

ಮೇಲುಕೋಟೆ: ಕರ್ನಾಟಕದ ಪ್ರಖ್ಯಾತ ನರಸಿಂಹ ಸ್ವಾಮಿಯ ದೇಗುಲಗಳಲ್ಲಿ ಒಂದಾದ ಮೇಲುಕೋಟೆ ಬೆಟ್ಟದ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದ ಚಿಕ್ಕಗೋಪುರಕ್ಕೆ ಗುರುವಾರ ಸಂಜೆ ತೆಂಗಲೆನಾಮ ಹಾಕಲಾಗಿದ್ದು, ಇದರಿಂದ 52 ವರ್ಷಗಳ ವಿವಾದ ತಾರ್ಕಿಕ ಅಂತ್ಯ ಕಂಡಂತಾಗಿದೆ.
1972ರಲ್ಲಿ ಯೋಗನರಸಿಂಹಸ್ವಾಮಿ ದೇಗುಲದ ಚಿಕ್ಕಗೋಪುರ ಜೀರ್ಣೋದ್ಧಾರದ ವೇಳೆ ಪಾಂಡವಪುರ ತಹಸೀಲ್ದಾರ್ ಆದೇಶದಂತೆ ತೆಂಗಲೆನಾಮ ತೆಗೆದು ವಡಗಲೆನಾಮ ಹಾಕಲಾಗಿತ್ತು. ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿದ್ದು ವಿವಾದವಾಗಿ ಪ್ರಕರಣ 1973ರಲ್ಲಿ ಹೈಕೋರ್ಟ್ ತಲುಪಿತ್ತು. ಹೈಕೋರ್ಟ್ ಪ್ರಕರಣವನ್ನು ಪಾಂಡವಪುರ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳುವಂತೆ ಆದೇಶಿತ್ತು.
ತೀರ್ಮಾನ ಹೊರಬಿದ್ದ ನಂತರ ಮತ್ತೆ ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೇಲ್ಮನವಿ ದಾಖಲಾಗಿ 22 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯ 29 ಪುಟಗಳ ತೀರ್ಪು ನೀಡಿ ವಡಗಲೆನಾಮ ತೆಗೆದು ಚಿಕ್ಕಗೋಪುರಕ್ಕೆ ತೆಂಗಲೆ ನಾಮ ಅಳವಡಿಸುವಂತೆ ಆದೇಶಿಸಿದೆ.
ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಧಾರ್ಮಿಕ ದತ್ತಿ ಆಯುಕ್ತರು ನೀಡಿದ ನಿರ್ದೇಶನದಂತೆ ಗುರುವಾರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪಾರುಪತ್ತೇಗಾರ ಶ್ರೀಧರ್, ಅರ್ಚಕ ನಾರಾಯಣಭಟ್, ಅಡುಗೆಮನೆ ಕೈಂಕರ್ಯಪರರಾದ ಎಂ.ಕೆ.ರಾಮಸ್ವಾಮಿ ಅಯ್ಯಂಗಾರ್, ಅಧ್ಯಾಪಕರಾದ ಶ್ರೀರಂಗಂ ಶಲ್ವ ನಾರಾಯಣನ್, ವಿದ್ವಾನ್ ಬಿ.ವಿ.ಆನಂದಾಳ್ವಾರ್ ಸಮಕ್ಷಮದಲ್ಲಿ ಯೋಗಾನರಸಿಂಹಸ್ವಾಮಿ ದೇವಾಲಯದ ಒಳಭಾಗದ ಚಿಕ್ಕಗೋಪುರದ ಮೇಲಿದ್ದ ವಡಗಲೆ ನಾಮವನ್ನು ತೆಗೆದು ತೆಂಗಲೆ ನಾಮವನ್ನು ಹಾಕಿಸಿದರು.
ವಿವಾದವೇನು?: ಮೈಸೂರಿನ ಮಹಾರಾಜ ಶ್ರೀಕೃಷ್ಣರಾಜ ಒಡೆಯರ್ ಅವರು ದೇವಾಲಯ ತೆಂಗಲೆ ಸಂಪ್ರದಾಯವಾಗಿದ್ದು ದೇವರಿಗೆ ಮತ್ತು ಗೋಪುರಕ್ಕೆ ತೆಂಗಲೆನಾಮ ಹಾಕಬೇಕು ಎಂದು ಹುಕುಂ ಹೊರಡಿಸಿದ್ದರು. ಆದರೆ 1972ರಲ್ಲಿ ಕೋಲ್ಕತ್ತ ವಿಷ್ಣುದೇವಾಲಯಗಳ ಜೀರ್ಣೋದ್ಧಾರ ಟ್ರಸ್ಟ್ ಯೋಗನರಸಿಂಹನ ಬೆಟ್ಟದ ಜೀರ್ಣೋದ್ದಾರ ಮಾಡುವ ವೇಳೆ ಪಾಂಡವಪುರ ತಹಸೀಲ್ದಾರ್ ಚಿಕ್ಕಗೋಪುರಕ್ಕೆ ವಡಗಲೆನಾಮ ಹಾಕಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ತೆಂಗಲೆ ಸಂಪ್ರದಾಯದ ಆರ್.ಕೃಷ್ಣಯ್ಯಂಗಾರ್, ಅಳಹಿಯಮನವಾಳನ್ ಹಾಗೂ ಅದ್ಯಾಪಕರು ನಿಯಮಬಾಹಿರವಾದ ತಹಸೀಲ್ದಾರ್ ಆದೇಶ ರದ್ದು ಮಾಡಿ ತೆಂಗಲೆ ನಾಮ ಅಳವಡಿಸಬೇಕು ಎಂದು 1973ರಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸಿವಿಲ್ ಕೋರ್ಟ್‌ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವಂತೆ ಆದೇಶ ನೀಡಿತ್ತು.
ಅರ್ಜಿದಾರರು 1973ರಲ್ಲಿ ಹೈಕೋರ್ಟ್ ಆದೇಶದಂತೆ ಪಾಂಡವಪುರ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಲಯ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಮತ್ತು ಬೆಟ್ಟದ ಯೋಗನರಸಿಂಹಸ್ವಾಮಿ ದೇವಾಲಯಗಳು ತೆಂಗಲೆ ಸಂಪ್ರದಾಯ ದೇಗುಲಗಳು ಎಂದು 2001ರಲ್ಲಿ ತೀರ್ಪು ನೀಡಿತು. ಆದರೆ ಯೋಗನರಸಿಂಹಸ್ವಾಮಿ ಬೆಟ್ಟದ ಚಿಕ್ಕ ಗೋಪುರದಲ್ಲಿದ್ದ ವಡಗಲೆ ನಾಮ ತೆಗೆಯಲು ಅವಕಾಶ ನೀಡಲಿಲ್ಲ.
ಕಿರಿಯ ಸಿವಿಲ್ ನ್ಯಾಯಾಲಯದ ಆದೇಶವನ್ನು ಪಾಂಡವಪುರ ಹಿರಿಯ ಶ್ರೇಣಿಯ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ ಅರ್ಜಿದಾರರು 2002ರಲ್ಲಿ ಮೇಲ್ಮನವಿ ದಾಖಲಿಸಿದ್ದರು. ಹಿರಿಯ ಶ್ರೇಣಿಯ ನ್ಯಾಯಾಲಯ 22ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿ ಚಿಕ್ಕಗೋಪುರದ ಮೇಲೆ ಅಳವಡಿಸಿದ್ದ ವಡಗಲೆನಾಮ ತೆಗೆದು ಹಳೆಯ ಸಂಪ್ರದಾಯದ ತೆಂಗಲೆ ನಾಮ ಹಾಕಬೇಕು ಎಂದು ಆದೇಶ ನೀಡಿದೆ. ಇದರಿಂದಾಗಿ ಐದು ದಶಕಗಳ ಚಿಕ್ಕಗೋಪುರದ ನಾಮದ ವಿವಾದ ತಾರ್ಕಿಕ ಅಂತ್ಯ ಕಂಡಿದೆ. ಅರ್ಜಿದಾರರಾದ ಕೃಷ್ಣಯ್ಯಂಗಾರ್ ಅಳಹಿಯಮಣವಾಳನ್, ಪ್ರತಿವಾದಿಗಳಾಗಿದ್ದ ಕಸ್ತೂರಿ ನಾರಾಯಣಯ್ಯಂಗಾರ್, ಜಿವಿಎನ್ ಆಚಾರ್ ನಿಧನ ಹೊಂದಿದ್ದಾರೆ.