ಮುಂದುವರಿದ ಮಳೆ ಅಬ್ಬರ

ಮುಂದುವರಿದ ಮಳೆ ಅಬ್ಬರ
Published on

ಹಾಸನ: ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನಜೀವನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುವುದು ಮಾತ್ರವಲ್ಲದೆ ವಿವಿಧೆಡೆ ಹಾನಿಯೂ ಸಂಭವಿಸಿದೆ.

ಬುಧವಾರ ಸಂಜೆ 7 ರಿಂದ ಮಧ್ಯರಾತ್ರಿ 1ರ ವರೆಗೆ ಎಡೆಬಿಡದೆ ಮಳೆ ಸುರಿಯಿತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಹಾರಿಸಲು ಸಿದ್ಧತೆ ಮಾಡಿಕೊಂಡವರ ಯೋಜನೆಗೆ ವರುಣ ತಣ್ಣೀರೆರಚಿದ್ದು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ಭರ್ತಿಯಾಗಿ ಕರೆ ಕೋಡಿ ಒಡೆದು ಅಪಾರ ನಷ್ಟ ಸಂಭವಿಸಿದೆ.

ಮಳೆಯ ಹೊಡೆತಕ್ಕೆ ಹಾಸನ ಮರ್ಕುಲಿ ಮಾರ್ಗದ ಕೌಶಿಕ ಕೆರೆ ಕೋಡಿ ಒಡೆದು ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದೆ. ಸಾವಂತನಹಳ್ಳಿಯ ಶ್ರೀ ರಾಮದೇವರ ಕಟ್ಟೆ ಒಡೆದು ಹೊಲಗಳಿಗೆ ನೀರು ನುಗ್ಗಿರುವುದರಿಂದ ಬೆಳೆ ನಷ್ಟವುಂಟಾಗಿದೆ.

ಮರ್ಕನಹಳ್ಳಿ, ಗುಡುಗನಹಳ್ಳಿ, ಸಾವಂತನಹಳ್ಳಿ, ಚಿಗಳ್ಳಿ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳು ಭರ್ತಿಯಾಗಿ ಹಲವು ಸಂಪರ್ಕ ರಸ್ತೆಗಳು ಜಲಾವೃತವಾಗಿವೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಬಿದ್ದಿರುವುದರಿಂದ ರಾತ್ರಿಪೂರ್ತಿ ಕತ್ತಲಲ್ಲೆ ಕಾಲ ದೂಡುವಂತಾಯಿತು. ವಿಷಯ ತಿಳಿದು ಸಂಸದ ಶ್ರೇಯಸ್ ಪಟೇಲ್ ಅವರು ಕೌಶಿಕ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮನೆಗಳಿಗೆ ನುಗ್ಗಿದ ನೀರು: ಹಾಸನದ ಒಂಬತ್ತನೇ ವಾರ್ಡ್‌ನ ರವೀಂದ್ರ ನಗರದಲ್ಲಿ ಮಳೆ ನೀರು ಮನೆಗೆ ನುಗ್ಗಿ ರಾತ್ರಿಯಿಡೀ ನೀರು ಹೊರ ಹಾಕಲು ಹರಸಾಹಸ ಪಡುವಂತಾಯಿತು. ಇಳಿಜಾರು ಪ್ರದೇಶವಾದ ರಂಗೋಲಿ ಹಳ್ಳದ ಬಹುತೇಕ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸಿದರು.

ಅರಕಲಗೂಡು ತಾಲೂಕು ಕೊಣನೂರು ಹೋಬಳಿ ವ್ಯಾಪ್ತಿಯಲ್ಲಿ ನೀರು ಮನೆಯೊಳಗೆ ನುಗ್ಗಿ ಪರದಾಡುವಂತಾಯಿತು. ಸಂಜೆ 5 ಗಂಟೆಗೆ ಶುರುವಾದ ಮಳೆ ರಾತ್ರಿ 10.30ರ ವರೆಗೆ ಬಿಡುವು ನೀಡದೆ ಸುರಿಯಿತು. ದೀಪಾವಳಿ ಹಬ್ಬದ ಪ್ರಯುಕ್ತ ಸಾಮಾಗ್ರಿ ಖರೀದಿಗೆ ಹಳ್ಳಿಗಳಿಂದ ಬಂದವರು ವಾಪಸ್ ಹೋಗಲು ಸಾಧ್ಯವಾಗದಂತಾಯಿತು. ಪಟ್ಟಣದ ಕೆಲವು ಅಂಗಡಿಗಳಿಗೆ ನೀರು ನುಗ್ಗಿ ವ್ಯಾಪಾರಕ್ಕೆ ಅಡಚಣೆಯುಂಟು ಮಾಡಿತು. ಪಟ್ಟಣದ ಬಾರ್‌ಗೆ ನೀರು ನುಗ್ಗಿದ್ದರಿಂದ ಮದ್ಯ ಪ್ರಿಯರು ತಡರಾತ್ರಿವರೆಗೆ ಅಲ್ಲೇ ಕೂರುವಂತಾಯಿತು.

ಲಕ್ಕನಹಳ್ಳಿ ಗ್ರಾಮದ ರಾಘವೇಂದ್ರ ಅವರಿಗೆ ಸೇರಿದ ಎರಡು ಎಕರೆ ಅಡಕೆ ತೋಟ ಸಂಪೂರ್ಣ ನೀರಿನಿಂದ ಜಲಾವೃತವಾಗಿದೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುವ ಆತಂಕ ಅವರನ್ನು ಕಾಡುತ್ತಿದೆ.

ಏಕಾಏಕಿ ಕುಸಿದ ಮನೆ

ಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿ ನೇರಳೆ ಗ್ರಾಮದಲ್ಲಿ ಶಿವಶಂಕರ್ ಅವರ ವಾಸದ ಮನೆ ಗೋಡೆ ಭಾರಿ ಮಳೆಗೆ ಕುಸಿದಿದೆ. ಬುಧವಾರ ರಾತ್ರಿ ಕುಟುಂಬ ಸದಸ್ಯರೆಲ್ಲರೂ ಕೊಠಡಿಯಲ್ಲಿ ಮಲಗಿದ್ದರು. ಗೋಡೆ ಕುಸಿಯುವ ಶಬ್ದ ಕೇಳುತ್ತಿದ್ದಂತೆ ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ವಸ್ತುಗಳು, ದವಸ ಧಾನ್ಯಗಳು ಮಣ್ಣು ಪಾಲಾಗಿವೆ. ಮನೆ ಧರೆಗುರುಳಿರುವುದರಿಂದ ಕುಟುಂಬ ಬೀದಿಗೆ ಬರುವಂತಾಗಿದೆ.

ಹೇಮಾವತಿ ಅಚ್ಚುಕಟ್ಟೆ ಪ್ರದೇಶದಲ್ಲಿ ಎಚ್ಚರಿಕೆ: ಹೇಮಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ವರುಣನ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ. 2922 ಅಡಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ 2921.50 ಅಡಿ ನೀರಿದೆ. 37.103 ಟಿಎಂಸಿ ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ಇದಾಗಿದ್ದು, ಈಗ 36.620 ಟಿಎಂಸಿ ನೀರು ಸಂಗ್ರಹವಾಗಿದೆ. 16394 ಕ್ಯೂಸೆಕ್ ಒಳ ಹರಿವಿದ್ದು, 4600 ಹೊರ ಹರಿವು ಇದೆ.

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವ ಸಾಧ್ಯತೆ ಇರುವುದರಿಂದ ಯಾವ ಸಮಯದಲ್ಲಾದರೂ ನದಿಗೆ ನೀರು ಬಿಡಬಹುದು. ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ಅಕ್ಕಪಕ್ಕದಲ್ಲಿ ವಾಸಿಸುವ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ಹೇಮಾವತಿ ಯೋಜನಾ ವೃತ್ತ ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಕೆ.ಜ್ಯೋತಿ ಕೋರಿದ್ದಾರೆ.

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಹೆತ್ತೂರು 78.6 ಮಿ.ಮೀ., ಹಾನುಬಾಳು 72.9 ಮಿ.ಮೀ. ಮತ್ತು ಯಸಳೂರು, ಕೊಣನೂರಿನಲ್ಲಿ ತಲಾ 70.7 ಮಿ.ಮೀ. ಮಳೆಯಾದ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net