ಮತಾಂತರ ನಿಷೇಧ ಕಾಯಿದೆ ಹಿಂಪಡೆಗೆ ವಿರೋಧ

conversion, prohibition, act, opposition,
Published on

ಚನ್ನಗಿರಿ: ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯಿದೆ ಹಿಂಪಡೆಯಲು ತೀರ್ಮಾನಿಸಿರುವುದನ್ನು ವಿಶ್ವ ಹಿಂದು ಪರಿಷತ್ ತೀವ್ರವಾಗಿ ವಿರೋಧಿಸುತ್ತದೆ ಎಂದು ವಿಎಚ್‌ಪಿ ಹಾಗೂ ಭಜರಂಗದಳ ಜಿಲ್ಲಾ ಸಹ ಕಾರ್ಯದರ್ಶಿ ರವಿಚಂದ್ರ ತಿಳಿಸಿದರು.

ತಾಲೂಕು ಕಚೇರಿಗೆ ತೆರಳಿ ಗ್ರೇಡ್ 2 ತಹಸೀಲ್ದಾರ್ ರುಕ್ಮಿಣಿಬಾಯಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ರಾಜ್ಯದ ಜನರ ಒಳತಿಗಾಗಿ ಜಾರಿಗೆ ತಂದಿದ್ದ ಮತಾಂತರ ಕಾಯಿದೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ನಿಷೇಧ ಮಾಡಲು ಹೊರಟಿರುವುದು ಜನರಲ್ಲಿ ಬೇಸರ ತಂದಿದೆ.

ಭಾರತ ಹಿಂದು ರಾಷ್ಟ್ರ. ಸಂವಿಧಾನದಲ್ಲಿ ಎಲ್ಲ ಧರ್ಮದವರು ಜೀವನ ನಡೆಸಲು ಅವಕಾಶ ಕಲ್ಪಿಸಿದೆ. ಆದರೆ, ಕೆಲ ಧರ್ಮದವರು ಹಿಂದುಗಳ ದೌರ್ಬಲ್ಯ ಕಂಡು ಅವರಿಗೆ ಆಮಿಷ, ಆಸೆ ತೋರಿಸಿ ಬಲವಂತದಿಂದ ಮತಾಂತರ ಮಾಡುತ್ತಿದ್ದಾರೆ.

ಅಂತವರಿಗೆ ರಕ್ಷಣೆ ನೀಡುವುದು ಆಡಳಿತ ಸರ್ಕಾರದ ಕರ್ತವ್ಯವಾಗಬೇಕು. ಆದರೆ, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅತಿ ಹೆಚ್ಚು ಸಂಖ್ಯೆಯಲ್ಲಿ ಹಿಂದುಗಳು ಮತ ಹಾಕಿದ್ದಾರೆ. ಇಂತಹ ತೀರ್ಮಾನದಿಂದ ಹಿಂದುಗಳಿಗೆ ಅನ್ಯಾಯ ಮಾಡಿದಂತೆ ಆಗಿದೆ.
ಈ ನಿರ್ಣಯವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

ವಿಎಚ್‌ಪಿ ತಾಲೂಕು ಸಹ ಕಾರ್ಯದರ್ಶಿ ಎಂ. ಹೇಮಚಂದ್ರ, ಭಜರಂಗದಳ ತಾಲೂಕು ಸಂಚಾಲಕ ಶ್ರೀನಿವಾಸ್, ವಿದ್ಯಾರ್ಥಿ ಪ್ರಮುಖ್ ವೇದಮೂರ್ತಿ, ಗೋರಕ್ಷಕ ರಂಗನಾಥ, ಶಿವಕುಮಾರ್, ಮನೋಜ, ಶಿವಶಂಕರ ಪಟೇಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net