ಜಿ.ಎಸ್.ಬಸವರಾಜುರನ್ನ ದ್ವೇಷಿಸಿದ ಕಾಲವು ಇದೆ…

KNR_GSB
Published on

ತುಮಕೂರು: ಸಂಸದ ಜಿ.ಎಸ್.ಬಸವರಾಜು ಅವರನ್ನು ದ್ವೇಷಿಸಿದ ಕಾಲವು ಇದೆ. ಪ್ರೀತಿನು ಇದೆ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಅವರು ಇದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಸಿದ್ದಗಂಗಾಮಠದಲ್ಲಿ ಬುಧವಾರ ಮಾಜಿ ಸಚಿವ ವಿ.ಸೋಮಣ್ಣ, ಶೈಲಜಾ ಸೋಮಣ್ಣ ನಿರ್ಮಿಸಿರುವ ಗುರುಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಿವಕುಮಾರ ಶ್ರೀಗಳು ಕುರಿತ ‘ಶಿವಯೋಗಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಾಜಣ್ಣ, ಬಸವರಾಜು 50 ವರ್ಷಕ್ಕು ಹೆಚ್ಚು ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ. ನನ್ನ ರಾಜಕೀಯ ಬೆಳವಣಿಗೆಯಲ್ಲು ಅವರು, ಪರಮೇಶ್ವರ್ ಇದ್ದಾರೆ. ವಿಧಾನಪರಿಷತ್‌ಗೆ ಟಿಕೆಟ್ ಕೊಡಿಸುವಲ್ಲಿ ನನ್ನ ಗೆಲುವಿನಲ್ಲಿ ಇಬ್ಬರ ಪಾತ್ರವು ಇದೆ. ಇದಲ್ಲದೆ, ನನ್ನ ರಾಜಕೀಯ ತಿರುವು ಶ್ರೀ ಕ್ಷೇತ್ರದಿಂದ ಆಗಿದೆ. ಜಿಎಸ್‌ಬಿ ನನ್ನಂತಹ ಹಲವು ನಾಯಕರನ್ನು ಹುಟ್ಟಿಹಾಕಿದ್ದಾರೆ ಎಂದು ಸ್ಮರಿಸಿಕೊಂಡರು.

ಸೋಮಣ್ಣ ಯಾವತ್ತೂ ಸ್ನೇಹಿತರಿಗೆ ಮೋಸ ಮಾಡಿದವರಲ್ಲ. ಈಗ ಯಾರು ಯಾವ ಪಕ್ಷದಲ್ಲಿರುತ್ತಾರೆ ಗೊತ್ತಾಗುವುದೇ ಇಲ್ಲ. ಈಗೇನಿದ್ದರೂ ಅನುಕೂಲಸಿಂಧು ರಾಜಕಾರಣ. ಇವತ್ತು ಈ ಪಕ್ಷದಲ್ಲಿ ಟಿಕೆಟ್ ಕೊಡದಿದ್ದರೆ, ನಾಳೆ ಮತ್ತೊಂದು ಪಕ್ಷದಲ್ಲಿರುತ್ತಾರೆ. ಈಗ ತತ್ವ ಸಿದ್ಧಾಂತವನ್ನೆಲ್ಲಾ ಗಾಳಿಗೆ ತೂರಿಬಿಟ್ಟಿದ್ದಾರೆ. ರಾಜಕಾರಣಕ್ಕೆ ‘ಸುಳ್ಳೇ’ ಬಂಡವಾಳ. ನಾನು ಸ್ವಾರ್ಥಕ್ಕಾಗಿ ಯಾವತ್ತೂ ಸುಳ್ಳು ಹೇಳಿಲ್ಲ. ಬೇರೆಯವರಿಗೆ ಅನುಕೂಲಕ್ಕೆ ಸುಳ್ಳು ಹೇಳಿದ್ದೀನಿ. ಈವರೆಗೆ ರಾಜಕೀಯ ವಿಚಾರವಾಗಿ ಅವರು ಹೇಳಿದ್ದು ಅರ್ಧ ಸತ್ಯ, ಅರ್ಧ ಸುಳ್ಳು, ನಾನು ಆ ರೀತಿಯಲ್ಲ. ಪೂರ್ತಿ ಸತ್ಯ ಹೇಳಿಬಿಡುತ್ತೇನೆ. ಅದು ಅವರಿಗೆ ಮುಳುವಾಗಿಬಿಡುವ ಸಾಧ್ಯತೆ ಇರುತ್ತೆ ಎಂದು ರಾಜಣ್ಣ ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಸಿದ್ದಗಂಗಾಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಶ್ರೀ ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶ್ರೀಮಠದ ಉತ್ತರಾಧಿಕಾರಿ ಶಿವಸಿದ್ದೇಶ್ವರ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ , ನಿವೃತ್ತ ಪೊಲೀಸ್ ಅಧಿಕಾರಿ ಎಲ್.ರೇವಣಸಿದ್ದಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net