

ಕೊಳ್ಳೇಗಾಲ: ಅಯೋಧ್ಯೆ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಹನುಮ ಧ್ವಜ ನೆಟ್ಟು, ನಂತರ ಧ್ವಜ ಇಲ್ಲೇ ಇರಬೇಕು ಅಂದರೆ ಹೇಗೆ ಸಾಧ್ಯ? ಪೂಜೆ ಬಳಿಕ ತೆಗೆಯಬೇಕಲ್ಲವೇ ಎಂದು ರೇಷ್ಮೆ ಹಾಗೂ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಪ್ರಶ್ನಿಸಿದರು.
ಕೊಳ್ಳೇಗಾಲದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ವಿಷಯದಲ್ಲಿ ಬಿಜೆಪಿ ವಿವಾದ ಸೃಷ್ಟಿಸುತ್ತಿದೆ ಎಂದು ಕಿಡಿಕಾರಿದರು.
ಕೆರಗೂಡು ಗ್ರಾಮದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಎಷ್ಟು ದಿನಗಳಿಂದ ಇತ್ತು? ಯಾವ ಕಾಲದಿಂದ ಇತ್ತು ಅಂತ ಉತ್ತರಿಸಲಿ. ರಾಮನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಹನುಮನ ಧ್ವಜ ನೆಟ್ಟು, ಅದು ಇಲ್ಲಿಯೇ ಇರಬೇಕು ಅಂದರೆ ಹೇಗೆ ಸಾಧ್ಯವಾಗುತ್ತದೆ? ಪೂಜೆ ಮುಗಿದ ಮೇಲೆ ತೆಗೆಯಬೇಕಲ್ಲವೇ? ಬಿಜೆಪಿಯವರು ಸರ್ಕಾರದ ವಿರುದ್ಧ ಸಣ್ಣಪುಟ್ಟ ವಿಚಾರವನ್ನೂ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ. ಕಾಂಗ್ರೆಸ್ ಹಿಂದು ವಿರೋಧಿ ಎಂಬ ಪಟ್ಟ ಕಟ್ಟಲು ಬಿಜೆಪಿ ಯತ್ನಿಸುತ್ತಿದೆ. ಅದು ಸಾಧ್ಯವಿಲ್ಲ, ಅದನ್ನು ಜನ ಒಪ್ಪುವುದಿಲ್ಲ ಎಂದರು.
ನಾವು ಕೂಡ ಶ್ರೀರಾಮ, ಈಶ್ವರ, ಆಂಜನೇಯ, ದೊಡ್ಡಮ್ಮ, ಚಿಕ್ಕಮ್ಮ, ತಾಯಮ್ಮ ಎಲ್ಲರನ್ನೂ ಪೂಜೆ ಮಾಡುತ್ತೇವೆ ಎಂದರು.