ಮತಾಂತರ + ಲವ್ ಜಿಹಾದ್; ಒಂದೇ ಕಾಯ್ದೆಯೊಳಗೆ ಎರಡನ್ನೂ ಸೇರಿಸಲು ಸರ್ಕಾರದ ಚಿಂತನೆ

Mathanthara
Published on

| ಮರಿದೇವ ಹೂಗಾರ ಬೆಳಗಾವಿ

ಮತಾಂತರ ನಿಷೇಧ ಹಾಗೂ ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಬದಲು ಒಂದೇ ಕಾಯ್ದೆಯೊಳಗೆ ಎರಡನ್ನೂ ಸೇರಿಸುವ ಗಂಭೀರ ಚಿಂತನೆ ರಾಜ್ಯ ಸರ್ಕಾರದ ಮುಂದಿದೆ. ಎರಡೂ ವಿಚಾರದಲ್ಲಿ ಪ್ರತ್ಯೇಕ ಮಸೂದೆ ಮಂಡಿಸುವ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ, ಇಂಧನ ಸಚಿವ ವಿ.ಸುನೀಲ್​ಕುಮಾರ್ ಇಂಗಿತ ವ್ಯಕ್ತಪಡಿಸಿದ್ದರು. ಬಹಳಷ್ಟು ಸಚಿವರು ಇದಕ್ಕೆ ಸಹಮತ ಸೂಚಿಸಿದ್ದರು. ಆದರೆ, ಕಾನೂನು ತಜ್ಞರು, ಸಾಮಾಜಿಕ ಚಿಂತಕರು, ಹಲವು ವಿಭಾಗಗಳ ತಜ್ಞರು, ಹಿರಿಯ ಸಚಿವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಈ ಕುರಿತು ರ್ಚಚಿಸಲು ಸಭೆ ನಡೆಸಿತ್ತು. ಎರಡನ್ನೂ ಪ್ರತ್ಯೇಕಿಸುವ ಬದಲು ಒಂದೇ ಕಾಯ್ದೆಯೊಳಗೆ ಸೇರಿಸಿ ಜಾರಿಗೆ ತರುವ ಕುರಿತು ಮಾಹಿತಿ ವಿನಿಮಯವಾಗಿದೆ ಎಂದು ಹೇಳಲಾಗಿದೆ. ಹಣ, ಆಮಿಷವೊಡ್ಡುವುದು, ಬಡತನ ಪರಿಸ್ಥಿತಿ ದುರ್ಲಾಭ ಪಡೆಯುವುದು ಮತಾಂತರದ ತಂತ್ರವಾಗಿದೆ. ಯುವತಿಯರನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಮೋಹದ ಬಲೆಗೆ ಕೆಡವಿ ಮತಾಂತರ ಮಾಡುವುದು ಲವ್ ಜಿಹಾದ್​ನ ಸಂಚು ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿದೆ.ಮತಾಂತರ ಮತ್ತು ಲವ್ ಜಿಹಾದ್ ಎರಡೂ ಯಾವುದೇ ಸ್ವರೂಪದಲ್ಲಿದ್ದರೂ ಸಾಮಾಜಿಕ ಸ್ವಾಸ್ಥ್ಯ, ಜಾತಿ ಸಮೀಕರಣದ ಚೌಕಟ್ಟು, ಕೌಟುಂಬಿಕ ಸಂಬಂಧ ಹಾಳು ಮಾಡಬಾರದು ಎಂಬುದು ರಾಜ್ಯ ಸರ್ಕಾರದ ನಿಲುವು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಮತಾಂತರ ತಡೆ ಮಸೂದೆ ಕರಡು ತಯಾರಿಸಿದ್ದು, ಕೆಲ ಸಂವಿಧಾನಾತ್ಮಕ ಅಡೆತಡೆ ನಿವಾರಣೆ ಸಂದರ್ಭದಲ್ಲಿ ಲವ್ ಜಿಹಾದ್ ತಡೆ ಹಾಕುವಂತಹ ಅಂಶಗಳನ್ನು ಈ ಮಸೂದೆಯೊಳಗೆ ಅಡಗಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಚರ್ಚೆ, ಅಭಿಪ್ರಾಯ ಸಂಗ್ರಹ, ಕಾನೂನು ತಜ್ಞರೊಂದಿಗೆ ವಿಚಾರ ವಿನಿಯಮ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲವ್ ಜಿಹಾದ್ ತಡೆಗೆ ಪ್ರತ್ಯೇಕ ಕಾಯ್ದೆ ರೂಪಿಸುವ ಬದಲು ಮತಾಂತರ ನಿಷೇಧ ಕಾಯ್ದೆಯೊಳಗೆ ಸೇರಿಸುವ ಕುರಿತು ಚಿಂತನೆ ನಡೆದಿದೆ. ಪ್ರೀತಿ-ಪ್ರೇಮಕ್ಕೆ ಅಡ್ಡಿಯಿಲ್ಲ. ಆದರೆ, ಮತಾಂತರಕ್ಕಾಗಿ ಮದುವೆಯಾದರೆ ಅದು ತಪು್ಪ. ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಮತಾಂತರಕ್ಕಾಗಿ ಮದುವೆ ಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎಂಬುದು ಅಲ್ಲಿಯೇ ಸಾಬೀತಾಗುತ್ತದೆ. ಸಾಬೀತಾದರೆ ನಿಯಮಾವಳಿಗಳ ಪ್ರಕಾರ ಕ್ರಮ ಜರುಗಿಸಲಾಗುವುದು.

| ಆರಗ ಜ್ಞಾನೇಂದ್ರ ಗೃಹ ಸಚಿವ

ಕರಾವಳಿ ಭಾಗದಲ್ಲಿ ಹೆಚ್ಚು: ಮತಾಂತರ ಮಾಡುವುದಕ್ಕಾಗಿಯೇ ಲವ್ ಜಿಹಾದ್ ನಡೆಯುತ್ತಿದ್ದು, ಕರಾವಳಿ ಭಾಗದಲ್ಲಿ ಈ ಹಾವಳಿ ಹೆಚ್ಚಿದೆ ಎಂಬ ಆರೋಪವಿದೆ. ಲಭ್ಯ ಮಾಹಿತಿ ಪ್ರಕಾರ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಜಾಸ್ತಿ. ಕರ್ನಾಟಕದಲ್ಲಿ ಕಡಿಮೆ. ಹಾಗಾಗಿ, ಪ್ರತ್ಯೇಕ ಕಾಯ್ದೆ ಬದಲು ಮತಾಂತರ ನಿಷೇಧ ಕಾಯ್ದೆಯೊಳಗಿನ ಅಂಶಗಳನ್ನು ಲವ್ ಜಿಹಾದ್ ತಡೆಗೆ ಸೇರಿಸುವ ಕುರಿತು ಸರ್ಕಾರ ಸದ್ದಿಲ್ಲದೇ ತಯಾರಿ ನಡೆಸಿದೆ. ಪ್ರಸ್ತಾವಿತ ಮತಾಂತರ ಮಸೂದೆ ಪ್ರಕಾರ, ಎಸ್ಸಿ-ಎಸ್ಟಿ ಸಮುದಾಯದವರು, ಅಪ್ರಾಪ್ತರು, ಮಹಿಳೆಯರು, ಬುದ್ಧಿ ಮಾಂಧ್ಯರನ್ನು ಮತಾಂತರ ಮಾಡಿದವರಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮತಾಂತರಕ್ಕಾಗಿಯೇ ಲವ್ ಜಿಹಾದ್ ನಡೆದಿರುವುದು ಸಾಬೀತಾದರೆ ಯಾವ ಶಿಕ್ಷೆ ನೀಡಬೇಕು? ಇದಕ್ಕಾಗಿ ಪ್ರತ್ಯೇಕ ಸೆಕ್ಷನ್ ಸೇರಿಸಬೇಕೆ? ಎಂಬು ದರ ಕುರಿತು ರಾಜ್ಯ ಸರ್ಕಾರ, ತಜ್ಞರೊಂದಿಗೆ ಚರ್ಚೆ ನಡೆಸಿದೆ.

ಸಿಂಧುತ್ವದ ಜಿಜ್ಞಾಸೆ: ಮತಾಂತರವಾದರೆ ಸರ್ಕಾರಿ ಸವಲತ್ತುಗಳ ಕಡಿತ, ಶಿಕ್ಷೆ, ಜಾತಿ-ವರ್ಗವಾರು ಪ್ರಕಾರ ದಂಡನಾ ಕ್ರಮಗಳು ಪ್ರಸ್ತಾವಿತ ವಿಧೇಯಕದ ಕರಡು ಒಳಗೊಂಡಿದೆ ಎಂದು ಹೇಳಲಾಗಿದೆ. ಇಂತಹ ಕಠಿಣ ಕ್ರಮಗಳಿಗೆ ಸಾಂವಿಧಾನಿಕ ಮಾನ್ಯತೆ, ಮೀಸಲು ಸವಲತ್ತು ಕಡಿತ ಅಂಶವು ಕೋರ್ಟ್ ಗಳಲ್ಲಿ ಸಿಂಧುವಾಗಲಿದೆಯೇ? ಎಂಬ ಜಿಜ್ಞಾಸೆಯ ಸುಳಿಗೆ ಸರ್ಕಾರ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ. ಸ್ವಲ್ಪ ಎಡವಿದರೂ ನ್ಯಾಯಾಲಯಗಳಲ್ಲಿ ಬಿದ್ದು ಹೋಗುವ ಸಾಧ್ಯತೆಯಿದ್ದು, ಮತಾಂತರ ನಿಯಂತ್ರಣ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ಈ ಕಾರಣಕ್ಕೆ ಉಭಯ ಸದನಗಳಲ್ಲಿ ಮಂಡಿಸುವ ತನಕ ಮಸೂದೆ ವಿಚಾರ ಗೌಪ್ಯತೆ ಕಾಯ್ದುಕೊಳ್ಳುತ್ತಿದ್ದು, ಪ್ರತಿಪಕ್ಷಗಳು ಹಾಗೂ ಜನರ ಗಮನ ಬೇರೆಡೆಯಿಂದ ಕಾಯ್ದೆಯತ್ತ ಸೆಳೆಯುವ ತಂತ್ರಗಾರಿಕೆಯ ಆಗಿರಬಹುದು ಎಂಬ ತರ್ಕವಿದೆ.

ವಿಹಿಂಪ ಧರ್ಮರಕ್ಷಾ ಅಭಿಯಾನ

ಬೆಂಗಳೂರು: ರಾಷ್ಟ್ರಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಮತಾಂತರ ತಡೆಗೆ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಡಿ.20 ರಿಂದ 31ರವರೆಗೆ ರಾಷ್ಟ್ರವ್ಯಾಪಿ ‘ಧರ್ಮ ರಕ್ಷಾ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದು ಪರಿಷದ್ ಸಹ ಪ್ರಧಾನ ಕಾರ್ಯದರ್ಶಿ ಸ್ಥಾಣು ಮಾಲಯನ್ ತಿಳಿಸಿದ್ದಾರೆ. ಚಾಮರಾಜಪೇಟೆಯ ವಿಹಿಂಪ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದು ಧರ್ಮದ ವಿನಾಶಕ್ಕೆ ಈಗಲೂ ಕಾನೂನು ಬಾಹಿರ ಮತಾಂತರ, ಲವ್ ಜಿಹಾದ್, ಅಲಾಲ್ ಚಟುವಟಿಕೆಯಂತಹ ಹಲವು ಷಡ್ಯಂತ್ರಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಧರ್ಮ ರಕ್ಷಾ ಅಭಿಯಾನದ ಮಾಡಲಾಗುತ್ತಿದೆ. ಕೋವಿಡ್​ನಂಥ ಸಂಕಷ್ಟಮಯ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಕಷ್ಟದಲ್ಲಿರುವ ಜನರನ್ನು ಮತಾಂತರ ಮಾಡಲು ಪ್ರಯತ್ನಿಸಲಾಗಿದೆ. ರಾಜ್ಯದಲ್ಲಿ ಆಮಿಷದ ಮತಾಂತರ ಎಲ್ಲೆ ಮೀರಿ ನಡೆಯುತ್ತಿದ್ದು, ಕೂಡಲೇ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎಂದು ತಿಳಿಸಿದರು.

ಬಡ ಕುಟುಂಬಗಳನ್ನು ಹಣ ಮತ್ತು ಒಳ್ಳೆಯ ಭೋಜನ ಕೊಡಿಸುವ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ. ಜತೆಗೆ, ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತ ಜನರ ಮತಾಂತರಕ್ಕೂ ಪ್ರಯತ್ನಿಸಿರುವುದು ಹಿಂದು ಧರ್ಮಕ್ಕೆ ಬಂದಿರುವ ಆತಂಕವಾಗಿದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮನವಿ ಮಾಡಿದ್ದೇವೆ.| ಕೇಶವ್ ಹೆಗಡೆ ವಿಹಿಂಪ ಬೆಂಗಳೂರು ಮದ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net