

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಕುರಿತಂತೆ ವಿವಿಧ ರಾಜಕೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಡಳಿತ ಪಕ್ಷದವರು ಸಮರ್ಥಿಸಿಕೊಂಡರೆ ಪ್ರತಿಪಕ್ಷದವರು ವಿರೋಧ ಹೊರಹಾಕಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮತಾಂತರ ನಿಷೇಧ ಕಾಯ್ದೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಬಲವಂತದ ಮತಾಂತರ ಮಾಡುವಂತಿಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಹಾಗಿದ್ದರೂ ಕಾಯ್ದೆ ತರುವ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸಿದರು.
ಇಂಧನ ಸಚಿವ ಸುನೀಲ್ಕುಮಾರ್ ಮಾತನಾಡಿ, ಮತಾಂತರದಿಂದ ಆಗುತ್ತಿರುವ ದುಷ್ಪರಿಣಾಮಗಳು ಗೊತ್ತಿದೆ. ಕಾಂಗ್ರೆಸ್ನವರು ಚರ್ಚೆಗೆ ಬರಲಿ, ಸಲಹೆ ಕೊಡಲಿ ಎಂದ ಅವರು, ಮತಾಂತರ ಎಂದರೆ ರಾಷ್ಟ್ರಾಂತರ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ತರುತ್ತೇವೆ ಎಂದು ಹೇಳಿದರು.
ಸರ್ಕಾರ ಏನು ಮಾಡಲು ಹೊರಟಿದೆ?: ಸಂವಿಧಾನದ 25ನೇ ವಿಧಿಯ ಪ್ರಕಾರ ಬಲವಂತದ ಮತಾಂತರ ಮಾಡಬಾರದು. ಒಂದು ವೇಳೆ ಮತಾಂತರ ಮಾಡಿದರೆ ಏನು ಶಿಕ್ಷೆ ಎಂಬುದರ ಉಲ್ಲೇಖ ಅಲ್ಲಿ ಇಲ್ಲ. ಇದೀಗ ಅದಕ್ಕೆ ಕೆಲವು ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕಾನೂನು ತಜ್ಞರ ಸಲಹೆ ಪಡೆದುಕೊಂಡು ಮುಂದುವರಿಯಲಾಗಿದೆ. ಮತಾಂತರ ಆಗುವವರು ಒಂದು ತಿಂಗಳು ಮುನ್ನ ಜಿಲ್ಲಾಧಿಕಾರಿ ಬಳಿ ನೋಂದಾಯಿಸಿಕೊಳ್ಳಬೇಕು. ಜತೆಗೆ ಅಫಿಡೆವಿಟ್ ಸಲ್ಲಿಸಬೇಕಾಗುತ್ತದೆ. ಇದರಿಂದ ಅವರು ಮೀಸಲು ಸೌಲಭ್ಯ ಪಡೆದುಕೊಳ್ಳುತ್ತಿದ್ದರೆ ಮತಾಂತರ ಬಳಿಕ ಆ ಸೌಲಭ್ಯಗಳು ರದ್ದಾಗುತ್ತವೆ ಎಂದು ಕರಡಿನಲ್ಲಿ ಪ್ರಸ್ತಾಪವಿದೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬರಬೇಕು. ಯಾರು ನೋವು ಅನುಭವಿಸಿದ್ದಾರೋ ಅವರಿಗೆ ಮಾತ್ರ ಗೊತ್ತು. ಈ ಅಧಿವೇಶನದಲ್ಲೇ ಮಂಡಿಸಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಕೋರುತ್ತೇನೆ.
| ಗೂಳಿಹಟ್ಟಿ ಶೇಖರ್ ಬಿಜೆಪಿ ಶಾಸಕ
ಕಾಂಗ್ರೆಸ್ ಒಂದು ಸಮುದಾಯದ ಪರವಾಗಿದೆ. ಬಹುಸಂಖ್ಯಾತರ ಬಗ್ಗೆ ಕಾಳಜಿ ಇಲ್ಲ. ಎಲ್ಲರ ಬಗ್ಗೆಯೂ ಕಾಳಜಿ ಇರಬೇಕು. ಈಗಾಗಲೆ ಮತಾಂತರ ನಿಷೇಧಕ್ಕೆ ಅವಕಾಶ ಇಲ್ಲ. ಇನ್ನಷ್ಟು ಕಠಿಣ ಕಾನೂನು ತರುತ್ತಿದ್ದೇವೆ.
| ಆರ್.ಅಶೋಕ್ ಕಂದಾಯ ಸಚಿವ
ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದರೆ ನೈತಿಕ ಪೊಲೀಸ್ಗಿರಿಗೆ ಅವಕಾಶ ಮಾಡಿಕೊಟ್ಟಂತಾ ಗುತ್ತದೆ. ಇಂತಹ ಕಾಯ್ದೆ ತಂದು ದೇಶ ವಿಭಜನೆ ಮಾಡಬೇಡಿ ಎಂದು ಸಿಎಂ ಹಾಗೂ ಅವರ ಪಕ್ಷದವರಿಗೆ ಮನವಿ ಮಾಡುತ್ತೇನೆ. ಕ್ರೖೆಸ್ತ ಧರ್ಮದ ಜನಸಂಖ್ಯೆ ಮೊದಲಿಗಿಂತ ಕಡಿಮೆ ಇದೆ. ಆದರೂ ಇಲ್ಲಿ ರಾಜಕೀಯ ಉದ್ದೇಶದಿಂದ ಕಾಯ್ದೆ ತರಲು ಹೊರಟಂತಿದೆ.
| ಕೆ.ಜೆ.ಜಾರ್ಜ್ ಮಾಜಿ ಸಚಿವ
ಪಾಕಿಸ್ತಾನದಲ್ಲಿ ಆಗ ಶೇ.24 ಹಿಂದುಗಳಿದ್ದರು. ಈಗ ಶೇ.3 ಇದ್ದಾರೆ. ಹಿಂದುಸ್ತಾನವನ್ನೂ ಪಾಕಿಸ್ತಾನ ಮಾಡೋಕೆ ಹೊರಟಿದ್ದೀರಾ? ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಮುಸ್ಲಿಂ ಮತ್ತು ಕ್ರೖೆಸ್ತರನ್ನು ತೃಪ್ತಿಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕಾಗಿಯೇ ಜನರು ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಿದ್ದಾರೆ.
| ಕೆ.ಎಸ್.ಈಶ್ವರಪ್ಪ ಸಚಿವ
ನಾಳೆ ಕರಡು ಅಂತಿಮ: ಮತಾಂತರ ನಿಷೇಧ ಕಾಯ್ದೆಯನ್ನು ಈ ಅಧಿವೇಶನದಲ್ಲೇ ಮಂಡನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಕಾನೂನು ಇಲಾಖೆಯು ಮಂಗಳವಾರ ಕರಡನ್ನು ಬಹುತೇಕ ಅಂತಿಮಗೊಳಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಸೂದೆ ವಿಷಯಾಂತರವಲ್ಲ. ಇದು ಬಹಳ ಅಗತ್ಯವಾದ ಮಸೂದೆ ಎಂದು ಮನಗಂಡು ಸರ್ಕಾರ ತರುತ್ತಿದೆ ಎಂದರು.
ಅಧಿವೇಶನದಲ್ಲೇ ಮಂಡನೆ: ಮತಾಂತರ ನಿಷೇಧ ಕಾಯ್ದೆಯನ್ನು ಈ ಅಧಿವೇಶನದಲ್ಲಿ ಮಂಡಿಸುತ್ತೇವೆ. ಅನಗತ್ಯವಾಗಿ ವಿರೋಧ ಮಾಡದೆ ಕಾಂಗ್ರೆಸ್ ನಾಯಕರು ಸಹಕಾರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕಾಯ್ದೆ ಬಗ್ಗೆ ಚರ್ಚೆ ಆಗಲಿ. ಬೇರೆ ರಾಜ್ಯಗಳಲ್ಲಿಯೂ ಈ ಕಾಯ್ದೆ ಇದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಜಾರಿಗೆ ತರುತ್ತೇವೆ ಎಂದರು. ಕಾಯ್ದೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ತರುವ ಮಸೂದೆಗಳನ್ನು ವಿರೋಧ ಮಾಡುವುದೇ ಅವರ ಸ್ವಭಾವ. ಇಂತಹ ಕಾಯ್ದೆಗಳಿಗೆ ಸಿದ್ದರಾಮಯ್ಯ ವಿರೋಧ ಮಾಡುತ್ತಲೇ ಇರುತ್ತಾರೆ. ಈ ಕಾಯ್ದೆಯನ್ನು ಕಾಂಗ್ರೆಸ್ನ ಕೆಲವರು ಸ್ವಾಗತ ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಇದನ್ನು ಜಾರಿಗೆ ತರಬೇಕು ಎಂಬ ಇರಾದೆ ಇದೆ. ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ ಎಂದರು.
2 ಕಾಯ್ದೆ ಗುಟ್ಟು ಬಾಕಿ ಇಟ್ಟ ಸರ್ಕಾರ: ಬೆಳಗಾವಿ ಅಧಿವೇಶನದಲ್ಲಿ ಒಂಬತ್ತು ಕಾಯ್ದೆ ಮಂಡಿಸುತ್ತೇವೆ, ಜತೆಗೆ ಇನ್ನೆರಡೂ ಬರಬಹುದು ಎಂದು ಸರ್ಕಾರ ವಿಧಾನಮಂಡಲ ಕಲಾಪ ಸಲಹಾ ಸಮಿತಿಯಲ್ಲಿ ಹೇಳಿಕೊಂಡಿದೆ. ಈ ಮೂಲಕ ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಗುಟ್ಟು ಮುಂದುವರಿಸಿದೆ. ವಿಧಾನಸಭೆ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಆರ್.ಅಶೋಕ್ ಮತ್ತಿತರರು ಇದ್ದರು. ಮತಾಂತರ ನಿಷೇಧ ಕಾಯ್ದೆಯ ಕಾರಣಕ್ಕೆ ಈ ಬಾರಿಯ ಅಧಿವೇಶನ ರಾಜ್ಯದ ಗಮನ ಸೆಳೆದಿದೆ. ಆದರೆ, ಈ ಬಾರಿ ಈ ಮಸೂದೆಯನ್ನು ಮಂಡಿಸುವ ಬಗ್ಗೆ ಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿಲ್ಲ. 9 ಕಾಯ್ದೆಗಳಲ್ಲದೆ, ಇನ್ನೆರಡು ಕಾಯ್ದೆ ಬರಬಹುದು ಎಂದು ಸರ್ಕಾರ ಸೂಕ್ಷ್ಮವಾಗಿ ಹೇಳಿದೆ. ಈ ಎರಡರಲ್ಲಿ ಮತಾಂತರ ನಿಷೇಧ ಕಾಯ್ದೆ ಇರಬಹುದೆಂದು ಊಹಿಸಲಾಗಿದೆ. ಸಿದ್ದರಾಮಯ್ಯ ‘ಆ ಎರಡು ಕಾಯ್ದೆ ಯಾವುದೆಂದು ನಮಗೆ ಮೊದಲೇ ಗೊತ್ತಾಗಬೇಕು, ತರಾತುರಿಯಲ್ಲಿ ತರಬೇಡಿ’ ಎಂದು ಸಿಎಂಗೆ ಸಲಹೆ ನೀಡಿದ್ದಾರೆ. ಅವರ ಮಾತಿಗೆ ಆಡಳಿತ ಪಕ್ಷದ ಪ್ರತಿನಿಧಿಗಳು ತಲೆಯಾಡಿಸಿದ್ದಾರೆ. ಇನ್ನು ಅಧಿವೇಶನವನ್ನು ಡಿ.24ಕ್ಕೆ ಕೊನೆಗೊಳಿಸಲು ಆಡಳಿತ ಮತ್ತು ಪ್ರತಿಪಕ್ಷ ಸಮ್ಮತಿಸಿದೆ. ಜ.1ರವರೆಗೂ ಅವಧಿ ವಿಸ್ತರಣೆಗೆ ಸಿದ್ದರಾಮಯ್ಯ ಕೋರಿದ್ದರು, ಕಷ್ಟವೆಂದು ಸರ್ಕಾರ ಕೆಲವು ಕಾರಣ ನೀಡಿತು.
ನೀರಾವರಿ ಯೋಜನೆ ಚರ್ಚೆಗೆ ಆದ್ಯತೆ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಚರ್ಚೆ ಆಗಬೇಕೆಂಬ ಕುರಿತು ಸಭೆಯಲ್ಲಿ ಪ್ರಸ್ತಾಪವಾಗಿದೆ. ಮುಖ್ಯವಾಗಿ ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ, ಕಬ್ಬು ಬೆಳೆಗಾರರು ಒಳಗೊಂಡಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಹೆಚ್ಚು ಸಮಯ ಮೀಸಲಿಡುವುದಕ್ಕೆ ಬಹುತೇಕರು ಸಹಮತಕ್ಕೆ ಬಂದರು. ಸರ್ಕಾರ ಕೂಡ ಸಮ್ಮತಿಸಿತು ಎನ್ನಲಾಗಿದೆ.
ಬೆಳಗಾವಿ: ಮತಾಂತರ ನಿಷೇಧ ವಿಧೇಯಕವನ್ನು ಇದೇ ಅಧಿವೇಶನದಲ್ಲಿ ಮಂಡಿಸಲು ಮಾನಸಿಕ, ಕಾನೂನಾತ್ಮಕವಾಗಿ ಸರ್ಕಾರ ಸಿದ್ಧವಾಗಿದೆ. ಜತೆಗೆ ಲವ್ ಜಿಹಾದ್ ನಿಷೇಧ ಮಸೂದೆಯತ್ತ ಚಿತ್ತ ಹರಿಸಿದ್ದು, ಗೃಹ ಸಚಿವರ ಹಂತದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಾನೂನು ಮತ್ತು ತಾಂತ್ರಿಕ ತೊಡಕು ಉಂಟಾಗದಂತೆ ಮಸೂದೆ ರೂಪಿಸುವ ಚಿಂತನೆ ನಡೆದಿದ್ದು, ಪ್ರಸ್ತುತ ಅಧಿವೇಶನದಲ್ಲಿ ಅಲ್ಲದಿದ್ದರೂ ಮುಂದಿನ ಅಧಿವೇಶನದಲ್ಲಿ ಮಂಡಿಸುವ ಸನ್ನಾಹದಲ್ಲಿದೆ ಎಂದು ಹೇಳಲಾಗಿದೆ. ಲವ್ ಜಿಹಾದ್ ತಡೆ ಕಾಯ್ದೆಯನ್ನೂ ಜಾರಿಗೆ ತರುತ್ತೇವೆ ಎಂದು ಸಚಿವ ವಿ.ಸುನಿಲ್ಕುಮಾರ್ ಹೇಳಿಕೆ ನೀಡಿದ್ದರೆ, ಮತ್ತೊಬ್ಬ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಧ್ವನಿಗೂಡಿಸುವ ಮೂಲಕ ಸರ್ಕಾರದ ಚಿಂತನೆಗೆ ಪುಷ್ಠಿ ನೀಡಿದ್ದಾರೆ.
ನುಡಿದಂತೆ ನಡೆ: ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಸುನಿಲ್ಕುಮಾರ್, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸು ವುದಾಗಿ ಹೇಳಿದ್ದೆವು, ಅದರಂತೆಯೇ ನಡೆದು ಕೊಂಡಿದ್ದೇವೆ. ಈಗ ಮತಾಂತರ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ. ಮುಂದೆ ಲವ್ ಜಿಹಾದ್ ವಿರುದ್ಧ ಕಾನೂನು ತರುತ್ತೇವೆ. ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಕಾಯ್ದೆ ಜಾರಿ ಮಾಡುತ್ತಿದ್ದೇವೆ ಎನ್ನುವುದು ಸರ್ವಥಾ ಸರಿಯಲ್ಲ ಎಂದರು.
ಸರ್ಕಾರಿ ವೈದ್ಯರ ಖಾಸಗಿ ಸೇವೆ ನಿರ್ಬಂಧ ನೀತಿ: ಸರ್ಕಾರಿ ಆಸ್ಪತ್ರೆಗಳ ತಜ್ಞ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ತಡೆಯಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಹೊಸ ನೀತಿ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪರಿಷತ್ನಲ್ಲಿ ಸೋಮವಾರ ಪ್ರಕಟಿಸಿದರು. ಬಿಜೆಪಿಯ ಮಹಾಂತೇಶ ಕವಟಗಿಮಠ ಹಾಗೂ ಲಕ್ಷಣ ಸವದಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಮೊದಲು ತಜ್ಞ ವೈದ್ಯರು ಸಿಗುತ್ತಿರಲಿಲ್ಲ. ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುತ್ತಿದ್ದೆವು. ಈಗ ವೈದ್ಯರ ಸಂಖ್ಯೆ ಹೆಚ್ಚಿದೆ. ಬಹಳಷ್ಟು ವೈದ್ಯರು ಸ್ನಾತಕ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದು ಹೊರಬರುತ್ತಿದ್ದಾರೆ. ಹಾಗಾಗಿ ಸರ್ಕಾರ ತಪು್ಪ ಮಾಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲು ನಿರ್ಧರಿಸಿದೆ ಎಂದರು.
ಸೀಟ್ ಉಳಿಸಿದರೆ ದಂಡ: 2019-20, 2020-21ನೇ ಸಾಲಿನಲ್ಲಿ 1227 ಎಂಬಿಬಿಎಸ್ ಸೀಟ್ ಹಂಚಿಕೆಯಾಗದೆ ಉಳಿದಿವೆ. ಇನ್ಮುಂದೆ ಯಾವುದೇ ವೈದ್ಯಕೀಯ ಕಾಲೇಜ್ಗಳು ಹೀಗೆ ಸೀಟ್ ಉಳಿಸಿದರೆ ದಂಡ ಹಾಕುವ ಕುರಿತು ಚಿಂತಿಸಲಾಗುತ್ತಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಎನ್.ರವಿಕುಮಾರ, ಕಾಲೇಜ್ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಮಧ್ಯೆ ದಂಧೆ ನಡೆಯುತ್ತಿದೆ. ಕೊನೇ ಕ್ಷಣದಲ್ಲಿ ಸೀಟ್ ಬಿಟ್ಟು ಕೊಡುವ ‘ವ್ಯವಹಾರ’ ನಡೆಯುತ್ತಿದೆ. ಮತ್ತೊಂದು ಕೌನ್ಸೆಲಿಂಗ್ ಮಾಡಿ ಸೀಟ್ ಹಂಚಿಕೆ ಮಾಡಬೇಕು. ಈ ಕುರಿತು ರ್ಚಚಿಸೋಣ ಸಭೆ ಕರೆಯಿರಿ ಎಂದರು. ಇದಕ್ಕೆ ಸಮ್ಮತಿಸಿದ ಡಾ.ಸುಧಾಕರ್, ಶೀಘ್ರವೇ ಸಭೆ ಕರೆಯುವೆ ಎಂಬ ಭರವಸೆ ನೀಡಿದರು.
ಉನ್ನತಮಟ್ಟದ ತನಿಖೆಗೆ ಆಗ್ರಹ: ಸೇನಾಪಡೆಗಳ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ಪತನ ದುರಂತವನ್ನು ಉನ್ನತಮಟ್ಟದ ತನಿಖೆಗೆ ಒಪ್ಪಿಸಿ, ತನಿಖಾ ವರದಿಯನ್ನು ದೇಶದ ಜನತೆ ಮುಂದಿಡಬೇಕು ಎಂದು ಉಭಯ ಸದನಗಳ ಪ್ರತಿಪಕ್ಷ ನಾಯಕರು ಆಗ್ರಹಿಸಿದರು. ವಿಧಾನಸಭೆಯಲ್ಲಿ ಸಂತಾಪ ಸೂಚಿಸುವ ನಿರ್ಣಯದ ಮೇಲೆ ಸಿದ್ದರಾಮಯ್ಯ ಮಾತನಾಡಿ ಅತ್ಯಂತ ಸುಭದ್ರ, ಸುರಕ್ಷಿತ ಹೆಲಿಕಾಪ್ಟರ್ ಪತನದಲ್ಲಿ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತಪಡಿಸುವುದಿಲ್ಲ. ಆದರೆ ತನಿಖೆ ನಡೆಸಿ, ಸತ್ಯಾಂಶ ಬಹಿರಂಗಪಡಿಸುವ ಮೂಲಕ ಜನರ ಸಂಶಯ ನಿವಾರಿಸಬೇಕು ಎಂದು ಒತ್ತಾಯಿಸಿದರು. ಎಸ್.ಆರ್.ಪಾಟೀಲ್, ಗುಪ್ತಚರ ಇಲಾಖೆ ವೈಫಲ್ಯ ಎದ್ದುಕಾಣುತ್ತದೆ. ಉನ್ನತಮಟ್ಟದ ತನಿಖೆ ನಡೆಸಿ, ನಿಜಾಂಶ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಬಿಡಿಗಾಸೂ ನೆರೆ ಪರಿಹಾರ ನೀಡದ ಕೇಂದ್ರ: ನಿರಂತರ ಮಳೆಯಿಂದ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ನಾಡಿನ ರೈತರ ಕಷ್ಟ ಹೇಳತೀರದಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಈ ವರ್ಷ ರಾಜ್ಯಕ್ಕೆ ನಯಾಪೈಸೆ ಪರಿಹಾರದ ಹಣ ಸಿಕ್ಕಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡನೆ ಸಂಬಂಧ ಪೀಠಿಕೆ ಹಾಕಿದ ಅವರು, ತಾವು ರಾಜ್ಯ ಪ್ರವಾಸದಲ್ಲಿ ಕಂಡ ಅಂಶಗಳು ಮತ್ತು ನಷ್ಟದ ಅಂಕಿ-ಅಂಶವನ್ನು ಸದನದ ಗಮನಕ್ಕೆ ತಂದರು. ಯುಪಿಎ ಸರ್ಕಾರ ನೀಡಿದ್ದ ಪ್ರವಾಹ ಪರಿಹಾರ ಹಾಗೂ ಮೋದಿ ಸರ್ಕಾರ ನೀಡಿರುವ ಪರಿಹಾರ ಮುಂತಾದ ವಿಷಯಗಳನ್ನು ಬುಧವಾರ ರ್ಚಚಿಸುವುದಾಗಿ ಸಿದ್ದರಾಮಯ್ಯ ತಿಳಿಸಿದರು. ಆರಂಭದಲ್ಲಿ ಇದೇ ವಿಚಾರವಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುತ್ತೇನೆಂದು ಸ್ಪೀಕರ್ ಹೇಳಿದರೂ, ಪೀಠಿಕೆಗೆ ಅವಕಾಶ ಕೊಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು. ಈ ವೇಳೆ ಸಚಿವ ಅಶೋಕ್ ಕೂಡ ಸಿದ್ದರಾಮಯ್ಯ ಮನವೊಲಿಸಲು ಪ್ರಯತ್ನಿಸಿದರು. ‘ನೀನು ಮಾತು ಕೇಳಲ್ಲವೇ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ‘ನಿಮ್ಮ ಪಾಠ ಕೇಳುತ್ತೇವೆ, ನೀವು ಪಾಠ ಮಾಡಿ’ ಎಂದು ಅಶೋಕ್ ಹಾಸ್ಯ ಮಾಡಿದರು.
ಮಾಮನಿ ರಾಜೀನಾಮೆ ಕೊಟ್ಟಿಲ್ಲ: ಸಚಿವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸಿಲ್ಲ ಎಂದು ಬೇಸತ್ತಿರುವ ವಿಧಾನಸಭೆ ಉಪ ಸಭಾಧ್ಯಕ್ಷ ಚಂದ್ರಶೇಖರ ಮಾಮನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆಂದು ಗುಲ್ಲಾಗಿತ್ತು. ಸೋಮವಾರ ಮಾಮನಿ ಸ್ಪಷ್ಟನೆ ನೀಡಿ, ನಾನು ಸಚಿವಾಕಾಂಕ್ಷಿ. ರಾಜಕೀಯದಲ್ಲಿ ಯಾರೂ ಸನ್ಯಾಸಿಯಲ್ಲ, 3 ಬಾರಿ ಶಾಸಕನಾಗಿದ್ದೇನೆ, ಅವಕಾಶ ಕೊಟ್ಟರೆ ನಿಭಾಯಿಸುವೆ ಎಂದರು.
ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ಅಧಿವೇಶನದ ಮೊದಲಿಗೆ ಅತಿವೃಷ್ಟಿ ಪರಿಹಾರ ವಿಚಾರ ಕೈಗೆತ್ತಿಕೊಂಡಿರುವ ಕಾಂಗ್ರೆಸ್, ಮುಂದೆ ಯಾವ ತೀರ್ಮಾನ ಮಾಡಬೇಕೆಂದು ನಿರ್ಧರಿಸಲು ಬುಧವಾರ ಬೆಳಗ್ಗೆ 8.30ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಕಮಿಷನ್ ವಿಚಾರ ಮೊದಲು ತೆಗೆದುಕೊಳ್ಳಬೇಕೋ ಅಥವಾ ಬಿಟ್ ಕಾಯಿನ್ ವಿಷಯ ಕೈಗೆತ್ತಿಕೊಳ್ಳಬೇಕೋ ಎಂಬ ಬಗ್ಗೆ ಪಕ್ಷದ ನಾಯಕರು ಚರ್ಚೆ ನಡೆಸಲಿದ್ದಾರೆ.
ನೀವೊಂದು-ನಾವೊಂದು ಗೆಲ್ತೀವಿ: ಪಕ್ಷ ಯಾವುದಾದರೇನು? ಗೆಳೆತನ-ಹಗೆತನ ಶಾಶ್ವತವಲ್ಲ ಎಂಬುದಕ್ಕೆ ಸುವರ್ಣಸೌಧ ಸಾಕ್ಷಿಯಾಯಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ ಇಬ್ಬರೂ ಜತೆಯಾಗಿಯೇ ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದರು. ಜತೆಯಾಗಿಯೇ ಸುವರ್ಣಸೌಧ ಪ್ರವೇಶಿಸಿದರು. ಲಿಫ್ಟ್ನಲ್ಲಿ ಹೋಗುವಾಗ ಇಬ್ಬರೂ ಕುಶಲೋಪರಿ ಜತೆಗೆ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ವಿಷಯವಾಗಿಯೂ ರ್ಚಚಿ ಸಿದರು. ‘ಮೈಸೂರಿನಲ್ಲಿ ಹೆಂಗಾಯ್ತು ಎಲೆಕ್ಷನ್’ ಅಂತ ಸಿದ್ದರಾಮಯ್ಯ ಪ್ರಶ್ನಿಸಿದರೆ, ‘ನಾವೊಂದು, ನೀವೊಂದು ಗೆಲ್ತೀವಿ’ ಎಂದು ಸಣ್ಣ ದನಿಯಲ್ಲೇ ಉತ್ತರಿಸಿದರು. ಇಬ್ಬರು ಹೀಗೆ ಜತೆಯಾಗಿ ಹೋಗುತ್ತಿರುವುದನ್ನು ಎರಡೂ ಪಕ್ಷದ ಮುಖಂಡರಲ್ಲಿ ಕುತೂಹಲದಿಂದ ಕಣ್ಣರಳಿಸಿ ನೋಡಿದರು.
ಸುವರ್ಣ ಸೌಧದೊಳಗೆ ಊಟದ ಅವ್ಯವಸ್ಥೆ: ಮೊದಲ ದಿನ ಸೌಧದೊಳಗೆ ಅಧಿಕಾರಿಗಳು, ಮಾರ್ಷಲ್ಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗಾಗಿ ಮಾಡಿದ್ದ ಊಟದ ವ್ಯವಸ್ಥೆ ಅವ್ಯವಸ್ಥೆಯಾಗಿ ಮಾರ್ಪಟ್ಟಿತು. ಮಧ್ಯಾಹ್ನ 2ಕ್ಕೆ ಆರಂಭಗೊಂಡರೂ 2.30ರ ಸುಮಾರಿಗಾಗಲೇ ತಟ್ಟೆ ಕೊರತೆ ಎದುರಾಯಿತು. ಅರ್ಧದಷ್ಟು ಜನ ಸರತಿಯಲ್ಲೇ ನಿಂತು ಬೇಸತ್ತು ಹೊರ ನಡೆದರು. ಬಳಿಕ ತಟ್ಟೆ ಲಭ್ಯವಾದರೂ ಹೋಳಿಗೆ, ಅನ್ನ, ತಂದೂರಿ ರೊಟ್ಟಿ, ಸೆಂಡಿಗೆ ಸೇರಿ ಬಹುತೇಕ ಪದಾರ್ಥಗಳು ಖಾಲಿ ಆಗಿವೆ ಎಂದು ಸಿಬ್ಬಂದಿ ಹೇಳತೊಡಗಿದರು. ಹೀಗಾಗಿ ಊಟಕ್ಕಾಗಿ ಕಾಯುತ್ತಿದ್ದ ನೂರಾರು ಸಿಬ್ಬಂದಿ ತರಕಾರಿ ಪಲ್ಯಗಳನ್ನೇ ಸವಿದು ಹಸಿವು ನೀಗಿಸಿಕೊಂಡರು.
ಇದ್ದಲ್ಲಿಗೇ ಬಂತು ಮಧ್ಯಾಹ್ನದ ಊಟ: ಈ ಹಿಂದಿನ ಅಧಿವೇಶನಗಳಲ್ಲಿ ಬಂದೋಬಸ್ತ್ಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿ ವಸತಿ ಅವ್ಯವಸ್ಥೆಯಿಂದ ಬೇಸತ್ತಿದ್ದರು. ಈ ಬಾರಿ ಸುವರ್ಣಸೌಧದ ಸಮೀಪದಲ್ಲೇ ವಸತಿ ಸೌಲಭ್ಯ ಕಲ್ಪಿಸಿದ್ದು, ದಿನವೂ ವಿವಿಧ ಭಗೆಯ, ತರೇಹವಾರಿ ಆಹಾರ ಪದಾರ್ಥಗಳನ್ನು ಉಣಬಡಿಸುವ ಪ್ರಯತ್ನ ನಡೆಸಿದೆ. ಮೊದಲ ದಿನ ಸೋಮವಾರ ಬೆಳಗ್ಗೆ ಟೀ-ಕಾಫಿ ಜತೆಗೆ ಲೆಮನ್ ರೈಸ್ ಮತ್ತು ಚೌಚೌ ಬಾತ್ ನೀಡಿದರೆ. ಮಧ್ಯಾಹ್ನದ ಊಟಕ್ಕಾಗಿ ಚಪಾತಿ, ಮಡಕಿ ಮತ್ತು ಕ್ಯಾಪ್ಸಿಕಮ್ ಬಜ್ಜಿ, ಜೀರಾ ರೈಸ್, ದಾಲ್ ಪ್ರೖೆ, ಬಾದುಶಾ ಮತ್ತು ಮಜ್ಜಿಗೆ ಒಳಗೊಂಡ ಊಟದ ಪ್ಯಾಕೆಟ್ಗಳನ್ನು ಪ್ರತಿಭಟನೆ, ರಸ್ತೆಗಳು ಸೇರಿ ಬಂದೋಬಸ್ತ್ ನಿಯೋಜಿಸಿದ್ದ ಸ್ಥಳಗಳಲ್ಲೇ ಒದಗಿಸಲಾಯಿತು.