

ಕನಕಪುರ: ನಗರದಲ್ಲಿ ಜನರ ಮನೆಯ ಬಾಗಲಿಗೆ ಇ-ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮ ಸಂಪೂರ್ಣವಾಗಿ ಯಶಸ್ವಿಯಾಗಲು ನಾಗರಿಕರ ಸಹಕಾರವು ಅಗತ್ಯವಾಗಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದ ಒಂದನೇ ವಾರ್ಡ್ ರೈಸ್ಮಿಲ್ ಬಳಿ ನಗರಸಭೆಯಿಂದ ಜನರ ಮನೆಯ ಬಾಗಿಲಿಗೆ ಇ&ಖಾತೆ ಆಂದೋಲನದ 4ನೇ ದಿನದ ಪ್ರಗತಿಯನ್ನು ಗುರುವಾರ ವೀಸಿ ಮಾತನಾಡಿದ ಅವರು, ನಗರದಲ್ಲಿ 18,500 ಖಾತೆಗಳಿವೆ. ಅವುಗಳನ್ನು ಮಾಡಿಕೊಡಲು ನಗರಸಭೆಯಿಂದ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಜನರಿಗೆ ಇ-ಖಾತೆ ಆಂದೋಲನ ಯಶಸ್ವಿಗೊಳಿಸಲು ಜನರ ಮನೆಯ ಬಾಗಿಲಿಗೆ ಖಾತಾ ಆಂದೋಲನವನ್ನು ಪ್ರಾರಂಭಿಸಲಾಗಿದೆ ಎಂದರು.
ಈಗಾಗಲೇ 9,500 ಖಾತೆಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದ 9,000 ಖಾತೆಗಳನ್ನು ಜನರಿಗೆ ಅಲೆದಾಡಿಸದೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಕ್ಕಾಗಿ ನಗರಸಭೆಯಿಂದ 4 ತಂಡಗಳನ್ನು ರಚನೆ ಮಾಡಿ, ಪ್ರತಿ ವಾರ್ಡ್ನಲ್ಲೂ ಮನೆಮನೆಗೆ ತೆರಳಿ ಖಾತೆ ಆಗಿರುವ ಮತ್ತು ಆಗದಿರುವ ಮನೆಗಳನ್ನು ಗುರ್ತಿಸಿ ಆಗಿರುವ ಮನೆಗಳಿಗೆ ಹಸಿರು ಬಣ್ಣದ ಗುರುತು ಹಾಗೂ ಆಗದೆ ಇರುವ ಮನೆಗಳಿಗೆ ಕೆಂಪು ಬಣ್ಣದ ಗುರುತು ಮಾಡಿ ಗಣತಿ ಕಾರ್ಯ ಮಾಡಬೇಕು, ಬಾಕಿ ಉಳಿದಿರುವ ಖಾತೆಗಳನ್ನು ತ್ವರಿತವಾಗಿ ಮುಗಿಸಲು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರದ ನಿವಾಸಿಗಳಾದ ನಿಮಗೆ ಇ-ಖಾತೆ ಸುಲಭವಾಗಿ ಸಿಗುವುದಲ್ಲದೇ ಮುಂದಿನ ದಿನಗಳಲ್ಲಿ ತಮಗೆ ಸರ್ಕಾರದಿಂದ ದೊರೆಯುವ ಸವಲತ್ತು ಹಾಗೂ ಇತರೆ ಅನುಕೂಲಕ್ಕೂ ಇದು ಸಹಕಾರಿ ಆಗಲಿದೆ. ನಮ್ಮ ಈ ಹೊಸ ವಿನೂತನ ಇ&ಖಾತ ಆಂದೋಲನಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಪೌರಾಯುಕ್ತ ಎಂ.ಎಸ್.ಮಹದೇವ್ಮಾತನಾಡಿ, ಕಳೆದ ನಾಲ್ಕು ದಿನಗಳಿಂದ ಮಾಡುತ್ತಿರುವ ಆಂದೋಲನದಲ್ಲಿ ಇ-ಸ್ವತ್ತು ಕೋರಿ 223 ಅರ್ಜಿಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ ಇ&ಖಾತೆ ಅರ್ಜಿ ಕೋರಿ 138 ಅರ್ಜಿಗಳು ಬಂದಿವೆ. ಅದರಲ್ಲಿ 70 ಅರ್ಜಿಗಳು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ. ಮನೆಮನೆಗೆ ತೆರಳಿ 342 ಬಿ ಖಾತೆಗಳನ್ನು ಗುರ್ತಿಸಲಾಗಿದೆ. ಅದರಲ್ಲಿ 57 ಅರ್ಜಿಗಳು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಗಿದೆ ಎಂಬ ವಿವರಣೆಯನ್ನು ನೀಡಿದರು.
ನಗರಸಭಾಧ್ಯೆ ಹೇಮಾರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ನಗರಸಭಾ ಸದಸ್ಯರಾದ ಜಹೀರಾ ಬಾನು ಹುಸೇನ್, ಮುಖಂಡರಾದ ಬೂದುಗುಪ್ಪೆ ರವಿಕುಮಾರ್, ಮಧು, ಮುತ್ತುರಾಜು, ಮೋಹನ್ ಇದ್ದರು.