

ಸೋಮವಾರಪೇಟೆ: ನಾವು ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಮಹಿಳಾ ಸಮಾಜದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದ ಶಿಬಿರಾರ್ಥಿಗಳು ಸಮಾಜ ಸೇವಕ ಹರಪಳ್ಳಿ ರವೀಂದ್ರ ಅವರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದರು.
ರವೀಂದ್ರ ಅವರ ಬೆಳೆದು ಬಂದ ಹಾದಿ, ಸಮಾಜಸೇವೆಯ ಉದ್ದೇಶ, ಅದರಿಂದ ಸಿಗುವ ತೃಪ್ತಿಯ ಬಗ್ಗೆ ಮಕ್ಕಳು ಪ್ರಶ್ನೆಗಳನ್ನು ಕೇಳಿದರು. ನಂತರ ಮಾತನಾಡಿದ ರವೀಂದ್ರ ಅವರು, ರೈತ ಕುಟುಂಬದ ಸದಸ್ಯನಾದ ನನಗೆ ಕಷ್ಟದ ಜೀವನದಲ್ಲೇ ವಿದ್ಯಾಭ್ಯಾಸ ಮಾಡಬೇಕಿತ್ತು. ವಿದ್ಯಾಭ್ಯಾಸಕ್ಕಾಗಿ ಹಲವರಿಂದ ಹಣ ಕೇಳಲೇಬೇಕಾದ ಅನಿವಾರ್ಯತೆಯಿತ್ತು. ಏನಾದರೂ ಸಾಧನೆ ಮಾಡಲೇಬೇಕೆಂಬ ಛಲದಿಂದ ಬರಿಗೈಯಲ್ಲಿ ಬೆಂಗಳೂರು ಸೇರಿಕೊಂಡು ಹತ್ತು ವರ್ಷ ಕಷ್ಟಪಟ್ಟು ದುಡಿದು, ಹಣವನ್ನು ಸಂಪಾದಿಸಿದ್ದೇನೆ. ನನ್ನ ಸಾಧನೆಯ ಹಿಂದೆ ತ್ಯಾಗಗಳನ್ನು ಮಾಡಬೇಕಾದ ಅನಿವಾರ್ಯತೆಯೂ ಇತ್ತು. ನಾನು ದುಡಿದ ಸ್ವಲ್ಪ ಭಾಗವನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಪ್ರತಿವರ್ಷ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ನೋಟ್‌ಪುಸ್ತಕಗಳನ್ನು ವಿತರಿಸುತ್ತೇನೆ. ಇನ್ನು ಅನೇಕ ಜನಕಲ್ಯಾಣಕ್ಕಾಗಿ ಸಹಾಯ ಮಾಡಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಸ್ತು, ನಿರಂತರ ಕಲಿಕೆ, ಛಲ, ಗುರಿಯೊಂದಿಗೆ ಮುನ್ನಡೆದರೆ ಪ್ರತಿಯೊಬ್ಬರು ಸಾಧನೆ ಮಾಡಬಹುದು. ಮಕ್ಕಳು ಮೊಬೈಲ್, ಸಾಮಾಜಿಕ ಜಾಲತಾಣಗಳ ದಾಸರಾದರೆ, ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದ ಅವರು, ಕಲಿಕೆಗೆೆ ಮಾತ್ರ ಮೊಬೈಲ್‌ಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಭ್ರಷ್ಟರನ್ನು ಕಂಡಾಗ ಅಸಹ್ಯಪಡಬೇಕು. ಅಂತಹವರಿಂದ ದೂರವಿರಬೇಕು. ಸವಾಲುಗಳನ್ನು ಎದುರಿಸಿ ಗೆಲ್ಲುವ ಛಲ ಇರಬೇಕು. ಯಶಸ್ಸು ಸಿಗುವವರೆಗೆ ಕಷ್ಟಪಡಬೇಕು. ಯಶಸ್ಸು ಗಳಿಸಿದ ನಂತರ ನಿಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅರ್ಥಿಕ ಸಬಲತೆಯ ನಂತರ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಸಮಾಜಸೇವೆಯನ್ನು ಮುಂದುವರಿಸಬೇಕು ಎಂದು ಹೇಳಿದರು. ಹಾಸನ ಮಾಸ್ಟರ್ ಬ್ರೈನ್ ಸೆಂಟರ್‌ನ ರಾಧ ಕೈಬರಹ ಸುಧಾರಣೆ ಬಗ್ಗೆ ತಿಳಿಸಿಕೊಟ್ಟರು. ಪ್ರತಿಷ್ಠಾನದ ಸಂಸ್ಥಾಪಕರಾದ ಗೌತಮ್ ಕಿರಗಂದೂರು, ಸುಮನಾ ಮ್ಯಾಥ್ಯು ಇದ್ದರು.