ್ದು, 50 ವರ್ಷಗಳ ಕಾಲ ಸಹಕಾರ ರಂಗದಲ್ಲಿ ಬದುಕು ಸವೆಸಿದ್ದಾರೆ. ಸಹಕಾರತತ್ವದಲ್ಲಿಯೇ ಎಲ್ಲರ ಜೀವನ ಸುಧಾರಣೆಗೆ ದುಡಿದಿದ್ದಾರೆ. ಕೆ.ಬೆಳಗಲ್ ನಂಥ ಹಳ್ಳಿಯಿಂದ ರಾಜ್ಯಮಟ್ಟದಲ್ಲಿ ಸಹಕಾರಿ ರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.

ಕೋವಿಡ್‌ನಲ್ಲೂ ನೆರವು

ವಿಶ್ವವನ್ನು ಕಾಡಿದ ಮಹಾಮಾರಿ ಕೋವಿಡ್ ವೇಳೆಯೂ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾದ ಚೊಕ್ಕ ಬಸವನಗೌಡರು ಸಿರಗುಪ್ಪ ತಾಲೂಕಿನಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಒದಗಿಸಲು ಆಶಾ ಕಾರ್ಯಕರ್ತೆಯರ ನೆರವಿಗೆ ನಿಂತರು. ತಾಲೂಕಿನ 267 ಆಶಾ ಕಾರ್ಯಕರ್ತೆಯರಿಗೆ ತಲಾ ಮೂರು ಸಾವಿರ ರೂ.ನಂತೆ ಪ್ರೋತ್ಸಾಹ ಧನ ನೀಡಿ ಶಕ್ತಿ ತುಂಬಿ ಸಮಾಜದ ಪರ ತಮ್ಮ ಕಳಕಳಿ ಪ್ರದರ್ಶಿಸಿದ್ದು ವಿಶೇಷ. ಆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಸಿಬ್ಬಂದಿಗೆ ಆತ್ಸಸ್ಥೈರ್ಯ ಹೆಚ್ಚಿಸುವ ಕಾರ್ಯ ಮಾಡಿದ್ದು ಸಾಧನೆ. ತಾಲೂಕಿನ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಹಾಗೂ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿಯೂ ಗೌಡರದು ಎತ್ತಿದಕೈ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 50 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂ.ಗಳನ್ನು ಪ್ರತಿ ವರ್ಷ ವಿತರಿಸುವ ಮೂಲಕ ಬ್ಯಾಂಕು ಸಮಾಜದಪರ ಎಂದು ಸಾರಿದ್ದು ಗೌಡರ ದೂರದೃಷ್ಟಿಗೆ ಸಾಕ್ಷಿ. ಬಳ್ಳಾರಿ ಜಿಲ್ಲೆಯಲ್ಲಿ ಹೊಸದಾಗಿ ತಾಲೂಕುಗಳ ರಚನೆಯಾದಾಗ ಗೌಡರು ಕುರುಗೋಡು ಪಿಕಾರ್ಡ್ ಬ್ಯಾಂಕು ಸ್ಥಾಪನೆಗೆ ಕಾರಣರಾಗುತ್ತಾರೆ. ಅಷ್ಟೇ ಅಲ್ಲ ಗೌಡರು ಸಹಕಾರಿ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯಿಂದಾಗಿ ಸಿರಗುಪ್ಪ ಗೃಪ ನಿರ್ಮಾಣ ಸಹಕಾರ ಸಂಘ, ಸಿರಗುಪ್ಪ ಏತ ನೀರಾವರಿ ಸಹಕಾರ ಸಂಘ, ಸಿರಗುಪ್ಪ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ಸೇರಿದಂತೆ ಸಹಕಾರ ರಂಗದಲ್ಲಿ ಹತ್ತು ಹಲವು ರೀತಿಯಲ್ಲಿ ಸಂಘಗಳನ್ನು ಸ್ಥಾಪಿಸಿ ಪ್ರಗತಿಗೆ ದಾರಿಯಾಗಿರುವುದು ವಿಶೇಷ.

ನೀರಾವರಿಗೂ ಜೈ

ಸಿರಗುಪ್ಪ ತಾಲೂಕು ತುಂಗಭದ್ರಾ ಯೋಜನೆ ಅಡಿ ನೀರಾವರಿಯಾಗಿದೆ. ಆದರೆ ಬಹುತೇಕ ಗ್ರಾಮಗಳ ರೈತರು ತಮ್ಮ ಹೊಲಗಳಿಗೆ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು ಮುಂದಾದಾಗ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಹಕಾರ ದೊರೆಯದೆ ಹೋದಾಗ ಚೊಕ್ಕ ಬಸವನಗೌಡರು ನಬಾರ್ಡ್ ಬ್ಯಾಂಕಿನ ಸಹಕಾರದಿಂದ ತಾಲೂಕಿನ 11 ಏತ ನೀರಾವರಿ ಯೋಜನೆಗಳ ಜಾರಿಗೆ ಕಾರಣರಾಗುತ್ತಾರೆಂಬುದು ವಿಶೇಷ. ಇದರಿಂದಾಗಿ ತಾಲೂಕಿನ 11020 ಎಕರೆ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಡುವ ಮೂಲಕ ರೈತರಿಗೆ ನೆಮ್ಮದಿಯ ಜೀವನ ಕರುಣಿಸಿದ ಕೀರ್ತಿ ಗೌಡರದು. ಸಿರಗುಪ್ಪ ಪಟ್ಟಣದ ಮಧ್ಯಭಾಗದಲ್ಲಿ ಪಿಎಲ್‌ಡಿ ಬ್ಯಾಂಕು ಸ್ವಂತ ಕಟ್ಟಡ ಹೊಂದಿದೆ. ಇದೇ ಕಟ್ಟಡದಲ್ಲಿ ಒಂಬತ್ತು ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಸಮುದಾಯ ಭವನ, ಲಿಫ್ಟ್ೃ ಸೌಲಭ್ಯ ಕಲ್ಪಿಸಲಾಗಿದೆ. ಬ್ಯಾಂಕು ತನ್ನದೇ ಗೋದಾಮು ಹೊಂದಿದೆ. ಬ್ಯಾಂಕಿನ ಮೂಲಕವೇ ಅಲ್ಲಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿ ಜನತೆಗೆ ಕಡಿಮೆ ಬೆಲೆಗೆ ನೀರೊದಗಿಸಿ ದೂರದೃಷ್ಟಿಯನ್ನು ಗೌಡರು ಮೆರೆದಿದ್ದಾರೆ. ಇ-ಸ್ಟಾೃಂಪ್ ವಿತರಣೆ ವ್ಯವಸ್ಥೆ ಆರಂಭಿಸಿದ ಮೊದಲ ಬ್ಯಾಂಕ್, 2009ರ ಪ್ರವಾಹದಲ್ಲಿ ಅನೇಕ ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದಾಗ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ ಚೊಕ್ಕ ಬಸವನಗೌಡರು ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಸಿರಗುಪ್ಪ ತಾಲೂಕಿನ ಸಂತ್ರಸ್ತರಿಗೆ ನೆರವಾಗಲು ಕಾರಣರಾದರು. ಕೇವಲ ಸಿರಗುಪ್ಪ ಅಷ್ಟೇ ಅಲ್ಲ, ದೂರದ ಬೆಳಗಾವಿಯಲ್ಲಿ ಉಂಟಾದ ಪರಿಹಾರ ಪರಿಸ್ಥಿತಿ ವೇಳೆಯೂ ಗೌಡರ ಮನ ಮಿಡಿದಿದ್ದು 10 ಲಕ್ಷ ರೂ.ಗಳನ್ನು ದೇಣಿಗೆಯಾಗಿ ಕೊಡಮಾಡುವ ಮೂಲಕ ಸಾಮಾಜಿಕ ಕಾಳಜಿ ಪ್ರದರ್ಶಿಸಿದ್ದು ಗಮನಾರ್ಹ.

ಬ್ಯಾಂಕ್ ಸಾಧನೆ ಏರುಮುಖ

ಸಿರಗುಪ್ಪದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಸುದೀರ್ಘ 50 ವರ್ಷ ಸೇವೆ ಸಲ್ಲಿಸಿರುವ ಚೊಕ್ಕ ಬಸವನಗೌಡರ ಸಾಧನೆ ಒಂದೆರಡಲ್ಲ. ಬ್ಯಾಂಕು ಸಂಪೂರ್ಣ ಗಣಕೀಕೃತಕಗೊಂಡಿರುವುದು, ಹತ್ತು ಹಲವು ಪ್ರಶಸ್ತಿಗಳು ಬ್ಯಾಂಕಿಗೆ ಬಂದಿರುವುದು, 2023ರ ಅಂತ್ಯದವರೆಗೆ 4037 ಗ್ರಾಹಕರು, 259.08 ಲಕ್ಷ ರೂಪಾಯಿಗಳ ಶೇರು ಬಂಡವಾಳವನ್ನು ಬ್ಯಾಂಕು ಹೊಂದಲು ಗೌಡರ ಬದ್ಧತೆ, ಪ್ರಗತಿ ಪರ ಆಲೋಚನೆಯೇ ಮೂಲ ಕಾರಣ. ಸಿರಗುಪ್ಪ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ 50 ವರ್ಷಕ್ಕೂ ಅಧಿಕ ಸಮಯ, ಅಧ್ಯಕ್ಷರಾಗಿ 30 ವರ್ಷ ಸೇವೆಯಷ್ಟೇ ಅಲ್ಲದೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಏಳು ವರ್ಷ, ಬಳ್ಳಾರಿ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ 28 ವರ್ಷ, 2019ರಲ್ಲಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು ಗೌಡರ ಸಾಧನೆ ಹಿರಿಮೆ ಗರಿಮೆಯೂ ಹೌದು. ಸಿರಗುಪ್ಪದಲ್ಲಿ ಚೊಕ್ಕ ಮನೆತನ ಅಧ್ಯಾತ್ಮಿಕ ಚಿಂತನೆ ಆಚರಣೆಗೂ ಹೆಸರುವಾಸಿ. ಗೌಡರು ದೈವಭಕ್ತರು. ಅಂತೆಯೇ ಕೆ.ಬೆಳಗಲ್ ಗ್ರಾಮ ಹಾಗೂ ಸಿರಗುಪ್ಪ ಸೇರಿದಂತೆ ವಿವಿಧೆಡೆ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಸಹಕಾರ, ದೇವಸ್ಥಾನಗಳ ಜೀರ್ಣೋದ್ಧಾರದ ಕೆಲಸ ಮಾಡಿದ್ದಾರೆ.

ನಮ್ಮ ಮನೆಯವರ ಸಾಧನೆ ಖಂಡಿತವಾಗಿಯೂ ನನಗೆ ಮತ್ತು ಇಡೀ ಕುಟುಂಬಕ್ಕೆ ಹೆಮ್ಮೆ ತರುವ ವಿಚಾರ. ಎಲ್ಲರಿಗೂ ಒಳ್ಳೆಯದು ಮಾಡುವಂಥ ಅವರ ಗುಣ ಬಹಳ ಖುಷಿ ಮೂಡಿಸುತ್ತದೆ. | ಶ್ರೀಮತಿ ಚೊಕ್ಕ ಗಿರಿಜಮ್ಮ ಬಸವನಗೌಡರ ಪತ್ನಿ ಕೃಷಿಕರಾಗಿ ದುಡಿಯಲಾರಂಭಿಸಿದ ಚೊಕ್ಕ ಬಸವನಗೌಡರು ಸಹಕಾರ ರಂಗದಲ್ಲಿ ಅತೀ ದೊಡ್ಡ ಸಾಧನೆ ಮಾಡಿದ್ದಾರೆ. ಸಿರಗುಪ್ಪ ತಾಲೂಕು ಸೇರಿದಂತೆ ರಾಜ್ಯಮಟ್ಟದಲ್ಲಿ ಸಹಕಾರ ರಂಗದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸಹಕಾರ ಕ್ಷೇತ್ರದ ಮೂಲಕ ಸಮಾಜದ ಪ್ರಗತಿ ಸಾಧ್ಯ ಎಂದು ನಮ್ಮ ಹಿರಿಯ ಸಹೋದರ ಚೊಕ್ಕ ಬಸವನಗೌಡರು ತೋರಿಸಿದ್ದಾರೆ. | ಚೊಕ್ಕ ಹನುಮಂತಗೌಡ ನಿವೃತ್ತ ಶಿಕ್ಷಕರು ಹಾಗೂ ಸಹೋದರರು. ಸಿರಗುಪ್ಪ. ತಂದೆಯವರು ಸಹಕಾರ ಕ್ಷೇತ್ರದಲ್ಲಿ ಮಾಡಿದ ಅಪ್ರತಿಮ ಸಾಧನೆ ನಮಗೆ ಹೆಮ್ಮೆ. ಅವರ ಪುತ್ರ ಎಂದು ಕರೆಯಿಸಿಕೊಳ್ಳಲು ಬಹಳ ಖುಷಿಯಾಗುತ್ತದೆ. ಚೊಕ್ಕ ಬಸವನಗೌಡರು ಸಹಕಾರ ರಂಗದಲ್ಲಿ ಮಾಡಿದ ಸಾಧನೆ ಅಪ್ರತಿಮ. ಅವರು ಇನ್ನೂ ಉನ್ನತ ಸಾಧನೆ ಮಾಡಲು ಸಂಪೂರ್ಣ ಸಹಕಾರ ನೀಡುತ್ತೇವೆ. | ಚೊಕ್ಕ ಪಾಲಾಕ್ಷಗೌಡ ಚೊಕ್ಕ ಬಸವನಗೌಡರ ಪುತ್ರ, ಸಿರಗುಪ್ಪ. ಚೊಕ್ಕ ಬಸವನಗೌಡರನ್ನು ಸಹಕಾರಿ ಕ್ಷೇತ್ರದ ಆಧುನಿಕ ಕಾಲದ ದಾರ್ಶನಿಕ, ಸಂತರು ಎಂದೇ ಕರೆಯಬಯಸುವೆ. 50 ವರ್ಷ ಅವರು ಸಹಕಾರ ರಂಗದಲ್ಲಿ ಮಾಡಿದ ಸಾಧನೆ ಅಪಾರ. ದಕ್ಷ ಹಾಗೂ ಪ್ರಾಮಾಣಿಕ ಆಡಳಿತಗಾರರೂ ಆಗಿದ್ದಾರೆ. ಅನೇಕ ದೂರದ ಆಲೋಚನೆಯನ್ನು ಚೊಕ್ಕ ಬಸವನಗೌಡರು ಹೊಂದಿದ್ದಾರೆ. | ತಿಪ್ಪಣ್ಣ ಬನಸೋಡೆ ವ್ಯವಸ್ಥಾಪಕರು, ಪಿಎಲ್‌ಡಿ ಬ್ಯಾಂಕ್, ಸಿರಗುಪ್ಪ. ರೈತರು ಸೇರಿ ಸಮಾಜದ ಎಲ್ಲ ವರ್ಗದ ಜನರಿಗೆ ಸಹಕಾರ ಕ್ಷೇತ್ರದ ನೆರವು ದೊರಕಿಸುವ ಕೆಲಸ ಆಗಿದೆ. ಇದಕ್ಕೆ ಮುಖ್ಯವಾಗಿ ಬ್ಯಾಂಕಿನ ಅಧ್ಯಕ್ಷರಾಗಿರುವ ಚೊಕ್ಕ ಬಸವನಗೌಡರೇ ಕಾರಣ. ಅವರಿಂದಾಗಿಯೇ ಬ್ಯಾಂಕು ದೊಡ್ಡ ಆರ್ಥಿಕ ಸಂಸ್ಥೆಯಾಗಿ ಬೆಳೆದಿದೆ. | ಜಡೇಸ್ವಾಮಿ ಹೆರಕಲ್ ನಿರ್ದೇಶಕರು, ಪಿಎಲ್‌ಡಿ ಬ್ಯಾಂಕ್ ಸಿರಗುಪ್ಪ. ಚೊಕ್ಕ ಬಸವನಗೌಡರು ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಾರ ಸಂಘದಿಂದ ಮೂಲಕ ಶಿಕ್ಷಕರಿಗೆ ವೇತನ ಪಾವತಿಸುವ ಮೂಲಕ ಹಿಂದೊಮ್ಮೆ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು. ಅದೇ ರೀತಿ ರೈತರಿಗೂ ಸಹಕಾರ ರಂಗದಿಂದ ಹೇಗೆ ಆರ್ಥಿಕವಾಗಿ ನೆರವು ನೀಡಿ ಅವರ ಏಳಿಗೆಗೆ ಕಾರಣರಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. | ಡಾ.ದಿವಾಕರ ನಾರಾಯಣ ಸಾಹಿತಿ ಮತ್ತು ಶಿಕ್ಷಕರು, ಹೊಸಪೇಟೆ ನಮ್ಮ ತಾತನವರ ಸಾಧನೆ ಬಗ್ಗೆ ಖುಷಿಯಿದೆ. ಅವರು ಸದಾ ಜನಪರ ಕಾಳಜಿ ತೋರುತ್ತಾ ಬಡವರು ಹಾಗೂ ರೈತರ ಪರವಾಗಿದ್ದು ನೆರವಿಗೆ ಧಾವಿಸುವುದು ನಮಗೆಲ್ಲ ಅನುಕರಣೀಯ. | ಚೊಕ್ಕ ಕಿರಣ್ ಗೌಡ ಮೊಮ್ಮಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net