ಆರು ತಿಂಗಳಿಗೊಮ್ಮೆ ಅಡುಗೆ ಎಣ್ಣೆ ವಿಶ್ಲೇಷಣೆ - ಆಹಾರ ಸುರಕ್ಷತೆ ಇಲಾಖೆ ಸೂಚನೆ

Arogya soudha
Published on

ಬೆಂಗಳೂರು: ಅಡುಗೆ ಎಣ್ಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಬೇಕು ಎಂದು ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರು ಉದ್ದಿಮೆದಾರರಿಗೆ ಸೂಚಿಸಿದ್ದಾರೆ.

ವರ್ಚುವಲ್ ವೇದಿಕೆ ಮೂಲಕ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ಅಹಾರ ತಯಾರಿಕೆಯಲ್ಲಿ ಕಡಿಮೆ ಕೊಬ್ಬಿನಂಶ (ಟ್ರಾನ್‌ಸ್ಯ್ಾಟ್) ಇರುವ ಅಡುಗೆ ಎಣ್ಣೆಯನ್ನು ಉಪಯೋಗಿಸಬೇಕು. ಬಳಸಿದ ಎಣ್ಣೆಯನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಅಡುಗೆ ಎಣ್ಣೆ ತಯಾರಿಕಾ ಘಟಕದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಗತ್ಯ ವಿವರಗಳನ್ನೊಳಗೊಂಡ ಚೀಟಿಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ 2024-25 ಮತ್ತು 2025-26ನೇ ಸಾಲಿನಲ್ಲಿ 32.68 ಲಕ್ಷ ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ ಎಂದು ಆರ್‌ಯುಸಿಒ ಏಜೆನ್ಸಿ ಪ್ರತಿನಿಧಿಗಳು ಸಭೆಗೆ ನೀಡಿದ ಮಾಹಿತಿಗೆ, ಪ್ರತಿಕ್ರಿಯಿಸಿದ ಆಯುಕ್ತರು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ, ಜೈವಿಕ ಅನಿಲ ತಯಾರಿಕಾ ಘಟಕಗಳಿಗೆ ನೀಡಬೇಕು. ಹೋಟೆಲ್‌ಗಳಲ್ಲಿ ಬಳಸಲಾದ ಎಣ್ಣೆಯನ್ನು ಕಡ್ಡಾಯವಾಗಿ ಆರ್‌ಯುಸಿಒ ಏಜೆನ್ಸಿಗೆ ನೀಡಿ, ಮರುಬಳಕೆ ಆಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಅಂಕಿತಾಧಿಕಾರಿಗಳು, ಅಡುಗೆ ಎಣ್ಣೆ ತಯಾರಿಕಾ ಘಟಕದ ಮಾಲೀಕರು, ಹೋಟೆಲ್ ಉದ್ದಿಮೆದಾರರ ಸಂಘದ ಪದಾಧಿಕಾರಿಗಳು, ಬೇಕರಿ ಉತ್ಪನ್ನಗಳ ತಯಾರಿಕಾ ಸಂಘದ ಪದಾಧಿಕಾರಿಗಳು, ಉಪಯೋಗಿಸಿದ ಅಡುಗೆ ಎಣ್ಣೆ ವಿಲೇವಾರಿ ಏಜೆನ್ಸಿ (ಆರ್‌ಯುಸಿಒ) ಮಾಲೀಕರು ಮತ್ತು ವ್ಯವಸ್ಥಾಪಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಅನಿಲ ಅಭಿವೃದ್ಧಿ ಮಂಡಳಿ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net