ಕುಕ್ಕರ್‌ಗೆ ನೆರವು ಪಡೆದಿಲ್ವಾ? ಮನೆ ದೇವರ ಮೇಲೆ ಆಣೆ ಮಾಡಿ!

State 10 Ramesh Jarkiholi and Lakshmi Hebbalkar
Published on

ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಮಾತಿನ ಜಟಾಪಟಿ ಮುಂದುವರಿದಿದ್ದು, ಇಂದು ಮತ್ತೊಂದು ಮಜಲಿಗೆ ಹೋಗಿದೆ. ಹೆಬ್ಬಾಳ್ಕರ್‌ಗೆ ಜಾರಕಿಹೊಳಿ ಆಣೆ-ಪ್ರಮಾಣದ ಸವಾಲು ಹಾಕಿದ್ದಾರೆ.

‘‘ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚುವ ವಿಷಯದಲ್ಲಿ ನನ್ನ ಸಹಾಯ ಪಡೆದಿದ್ದು ಸತ್ಯ. ಅದು ಸುಳ್ಳು ಎನ್ನುವುದಾದರೆ ಅವರು ತಮ್ಮ ಮನೆ ದೇವರಾದ ಹಟ್ಟಿ ವೀರಭದ್ರೇಶ್ವರನ ಮೇಲೆ ಆಣೆ ಮಾಡಲಿ. ನಾನೂ ಸಹ ನಮ್ಮ ಮನೆ ದೇವರಾದ ಕೊಲ್ಲಾಪುರ ಮಹಾಲಕ್ಷ್ಮೀ ಮೇಲೆ ಆಣೆ ಮಾಡಲು ಸಿದ್ಧನಿದ್ದೇನೆ’’ ಎಂದು ಜಾರಕಿಹೊಳಿ ಸವಾಲೆಸೆದಿದ್ದಾರೆ.

‘‘ಹೆಬ್ಬಾಳ್ಕರ್ ಏನು ಎಂಬುದು ಬೆಳಗಾವಿಯ ಗಲ್ಲಿಗಲ್ಲಿಗೂ ಗೊತ್ತಿದೆ. ಆಕೆಗೆ ರಾಜಕಾರಣ ಎಂದರೇನು ಎಂಬುದೇ ಗೊತ್ತಿಲ್ಲ. ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಾಡುವಂತೆ ಆಕೆ ನನ್ನ ಕಾಲಿಗೆ ಬಿದ್ದಿದ್ದರು. ಲಿಂಗಾಯತ ಸಮಾಜದ ಮಹಿಳೆ ಬೆಳೆಯಲಿ ಅಂತ ನಾನೇ ಸಹಾಯ ಮಾಡಿದ್ದೆ. ಆಕೆ ಎಲ್ಲಾ ಹೇಳಿಕೆಗಳಿಗೆ ಈಗ ಉತ್ತರ ಕೊಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುತ್ತೇವೆ’’ ಎಂದು ಹೇಳಿದರು.

ಜಾರಕಿಹೊಳಿ ಅವರ ಈ ಹೇಳಿಕೆಗೆ ಇನ್ನೂ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿಲ್ಲ. ನಿನ್ನೆಯೂ ಇವರಿಬ್ಬರ ಮಧ್ಯೆ ವಾಗ್ಯುದ್ಧ ನಡೆದಿತ್ತು. ‘‘ಲಕ್ಷ್ಮೀ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯೋ ಇಲ್ಲವೋ’’ ಎಂದು ಜಾರಕಿಹೊಳಿ ಕಿಚಾಯಿಸಿದ್ದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ‘‘ನಾನು ಕಿತ್ತೂರು ರಾಣಿಯ ವಂಶಸ್ಥೆ. ಸುಮ್ಮನೆ ಬಿಡುವುದಿಲ್ಲ. ಸಚಿವರ ಹೇಳಿಕೆ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ಹಾಕುತ್ತೇನೆ’’ ಎಂದು ಗುಡುಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net