ಬಾಲ್ಯವಿವಾಹ ತಡೆಗೆ ಗ್ರಾಮೀಣ ಜನರ ಸಹಕಾರ ಅಗತ್ಯ

ಹುಣಸೂರು ತಾಲೂಕು ಶಂಕರಪುರ ಹಾಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಜಾಬ್ ಕಾರ್ಡ್ ವಿತರಿಸಲಾಯಿತು. ಪಿಡಿಒ ಭವ್ಯಾ, ಐಇಸಿ ಸಂಯೋಜಕಿ ಪುಷ್ಪಾ, ಗ್ರಾ.ಪಂ. ಸಿಬ್ಬಂದಿ ಇತರರಿದ್ದಾರೆ.
ಹುಣಸೂರು ತಾಲೂಕು ಶಂಕರಪುರ ಹಾಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಜಾಬ್ ಕಾರ್ಡ್ ವಿತರಿಸಲಾಯಿತು. ಪಿಡಿಒ ಭವ್ಯಾ, ಐಇಸಿ ಸಂಯೋಜಕಿ ಪುಷ್ಪಾ, ಗ್ರಾ.ಪಂ. ಸಿಬ್ಬಂದಿ ಇತರರಿದ್ದಾರೆ.
Published on

ಹುಣಸೂರು: ಸಮಾಜವನ್ನು ಕಾಡುತ್ತಿರುವ ಬಾಲ್ಯವಿವಾಹ ಪದ್ಧತಿಯ ನಿರ್ಮೂಲನೆ ಗ್ರಾಮೀಣ ಭಾಗದ ಜನರ ಸಹಕಾರದಿಂದ ಮಾತ್ರ ಸಾಧ್ಯವೆಂದು ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆ ವೈದ್ಯೆ ಡಾ. ಅನಿತಾ ಅಭಿಪ್ರಾಯಪಟ್ಟರು.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ತಾಲೂಕಿನ ಕಿರಂಗೂರು ಗ್ರಾಮ ಪಂಚಾಯಿತಿಯ ಶಂಕರಪುರ ಹಾಡಿಯಲ್ಲಿ ಬುಧವಾರ ಆಯೋಜಿಸಿದ್ದ ದುಡಿಯೋಣ ಬಾ ಮತ್ತು ಸ್ತ್ರೀ ಚೇತನ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಗಂಡು ಹೆಣ್ಣಿನ ಮದುವೆ ವಯಸ್ಸು ಇಷ್ಟೇ ಇರಬೇಕೆಂದು ನಿಗದಿಪಡಿಸಿದ್ದರೂ ಕೌಟುಂಬಿಕ ಕಾರಣಗಳಿಂದ ಅವುಗಳನ್ನು ಗ್ರಾಮೀಣರು ಉಲ್ಲಂಘಿಸುತ್ತಿರುವ ಪ್ರಕರಣಗಳು ಕಾಣಸಿಗುತ್ತಿವೆ. ಬಾಲ್ಯವಿವಾಹ ಎನ್ನುವುದು ಹೆಣ್ಣಿನ ಆರೋಗ್ಯದ ಹಿತದೃಷ್ಟಿಯಿಂದಲೂ ತೊಂದರೆ ನೀಡುವಂತಹುದಾಗಿದೆ. ಸುತ್ತಮುತ್ತಲೂ ಎಲ್ಲಾದರೂ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ತಕ್ಷಣವೇ ಮಹಿಳಾ ಮತ್ತು ಮಕ್ಕಳ ಇಲಾಖೆ ಅಥವಾ ಪೋಲಿಸರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ತಾಲೂಕು ಪಂಚಾಯಿತಿ ಐಇಸಿ ಸಂಯೋಜಕಿ ಪುಷ್ಪಾ ಮಾತನಾಡಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಡೆಯಲಿರುವ ಸಮುದಾಯ ಕಾಮಗಾರಿಗಳಲ್ಲಿ ನಮೂನೆ 6ರ ಮೂಲಕ ಬೇಡಿಕೆ ಸಲ್ಲಿಸುವ ಮೂಲಕ ಉದ್ಯೋಗ ಪಡೆದುಕೊಳ್ಳುವಂತೆ ಮತ್ತು ವೈಯಕ್ತಿಕ ಫಲಾನುಭವಿಗಳು ಗ್ರಾಮ ಪಂಚಾಯಿತಿ ಮತ್ತು ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ದೊರೆಯುವ ಕಾಮಗಾರಿಯ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸುವಂತೆ ಕೋರಿದರು. ಅಲ್ಲದೆ ಉಚಿತ ಏಕೀಕೃತ ಸಹಾಯವಾಣಿ ಆದ 8277506000 ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು, ನರೇಗಾ ಹಾಗೂ ಇನ್ನಿತರ ಸಮಸ್ಯೆಗೆ ಒಂದೇ ಸಂಖ್ಯೆ ಇದಾಗಿದ್ದು, ಈ ಸಂಖ್ಯೆಗೆ ಕರೆ ಮಾಡಿ ಪರಿಹರಿಸಿಕೊಳ್ಳುವಂತೆ ಕೋರಿದರು.

ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದೊಂದಿಗೆ ಶಂಕರಪುರ ಮತ್ತು ವಿಜಯಗಿರಿ ಹಾಡಿಯ 40ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸುವುದರೊಂದಿಗೆ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಕೆಲವು ಯೋಗದ ಪ್ರಕಾರಗಳನ್ನು ಕಲಿಸಿಕೊಡಲಾಯಿತು. ಇದೇ ವೇಳೆ 20ಕ್ಕೂ ಹಚ್ಚು ಜನರಿಗೆ ಜಾಬ್ ಕಾರ್ಡ್ ವಿತರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭವ್ಯ, ವೈದ್ಯರಾದ ಸೌಮ್ಯಾ, ಸಂಧ್ಯಾ, ಶ್ರೇಯಾ, ಪೂಜಾ, ಕಾರ್ಯದರ್ಶಿ ಸ್ವಾಮಿ ಸೇರಿದಂತೆ ಹಾಡಿಯ ಸದಸ್ಯರು ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಮತ್ತು ನಿವಾಸಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net