ಅರಣ್ಯ, ವನ್ಯಜೀವಿಗಳ ರಕ್ಷಣೆಗೆ ಪಣ ತೊಡಿ

10Kush03
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸಂಘದ ವತಿಯಿಂದ 69ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಅಂಗವಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸಿದರು. ಮುಖ್ಯಶಿಕ್ಷಕಿ ಎಚ್.ಎಸ್.ಸುಜಾತಾ, ಪ್ರೌಢಶಾಲಾ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಶಿಕ್ಷಕಿಯರು ಇದ್ದರು.
Published on

ಕುಶಾಲನಗರ: ಮುಂದಿನ ಪೀಳಿಗೆಗಾಗಿ ನಾವು ಅಳಿವಿನಂಚಿನಲ್ಲಿರುವ ಜೀವ ಪ್ರಭೇದಗಳನ್ನು ಸಂರಕ್ಷಿಸುವ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗಾಗಿ ನಾವು ಪಣ ತೊಡಬೇಕಿದೆ ಎಂದು ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಎಚ್.ಎಸ್.ಸುಜಾತಾ ಹೇಳಿದರು.

ಕುಶಾಲನಗರ ಸಮೀಪದ ಕೂಡ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಸೋಮವಾರ ನಮ್ಮ ನಡೆ ಪರಿಸರದೆಡೆಗೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ 69ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ 2023 ಕಾರ್ಯಕ್ರಮದಲ್ಲಿ ಮಕ್ಕಳಿಗೆ ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾತನಾಡಿದರು. ಅರಣ್ಯ ಮತ್ತು ವನ್ಯಜೀವಿಗಳನ್ನ ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು.

ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಅರಣ್ಯ ಮತ್ತು ವನ್ಯಜೀವಿಗಳು ಸಹಾಯ ಮಾಡುತ್ತವೆ. ನಾವು ವನ್ಯಜೀವಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂದರು.

ವನ್ಯಜೀವಿಗಳ ನಿರಂತರ ಅವನತಿಗೆ ಪ್ರಮುಖ ಕಾರಣವೆಂದರೆ ಮಾನವನ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಗಳು ಮತ್ತು ದುರಾಸೆಗಳು ಅರಣ್ಯ ನಾಶ ಮತ್ತು ಆವಾಸಸ್ಥಾನದ ನಾಶಕ್ಕೆ ಕಾರಣವಾಗಿವೆ ಎಂದರು.

ಕಾಡಿನಲ್ಲಿ ವಾಸಿಸುವ ಪ್ರಾಣಿಗಳು, ಪಕ್ಷಿಗಳು, ಕೀಟಗಳು ಇತ್ಯಾದಿಗಳನ್ನು ಒಳಗೊಂಡಿರುವ ವನ್ಯಜೀವಿಗಳು ರಾಷ್ಟ್ರೀಯ ಸಂಪನ್ಮೂಲವಾಗಿದೆ ಎಂದು ಪ್ರೇಮಕುಮಾರ್ ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ವಿನೋದ ತುಂಬಿದ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಗ್ರಾಮದಲ್ಲಿ ನಡೆಸಿದ ಜಾಗೃತಿ ಅಭಿಯಾನದಲ್ಲಿ ಶಾಲಾ ಶಿಕ್ಷಕರಾದ ಜಿ.ನಳಿನಿ, ಟಿ.ಆರ್.ಉಷಾ, ಎಚ್.ಪಿ.ರೂಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net