ರೈತರ ಅಭಿವೃದ್ಧಿಗೆ ಸಹಕಾರ ಅಗತ್ಯ

FotoJet
Published on

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಗರಾಜ್‌ಸಿಂಗ್ ಹೇಳಿಕೆ

ಕೈಲಾಂಚ : ರೈತರ ಅಭಿವೃದ್ಧಿಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರ ಅತಿಮುಖ್ಯ ಎಂದು ವಿಭೂತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ ನಾಗರಾಜ್‌ಸಿಂಗ್ ತಿಳಿಸಿದರು.
ಕೈಲಾಂಚ ಹೋಬಳಿಯ ವಿಭೂತಿಕೆರೆ ಗ್ರಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ಧಿ ಯೋಜನೆಯ (ಕೆಡಿಪಿ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಗ್ರಾಮೀಣಾಭಿವೃಧ್ಧಿಗೆ ಒತ್ತು ನೀಡಿದ್ದು, ವಿವಿಧ ಇಲಾಖೆಗಳ ಮುಖಾಂತರ ಗ್ರಾಪಂ ಮಟ್ಟದಲ್ಲಿ ಕಾರ್ಯಗತಗೊಳಿಸುತ್ತಿದೆ. ಕಾಲಕಾಲಕ್ಕೆ ವಿವಿಧ ಇಲಾಖೆಯಲ್ಲಿ ಸಿಗುವ ಸವಲತ್ತು ಬಗ್ಗೆ ತಿಳಿವಳಿಕೆ ನೀಡಿ ಸಾರ್ವಜನಿಕರಿಗೆ ಪ್ರತೀ ವಾರ್ಡ್‌ಸಭೆ, ಗ್ರಾಮಸಭೆಗಳಲ್ಲಿ ಮಾಹಿತಿ ನೀಡಿ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಗ್ರಾಪಂ ಮಾಡುತ್ತಿದೆ ಎಂದರು.
ಸರ್ಕಾರದ ಯೋಜನೆಗಳು ಪರಿಪೂರ್ಣವಾಗಿ ಸಾಕಾರಗೊಳ್ಳಲು ಎಲ್ಲ ಇಲಾಖೆಗಳ ಸಹಕಾರ ಮುಖ್ಯ. ಸಾರ್ವಜನಿಕರಿಗೆ ಆಯಾ ಇಲಾಖೆಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗೆ ತಲುಪಿಸುವಂತ ಕೆಲಸ ಮಾಡಬೇಕಿದೆ. ಗ್ರಾಪಂ ನಿಮ್ಮೊಟ್ಟಿಗಿದ್ದು ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಲಿದೆ. ಗ್ರಾಮಗಳ ಮತ್ತು ರೈತರ ಅಭಿವೃದ್ಧಿ ನಿಮ್ಮಗಳ ಧ್ಯೆಯವಾಗಿರಲಿ ಎಂದು ಇಲಾಖಾ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪಿಡಿಒ ಬಿ.ಕೆ. ಗೋಮತಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸರ್ಕಾರದ ಮೂಲ ಮಂತ್ರವಾಗಿದೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುವಲ್ಲಿ ಎಲ್ಲ ಇಲಾಖೆಗಳ ಪಾತ್ರ ಮಹತ್ವದ್ದಿದೆ. ಈ ದಿಸೆಯಲ್ಲಿ ಗ್ರಾಪಂ ಮಟ್ಟದಲ್ಲಿ ಎಲ್ಲ ಇಲಾಖೆಗಳ ಯೋಜನೆಗಳ ಸಮರ್ಪಕ ಅನುಷ್ಠಾನ, ಇಲಾಖೆಗಳ ಕಾರ್ಯ ವೈಖರಿ ಬಗ್ಗೆ ತಿಳಿಯಲು ಕೆಡಿಪಿ ಸಭೆ ಸಹಕಾರಿಯಾಗಿದೆ ಎಂದರು.
ಆರೋಗ್ಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ, ತಮ್ಮ ಇಲಾಖೆಗಳ ಅನುಷ್ಠಾನ, ಕಾಮಗಾರಿ, ಸವಲತ್ತು ಪಡೆದ ಫಲಾನುಭವಿಗಳು ಇನ್ನಿತರ ವಿಷಯಗಳನ್ನು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷೆ ಮಂಗಳಗೌರಮ್ಮ, ಸದಸ್ಯರಾದ ಮಹದೇಶಸ್ವಾಮಿ, ಭಾಸ್ಕರ್, ಮಲ್ಲೇಶ್ ಕಾರ್ಯದರ್ಶಿ ಪದ್ಮಯ್ಯ, ಲೆಕ್ಕ ಸಹಾಯಕಿ ಸುಜಾತಾ, ಬಿಲ್ ಕಲೆಕ್ಟರ್ ರೇವುಮಲ್ಲೇಶ್, ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net