

ಅರಸೀಕೆರೆ: ಪ್ರಕೃತಿ ಸಮತೋಲನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಡಿವೈಎಸ್‌ಪಿ ವಿಜಯಕ್ರಾಂತಿ ಹೇಳಿದರು.
ನಗರದ ಆದಿಚುಂಚನಗಿರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸಕ್ತ ಸನ್ನಿವೇಶದಲ್ಲಿ ಬಿಸಿಲಿನ ಝಳ ಹೆಚ್ಚಿದ್ದು ಬಿಸಿಗಾಳಿಯಿಂದ ಸಾವು, ನೋವು ಸಂಭವಿಸುತ್ತಿರುವುದು ಆತಂಕಕಾರಿ ಸಂಗತಿ. ಅತಿಯಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ಭೂಮಿ ಮತ್ತಷ್ಟು ಮಲಿನವಾಗಲಿದೆ ಎಂದರು.
ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು, ಆದಿಚುಂಚನಗಿರಿಯಲ್ಲಿ ಐದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಸಸ್ಯಕಾಶಿಯನ್ನಾಗಿ ಮಾರ್ಪಡಿಸಿರುವುದು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಮನೆಗೊಂದು ಮಗು, ಮಗುವಿಗೊಂದು ಸಸಿ ಎನ್ನುವ ಪರಿಕಲ್ಪನೆಯಡಿ ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಬೆಳಸುವ ಮೂಲಕ ಪ್ರಕೃತಿ ಕಾಪಾಡಲು ಮುಂದಾಗೋಣ ಎಂದರು.
ಪ್ರಾಂಶುಪಾಲ ಡಾ.ಲಿಂಗರಾಜ್, ಯಾದಾಪುರ ತೇಜಸ್, ಮಂಜುನಾಥ್, ಉಪೇಂದ್ರ, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.