ಸಾಧಕರಿಗೆ ವಿಜಯರತ್ನ ಪ್ರಶಸ್ತಿ ಪ್ರದಾನ: ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಂದ ಪುರಸ್ಕೃತರಿಗೆ ಸನ್ಮಾನ! Vijayaratna Award

Vijayaratna Award
Published on

Vijayaratna Award : ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹಿರಿದಾದ ಸಾಧನೆ ಮಾಡಿ ಜನಮಾನಸದಲ್ಲಿ ನೆಲೆಗೊಂಡಿರುವ 27 ಸಾಧಕರನ್ನು ಗುರುತಿಸಿ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಪ್ರತಿಷ್ಠಿತ ‘ವಿಜಯ ರತ್ನ -2025’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ನಗರದ ಖಾಸಗಿ ಹೋಟೆಲ್​ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಅದ್ದೂರಿ ಸಮಾರಂಭದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ, ಫಲಕ ನೀಡಿ ಸನ್ಮಾನಿಸಲಾಯಿತು. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಬಿಎಂಟಿಎಫ್ ಎಡಿಜಿಪಿ ಡಿ. ರೂಪಾ ಮೌದ್ಗಿಲ್ ಸಾಧಕರ ಸಾಧನೆಯನ್ನು ಮೆಚ್ಚಿ ಪುರಸ್ಕರಿಸಿದರು. ಮುಂದೆಯೂ ಸಮಾಜಮುಖಿ ಕಾರ್ಯವನ್ನು ಕೈಗೊಳ್ಳುವಂತೆ ಸಾಧಕರಿಗೆ ಕಿವಿಮಾತು ಹೇಳಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಪುರಸ್ಕೃತರ ಸಾಧನೆಯನ್ನು ತಿಳಿಸುವ ಕಿರುಚಿತ್ರ ಹಾಗೂ ಮಾಹಿತಿ ಇನ್ನಿತರರಿಗೂ ಪ್ರೇರಣೆ ನೀಡುವಂತಿತ್ತು.

Vijayaratna 2

ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ರಾಜಕೀಯ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹತ್ತು ಹಲವು ವರ್ಷಗಳಿಂದ ಸಾಧನೆ ಮಾಡಿರುವ ಈ ಮಹನೀಯರನ್ನು ವಿಜಯವಾಣಿಯು ಗೌರವಿಸಿತು. ಸಮಾರಂಭದಲ್ಲಿ ಪ್ರತಿಯೊಬ್ಬ ಸಾಧಕರ ಕಿರು ಪರಿಚಯ ಒಳಗೊಂಡ ದೃಶ್ಯ ಪ್ರದರ್ಶಿಸುವ ಮೂಲಕ ಅವರ ಸಾಧನೆಯ ಹಾದಿಯನ್ನು ಪ್ರತಿಬಿಂಬಿಸಲಾಯಿತು.

ಪ್ರಶಸ್ತಿ ಸಮಾರಂಭದಲ್ಲಿ ಪುರಸ್ಕೃತರ ಕುಟುಂಬ ವರ್ಗ ಹಾಗೂ ಹಿತೈಷಿಗಳು ‘ವಿಜಯವಾಣಿ’ ಆಯೋಜಿಸಿದ್ದ ಸಮಾರಂಭವನ್ನು ಅವಿಸ್ಮರಣೀಯ ಎಂದು ಬಣ್ಣಿಸಿದರು. ಸಾಧನೆ ಮಾಡಿದ್ದನ್ನು ಗುರುತಿಸಿ ಮುಂದೆಯೂ ಇನ್ನಷ್ಟು ಕೆಲಸ ಮಾಡುವ ಹೊಣೆಗಾರಿಕೆಯ ಪಾಠ ತಿಳಿಸಿಕೊಡಲಾಯಿತು ಎಂಬುದಾಗಿ ಪುರಸ್ಕೃತರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಉದ್ಯಮಿ, ಮಾಜಿ ಎಂಎಲ್​ಸಿ ದಯಾನಂದ ರೆಡ್ಡಿ, ವಿಜಯಾನಂದ ಟ್ರಾವೆಲ್ಸ್ ಪ್ರೈ. ಲಿ.ನ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ, ವಿಆರ್​ಎಲ್ ಮೀಡಿಯಾ ಪ್ರೈ. ಲಿ.ನ ಉಪಾಧ್ಯಕ್ಷ ಅರುಣ್ ಕರಡಿ, ವಿಜಯವಾಣಿ ಸಂಪಾದಕ ಕೆ.ಎನ್.ಚನ್ನೇಗೌಡ, ವಿಜಯವಾಣಿ ಡಿಜಿಟಲ್ ವಿಭಾಗದ ಸಂಪಾದಕ ಸಿದ್ದು ಕಾಳೋಜಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ರಂಜಿಸಿದ ಸಂಗೀತ ಗಾಯನ

ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಸರಿಗಮಪ ಖ್ಯಾತಿಯ ವರ್ಣ ಚವಾಣ್ ಹಾಗೂ ಅವರ ತಂಡವು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ವರ್ಣ ಅವರ ಸಂಗೀತ ಸುಧೆಗೆ ಪುರಸ್ಕೃತರು ಹಾಗೂ ಇನ್ನಿತರ ವೀಕ್ಷಕರು ತಲೆದೂಗಿದರು.

ಸಾಧಕರನ್ನು ಸನ್ಮಾನಿಸಿದ್ದು ದೊಡ್ಡ ಕೆಲಸ ಸಚಿವ ಶ್ಲಾಘನೆ

ರಾಜ್ಯದ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಅಂತಹವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಶ್ಲಾಘನೀಯ. ಸಮಾಜಮುಖಿ ಕಾರ್ಯ ಮಾಡಿದವರನ್ನು ಹುಡುಕಾಡಿ ಸಾಧಕರನ್ನು ನಾಡಿಗೆ ಪರಿಚಯಿಸುವ ಕೆಲಸ ಪತ್ರಿಕೆ ನಡೆಸುವುದಕ್ಕಿಂತ ದೊಡ್ಡ ಕೆಲಸ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಹಲವು ಸಾಧಕರು ತಮ್ಮದೇ ಆದ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದಲ್ಲದೆ ಹೆಚ್ಚಿನ ಮಂದಿಗೆ ಉದ್ಯೋಗ ನೀಡಿ ಗಮನ ಸೆಳೆದಿದ್ದಾರೆ. ವಿವಿಧ ಕ್ಷೇತ್ರದಲ್ಲಿ ದುಡಿದಿರುವ ಎಲ್ಲ ಪುರಸ್ಕೃತರು ಅಭಿನಂದನೀಯ ಕಾರ್ಯ ಮಾಡಿದ್ದಾರೆ. ಎಲೆಮರೆಯಲ್ಲಿ ಇದ್ದ ಇಂತಹ ಸಾಧಕರನ್ನು ಗುರುತಿಸಿರುವ ವಿಜಯವಾಣಿ ಬಳಗವು ಈ ಕಾರ್ಯವನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ವಿಆರ್​ಎಲ್ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಪತ್ರಿಕೆ ಹಾಗೂ ಸಾರಿಗೆ ಕ್ಷೇತ್ರಕ್ಕೆ ಸೀಮಿತ ಆಗದೆ ಇತರ ವಲಯಗಳಲ್ಲಿ ವಿಜಯ ಸಂಕೇಶ್ವರ ಅವರು ತಮ್ಮ ಜೀವನದುದ್ದಕ್ಕೂ ದೊಡ್ಡ ಸಾಧನೆ ಮಾಡಿದ್ದಾರೆ. ಸಂಸದರಾಗಿಯೂ ಜನಮನ್ನಣೆ ಗಳಿಸಿದ್ದಾರೆ. ಇಷ್ಟು ಬೃಹತ್ ಸಂಸ್ಥೆಯನ್ನು ನಿರ್ವಹಿಸುವುದು ಕಷ್ಟ ಎಂಬುದು ಗೊತ್ತು. ಆದರೂ, ಸುದೀರ್ಘ ಅವಧಿಯಲ್ಲಿ ಸಂಸ್ಥೆಯನ್ನು ಬೆಳೆಸಿರುವುದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಸಾಧಕರ ಸಾಧನೆ ಮೆಚ್ಚಿದ ರೂಪಾ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ವಿಜಯ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದು, ಈ ಸಾಧಕರನ್ನು ನೋಡಿದಾಗ ಇವರ ಮುಂದೆ ನಮ್ಮ ಸಾಧನೆ ತುಂಬಾ ಕಡಿಮೆ ಎಂಬ ಭಾವನೆ ಮೂಡುತ್ತದೆ ಎಂದು ಬಿಎಂಟಿಎಫ್ ಎಡಿಜಿಪಿ ಡಿ.ರೂಪಾ ಮೌದ್ಗಿಲ್ ಹೇಳಿದರು. ಮಹಿಳಾ ಮೀಸಲಾತಿ ಇರಲಿ, ಬಿಡಲಿ ನಾವು ನಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು. ಮಹಿಳೆಯರು ತಾವು ಮಾಡಿರುವ ಕೆಲಸ, ಕಾರ್ಯದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಒಂದು ರೀತಿ ಸಂಕುಚಿತ ಮನೋಭಾವ ಇದೆ. ತಮ್ಮ ಶ್ರಮ, ಸಾಮರ್ಥ್ಯ ಮತ್ತು ಸಾಧನೆ ಬಗ್ಗೆ ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ನನ್ನ ಕೆಲಸ ಕಾರ್ಯಕ್ಕೆ ಸಾರ್ವಜನಿಕರು ಬೆಂಬಲ ನೀಡುತ್ತಿದ್ದಾರೆ. ಇದರಿಂದ ನಾನು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ. ನಾವು ಏನೇ ಸಾಧನೆ ಮಾಡಿದರೂ ನೈತಿಕತೆ ಚೌಕಟ್ಟಿನಲ್ಲಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಓದುಗರ ಬೆಂಬಲದಿಂದ ಪತ್ರಿಕೆ ನಂ.1

ವಿಜಯವಾಣಿ ಪತ್ರಿಕೆಯು ನಂಬರ್ ಒನ್ ಆಗಲು ಓದುಗರ ಬೆಂಬಲವೇ ಕಾರಣ. ಪತ್ರಿಕೆಯು ಸಮಾಜದೊಂದಿಗೆ ಹೆಜ್ಜೆ ಹಾಕಲು ಸಾಧಕರು ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ‘ವಿಜಯ ರತ್ನ ಪ್ರಶಸ್ತಿ’ ನೀಡಿ ಗೌರವಿಸುವ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ತಿಳಿಸಿದರು. ಝೀರೋದಿಂದ ಹೀರೊ ಆಗಿರುವಂತಹ ನಮ್ಮ ತಂದೆ ಡಾ. ವಿಜಯ ಸಂಕೇಶ್ವರ ಅವರು ಎಲ್ಲರಿಗೂ ಚಿರಪರಿಚಿತರು. 1976ರಲ್ಲಿ ಗದಗದಿಂದ ಕೇವಲ ಒಂದು ಟ್ರಕ್​ನಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಪ್ರಸ್ತುತ ವಿಆರ್​ಎಲ್ ಭಾರತದ ನಂಬರ್ ಒನ್ ಲಾಜಿಸ್ಟಿಕ್ ಕಂಪನಿಯಾಗಿದೆ. 6 ಸಾವಿರಕ್ಕೂ ಹೆಚ್ಚು ಟ್ರಕ್​ಗಳು, 1200ಕ್ಕೂ ಹೆಚ್ಚು ಬ್ರಾ್ಯಂಚ್ ನೆಟ್​ವರ್ಕ್ ಮತ್ತು 25 ಸಾವಿರ ನೌಕರರು ಇದ್ದಾರೆ. ವಿಆರ್​ಎಲ್ ಲಾಜಿಸ್ಟಿಕ್ಸ್, ವಿಆರ್​ಎಲ್ ಟ್ರಾವೆಲ್ಸ್ ಮತ್ತು ವಿಆರ್​ಎಲ್ ಮೀಡಿಯಾ ಈ ಮೂರರ ನಡುವೆ ಉತ್ತಮ ಸಮನ್ವಯ ಇದೆ. ನಮ್ಮ ನೌಕರರು ಸಮಯ ನೋಡಿ ಎಂದಿಗೂ ಕೆಲಸ ಮಾಡಿಲ್ಲ. ಇದು ನಮ್ಮ ಸಂಸ್ಥೆ ಎಂದೇ ಭಾವಿಸಿ ನಿಷ್ಠೆಯಿಂದ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

Vijayaratna 1

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡುವ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಪತ್ರಿಕೆಯು ಯಾವ ರೀತಿ ಮುದ್ರಣವಾಗುತ್ತದೆ ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಬರುತ್ತದೆ. ಪ್ರಾಪರ್ಟಿ ಎಕ್ಸ್​ಪೋ, ಎಜುಕೇಷನ್ ಎಕ್ಸ್​ಪೋ ಸೇರಿ ವರ್ಷದ 365 ದಿನಗಳಲ್ಲೂ ಒಂದಲ್ಲಾ ಒಂದು ಕಾರ್ಯಕ್ರಮ ನಡೆಯುತ್ತಿರುತ್ತದೆ. ವಿಜಯೋತ್ಸವ ಹೆಸರಿನಲ್ಲಿ ಪ್ರತಿವರ್ಷ ಆ.2ರಿಂದ ದಸರಾವರೆಗೆ ಮತ್ತು ದಸರಾದಿಂದ ದೀಪಾವಳಿವರೆಗೆ ಓದುಗರಿಗೆ ಶಾಪಿಂಗ್ ಕೂಪನ್ಸ್ ಗಳನ್ನು ನೀಡಲಾಗುತ್ತದೆ. ಕಳೆದ 13 ವರ್ಷದಲ್ಲಿ 17 ಕಾರು ಮತ್ತು 17 ಬೈಕ್ ಸೇರಿ 35 ಸಾವಿರಕ್ಕೂ ಅಧಿಕ ಬಹುಮಾನಗಳನ್ನು ಓದುಗರಿಗೆ ನೀಡಿದ್ದೇವೆ. ಇದರಿಂದ ಪತ್ರಿಕೆ ಹಾಗೂ ಓದುಗರ ಮಧ್ಯೆ ಬಾಂಧವ್ಯ ವೃದ್ಧಿಗೆ ಅವಕಾಶವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಲೇಷ್ಯಾದಲ್ಲಿ ವಿಜಯರತ್ನ ಇಂಟರ್​ನ್ಯಾಷನಲ್ ಅವಾರ್ಡ್

ವಿಜಯರತ್ನದ ನಾಲ್ಕನೇ ಆವೃತ್ತಿಯಾದ ‘ವಿಜಯರತ್ನ ಇಂಟರ್​ನ್ಯಾಷನಲ್ ಅವಾರ್ಡ್’ ಕಾರ್ಯಕ್ರಮವು ಇದೇ ಆಗಸ್ಟ್​ನಲ್ಲಿ ಮಲೇಷ್ಯಾದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ವಿದೇಶದಲ್ಲಿ ಸಮಾರಂಭವನ್ನು ವಿಜಯವಾಣಿ ಪತ್ರಿಕೆ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ಡಾ. ಆನಂದ ಸಂಕೇಶ್ವರ ಪ್ರಕಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net