ಜಲಪಾತಗಳತ್ತ ಹೋಗಬೇಡಿ! : ದಿಢೀರ್ ನೀರಿನ ಮಟ್ಟ ಏರಿಕೆಯಾಗುವುದರಿಂದ ಅಪಾಯ

jalapatha 11
Published on

ಮನೋಹರ್ ಬಳಂಜ ಬೆಳ್ತಂಗಡಿ

ಮಳೆಗಾಲದಲ್ಲಿ ಜಲಪಾತಗಳ ವೀಕ್ಷಣೆಗೆ ಇದ್ದ ನಿಷೇಧ ತೆರವುಗೊಳ್ಳುತ್ತಿದ್ದಂತೆ ಜನರು ಜಲಪಾತಗಳನ್ನು ನೋಡಲು ಧಾವಿಸುತ್ತಿದ್ದಾರೆ. ಆದರೆ ನಿಷೇಧ ತೆರವುಗೊಂಡಿದ್ದರೂ ಈಗ ಜಲಪಾತಗಳ ವೀಕ್ಷಣೆ ಸುರಕ್ಷಿತವಲ್ಲ. ಕರಾವಳಿ ಭಾಗದಲ್ಲಿ ಮಳೆಯ ಬಿರುಸು ತುಸು ಕಡಿಮೆಯಾಗಿದೆ. ಆದರೆ ಘಟ್ಟ ಪ್ರದೇಶದಲ್ಲಿ ಈಗಲೂ ಭಾರಿ ಮಳೆಯಾಗುತ್ತಿದೆ. ಕೆಲವೊಮ್ಮೆ ಜಲಪಾತಗಳಿಗೆ ಒಮ್ಮಿಂದೊಮ್ಮೆಲೆ ನೀರು ನುಗ್ಗಿ ಬರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಜಲಪಾತದ ಬಳಿ ಇದ್ದರೆ ಅಪಾಯವಾಗುವ ಸಾಧ್ಯತೆಯಿರುವುದರಿಂದ ಜಲಪಾತಗಳ ಬಳಿಗೆ ಹೋಗುವುದು ಅಪಾಯಕಾರಿ.

ಜಲಪಾತ ವೀಕ್ಷಣೆಗೆ ನಿಷೇಧ ಹಿಂಪಡೆಯುತ್ತಿದ್ದಂತೆ ಮಳೆ ಇಲ್ಲದಿದ್ದರೂ ನದಿಗಳಲ್ಲಿ, ಜಲಪಾತಗಳಲ್ಲಿ ಸಾಮಾನ್ಯ ಪ್ರವಾಹದಂತೆ ಏಕಾಏಕಿ ನೀರು ಹರಿದಿದೆ. ನೇತ್ರಾವತಿ, ಮೃತ್ಯುಂಜಯ ನದಿಗಳನ್ನು ಸೇರುವ ಬೆಳ್ತಂಗಡಿ ತಾಲೂಕಿನ ಜಲಪಾತಗಳು ಇಂತಹ ವೇಳೆ ಭಾರಿ ಪ್ರಮಾಣದ ನೀರಿನೊಂದಿಗೆ ಧುಮ್ಮಿಕ್ಕುತ್ತವೆ. ಜಲಪಾತಗಳಲ್ಲಿ ಏಕಾಏಕಿ ಈ ರೀತಿ ನೀರು ಹರಿದು ಬರುವುದು ಅಪಾಯಕಾರಿ.

ಜಲಪಾತ ವೀಕ್ಷಣೆಗೆ ತೆರಳುವ ವೇಳೆ ಜಲಪಾತಗಳಲ್ಲಿ ಮಳೆ ಇಲ್ಲದಿದ್ದರೂ, ಹರಿದು ಬರುವ ನೀರು ಹೆಚ್ಚುವುದರಿಂದ ವೀಕ್ಷಣೆಗೆ ತೆರಳುವ ಮಂದಿ ಅಪಾಯಕ್ಕೆ ಸಿಲುಕಬಹುದು. ಬೆಳ್ತಂಗಡಿ ತಾಲೂಕಿನ ಎಳನೀರು, ಏರ್ಮಾಯಿ, ಕಡಮಗುಂಡಿ, ಬೊಳ್ಳೆ, ಬಂಗಾರಪಲ್ಕೆ ಮೊದಲಾದ ಜಲಪಾತಗಳು ಪಶ್ಚಿಮ ಘಟ್ಟದ ಕಡೆಯಿಂದ ಹರಿದು ಬರುತ್ತವೆ. ಅಲ್ಲಿ ಮಳೆ ಉಂಟಾದರೆ ಜಲಪಾತ ಧುಮುಕುವ ಪ್ರದೇಶದಲ್ಲಿ ಒಮ್ಮೆಲೆ ಭಾರಿ ಪ್ರಮಾಣದ ನೀರು ಹರಿದು ಬರುತ್ತದೆ. ಈ ವೇಳೆ ಜಲಪಾತ ಪರಿಸರದಲ್ಲಿ ಪ್ರವಾಸಿಗರು ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಕಳೆದ ವಾರ ಮಳೆ ಇಲ್ಲದಿದ್ದರೂ ನದಿಗಳಲ್ಲಿ ಭಾರಿ ಪ್ರಮಾಣದ ನೀರು ಆಗಾಗ ಹರಿದಾಗ ಜಲಪಾತ ಪ್ರದೇಶಗಳಲ್ಲೂ ಅತಿ ಹೆಚ್ಚಿನ ಪ್ರಮಾಣದ ನೀರಿನ ಧುಮ್ಮಿಕುವುದು ಕಂಡುಬಂದಿತ್ತು.

ಚಾರ್ಮಾಡಿ ಜಲಪಾತಗಳು

ಚಾರ್ಮಾಡಿ ಘಾಟಿಯಲ್ಲಿ ಮಳೆಗಾಲದಲ್ಲಿ ಉಂಟಾಗುವ ತಾತ್ಕಾಲಿಕ ಜಲಪಾತಗಳಲ್ಲೂ ಕಳೆದ ವಾರ ವಿಪರೀತ ನೀರು ಹರಿದಿತ್ತು. ಕೆಲವು ಕಡೆ ರಸ್ತೆವರೆಗೂ ಜಲಪಾತಗಳು ಧುಮ್ಮಿಕ್ಕಿ ಈ ಸಮಯ ಜಲಪಾತಗಳ ಮೇಲ್ಭಾಗದಿಂದ ಸಾಕಷ್ಟು ಮಣ್ಣು, ಕಲ್ಲು ,ಚಿಕ್ಕ ಗಾತ್ರದ ಬಂಡೆಗಳು ನೀರಿನೊಂದಿಗೆ ಬಂದು ರಸ್ತೆಗೆ ಬಿದ್ದಿದ್ದವು. ಚಾರ್ಮಾಡಿ ಘಾಟಿಯ ಜಲಪಾತಗಳಲ್ಲಿ ಪ್ರವಾಸಿಗರ ಅಟಾಟೋಪಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿಲ್ಲ. ಅಲ್ಲಲ್ಲಿ ವಾಹನ ನಿಲ್ಲಿಸಿ ಜಲಪಾತಗಳನ್ನು ವೀಕ್ಷಿಸುವ ಪ್ರವಾಸಿಗರ ಮೇಲೂ ಜಲಪಾತಗಳ ಮೇಲ್ಭಾಗದಿಂದ ಕಲ್ಲು ಬಂಡೆಗಳು ನೀರಿನೊಂದಿಗೆ ಬಂದು ಬೀಳುವ ಸಾಧ್ಯತೆ ಇದೆ.

ಗಡಾಯಿಕಲ್ಲಿಗೆ ಮುಂದುವರಿದ ನಿಷೇಧ

ಚಾರಣಿಗರ ಸ್ವರ್ಗ ಗಡಾಯಿಕಲ್ಲು(ನರಸಿಂಹಗಡ) ಹತ್ತಲು ಹೇರಿದ್ದ ನಿಷೇಧ ಮುಂದುವರಿದಿದೆ. ಪ್ರಸ್ತುತ ಜಲಪಾತ ಹಾಗೂ ಇತರ ಚಾರಣ ಪ್ರದೇಶಗಳ ವೀಕ್ಷಣೆಗೆ ಅವಕಾಶವಿದ್ದರೂ ಇಲ್ಲಿಗೆ ತೆರಳಲು ಅವಕಾಶ ಇಲ್ಲ. ಇಲ್ಲಿನ ಕಲ್ಲುಗಳು ವಿಪರೀತವಾಗಿ ಜಾರುವ ಕಾರಣ ಹಾಗೂ ಗಡಾಯಿಕಲ್ಲಿಗೆ ತೆರಳುವ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಇರುವುದರಿಂದ ನಿಷೇಧ ಮುಂದುವರಿದಿದೆ. ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭಯದ ಕಾರಣ ಗಡಾಯಿಕಲ್ಲು ಪ್ರವೇಶಕ್ಕೆ ನಿಷೇಧ ಇರುತ್ತದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗಡಾಯಿಕಲಿನಲ್ಲ್ಲಿ ವರ್ಷದ ಒಂದೆರಡು ತಿಂಗಳು ಮಾತ್ರ ಪ್ರವೇಶ ಅವಕಾಶ ಸಿಗುವ ಸಾಧ್ಯತೆ ಇದೆ.

ಸಂಜೆ ಏರುವ ನೀರು

ಕಳೆದ ಒಂದು ವಾರದಿಂದ ಮಳೆ ಇಲ್ಲದಿದ್ದರೂ ನದಿಗಳಲ್ಲಿ ನೀರಿನ ಪ್ರಮಾಣ ಸಂಜೆ ವೇಳೆಗೆ ಅಧಿಕಗೊಳ್ಳುತ್ತಿದೆ. ಬೆಳಿಗ್ಗೆ ಶಾಂತವಾಗಿ ಹರಿಯುವ ನದಿಗಳು ಸಂಜೆ ವೇಳೆ ತುಂಬಿ ಹರಿಯುತ್ತವೆ. ಈ ವೇಳೆ ಜಲಪಾತಗಳಲ್ಲೂ ನೀರಿನ ಧುಮ್ಮಿಕ್ಕುವಿಕೆ ಹೆಚ್ಚಿರುತ್ತದೆ. ನದಿ ಸಹಿತ ಜಲಪಾತಗಳಲ್ಲಿ ಕೆಸರು ಮಿಶ್ರಿತ ನೀರು ಹರಿಯುತ್ತಿರುವ ಕಾರಣ ಇವುಗಳ ಮೂಲದಲ್ಲಿ, ಹರಿಯುವ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.

ಜಲಪಾತ ಪ್ರದೇಶಗಳಿಗೆ ತೆರಳುವ ಮಂದಿಗೆ ಆನ್‌ಲೈನ್ ಮೂಲಕ ಟಿಕೆಟ್ ಕಾದಿರಿಸುವ ವ್ಯವಸ್ಥೆ ಮಾಡಲಾಗಿದೆ. ಪರಿಸರದ ಮಳೆಯ ಪರಿಸ್ಥಿತಿ ಅವಲೋಕಿಸಿ ಅವಕಾಶ ನೀಡಲಾಗುತ್ತದೆ. ವೀಕ್ಷಣೆಗೆ ತೆರಳುವ ಮಂದಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಅಪಾಯವನ್ನು ಆಹ್ವಾನಿಸುವ ಕೆಲಸಗಳಿಗೆ ಮುಂದಾಗಬಾರದು. ಕೇವಲ ವೀಕ್ಷಣೆಗೆ ಮಾತ್ರ ಅವಕಾಶವಿದ್ದು ನೀರಿಗೆ ಇಳಿಯಲು ಅವಕಾಶವಿಲ್ಲ. - ಮುಲ್ಲೈ ಮುಗಿಲನ್, ದ.ಕ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net