

ನರಗುಂದ: ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ಅಹಿಂದ ಸಂಘಟನೆ ಕಾರ್ಯಕರ್ತರು ತಹಸೀಲ್ದಾರ್ ಶ್ರೀಶೈಲ್ ತಳವಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಅಹಿಂದ ಸಂಘಟನೆ ನರಗುಂದ ತಾಲೂಕು ಅಧ್ಯಕ್ಷ ಚನ್ನಬಸು ಹುಲಜೋಗಿ ಮಾತನಾಡಿ, ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿರುವ ಪ್ರತಿಯೊಂದು ಇಲಾಖೆಯಲ್ಲಿಯೂ ಏಜೆಂಟರ ಹಾವಳಿ ಮಿತಿಮೀರಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಕೆಲಸ ಕಾರ್ಯಗಳಿಗೆ ಆಗಮಿಸುವ ಅಮಾಯಕ ರೈತರು, ಮುಗ್ದ ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಿ ಏಜೆಂಟರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು ಸಾರ್ವಜನಿಕರಿಗೆ ನೆಮ್ಮದಿಯ ವಾತಾವರಣ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಅಹಿಂದ ಸಂಘಟನೆ ನರಗುಂದ ತಾಲೂಕು ಪ್ರಧಾನ ಕಾರ್ಯದರ್ಶಿ ಈಶ್ವರ ಜೋತೆಣ್ಣವರ, ರವಿ ತಳವಾರ, ಶಿವಪ್ಪ ಪೂಜಾರ, ಪ್ರಮೋದ ತಳವಾರ, ಖಾಜೇಸಾಬ ನದಾಫ್ ಉಪಸ್ಥಿತರಿದ್ದರು.