

ಕೆ.ಎಂ.ದೊಡ್ಡಿ: ಇಲ್ಲಿನ ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಂಸ್ಥೆಯ ಸಂಸ್ಥಾಪಕ ಡಿ. ದಾಸೇಗೌಡ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ಕಾಪಾಡಬೇಕಾದ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಗೆ ಪರಿಸರ ನಾಶಗೊಂಡರೆ ಮಾನವ ಕುಲಕ್ಕೆ ಉಳಿಗಾಲವಿಲ್ಲ. ನೆಲ, ಜಲ, ಗಾಳಿ ಗಿಡ-ಮರ ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪರಿಸರವನ್ನು ಸಂರಕ್ಷಣೆ ಮಾಡುವುದರ ಜತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು ಎಂದರು.
ಐಷಾರಾಮಿ ಬದುಕಿನ ಹೆಸರಿನಲ್ಲಿ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಯದಿದ್ದಲ್ಲಿ ಭವಿಷ್ಯದಲ್ಲಿ ಘೋರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ನಿಯಂತ್ರಣ ಮಾಡಬೇಕಾಗಿದೆ. ಎಳೆಯ ಪ್ರಾಯದ ಮಕ್ಕಳಲ್ಲಿ ಗಿಡಗಳನ್ನು ಬೆಳೆಸುವ ಮನೋಭಾವವನ್ನು ಹೆಚ್ಚೆಚ್ಚು ಮೂಡಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ದಾಸೇಗೌಡ ವಹಿಸಿದ್ದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸಂದೇಶವನ್ನು ಮಕ್ಕಳಿಗೆ ತಿಳಿಸಿದರು. ಜತೆಗೆ ಮಕ್ಕಳಿಂದ ಪರಿಸರ ಸಂರಕ್ಷಣೆ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ನಾಟಕವನ್ನು ಅಭಿನಯಿಸಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಘೋಷಣೆಗಳನ್ನು ಹೇಳಿ ಪರಿಸರ ದಿನ ಆಚರಿಸಿದರು. ಮುಖ್ಯ ಶಿಕ್ಷಕ ರವಿಶಂಕರ್, ಸಹ ಶಿಕ್ಷಕರಾದ ಸ್ವರೂಪ, ಶ್ವೇತಾ, ಮಮತಾ, ರೂಪಿಣಿ, ಸವಿತಾ, ಮಾಲಾ, ಉಷಾರಾಣಿ, ಸಹನಾ, ತೇಜಸ್ವಿನಿ, ರಶ್ಮಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.