

ಚನ್ನಪಟ್ಟಣ: ಶಿಕ್ಷಣವೇ ನಿಜವಾದ ಸಂಪತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಬಡ ಮಕ್ಕಳಿಗೆ ಅನುಕೂಲವಾಗುವ ಉದ್ದೇಶದಿಂದ ಟ್ರಸ್ಟ್ ಮೂಲಕ ತಾಲೂಕಿನ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಬ್ಯಾಗ್ ವಿತರಿಸಲಾಗುತ್ತಿದೆ ಎಂದು ಮರೀಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಉದ್ಯಮಿ ಎಚ್.ಎಂ. ನಾಗೇಶ್ ತಿಳಿಸಿದರು.
ತಾಲೂಕಿನ ತಿಟ್ಟಮಾರನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮರೀಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಉಚಿತ ನೋಟ್ ಬುಕ್ ಹಾಗೂ ಶಾಲಾ ಬ್ಯಾಗ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಟ್ರಸ್ಟ್ ಮೂಲಕ ನಿರಂತರವಾಗಿ ಸಮಾಜ ಸೇವೆ ಮಾಡುವ ಉದ್ದೇಶ ಇದ್ದು, ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಉದ್ಯಮಿ ಮೈಲನಾಯ್ಕನ ಹೊಸಹಳ್ಳಿ ಜಗದೀಶ್ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯಬೇಕು ಹಾಗೂ ಶಾಲೆಗಳ ಅಭಿವೃದ್ಧಿ ಮಾಡಿ, ಉತ್ತಮ ಶಿಕ್ಷಣ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಚಿಂತನೆಗೆ ಎಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ ಎಂದರು.
ಕಾರ್ಯಕ್ರಮದ ಅಂಗವಾಗಿ ತಿಟ್ಟಮಾರನಹಳ್ಳಿ ಗ್ರಾಪಂ, ದಶವಾರ ಗ್ರಾಪಂ ಹಾಗೂ ನಾಗವಾರ ಗ್ರಾಪಂ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ವಿತರಿಸಲಾಯಿತು.
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿದ್ದೇಗೌಡ, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್, ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೇಶ್, ಮುಖಂಡ ಕರವೇ ಸಾಗರ್, ವೆಂಕಟೇಶ್, ಮುರಳಿ, ಅನಂತು, ಮುಖ್ಯ ಶಿಕ್ಷಕ ಕಾಂತರಾಜು ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.