ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿ ಕಾಮಗಾರಿ ಮುಂದುವರಿಸಿ

10SPT4
Published on

ಸೋಮವಾರಪೇಟೆ: ಅಭಿವೃದ್ಧಿಯಲ್ಲಿ ಸೋಮವಾರಪೇಟೆ ಹಿಂದೆ ಉಳಿದಿದ್ದು, ಇಲ್ಲಿ ಯಾವುದೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾದುಹೋಗಿಲ್ಲದ ಕಾರಣ ವಾಣಿಜ್ಯೋದ್ಯಮ ಬೆಳವಣಿಗೆಗೆ ತೊಡಕಾಗಿದೆ. ಕೂಡಲೇ ಬೆಂಗಳೂರಿನಿಂದ ಜಾಲ್ಸೂರಿಗೆ ಹಾದು ಹೋಗಲಿರುವ ರಾಜ್ಯ ಹೆದ್ದಾರಿ ಕಾಮಗಾರಿ ಮುಂದುವರಿಸುವಂತೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಶಾಸಕ ಡಾ.ಮಂತರ್‌ಗೌಡ ಅವರಲ್ಲಿ ಆಗ್ರಹಿಸಿದರು.


ಇಲ್ಲಿನ ಜಾನಕಿ ಕನ್ವೆಷನ್ ಸಭಾಂಗಣದಲ್ಲಿ ಶನಿವಾರ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅದು ಕೊನೆಗಾಣಬೇಕು, ತಾಲೂಕಿನ ಜನರ ಅನುಕೂಲಕ್ಕಾಗಿ ಸಾರಿಗೆ ಉಪಕೇಂದ್ರವನ್ನು ಪ್ರಾರಂಭಿಸಬೇಕು. ಶನಿವಾರಸಂತೆಯಲ್ಲಿ ಜನರಲ್ ಕಾರ್ಯಪ್ಪ ಹುಟ್ಟಿದ ಮನೆಯನ್ನು ಮ್ಯೂಸಿಯಂ ಮಾಡಬೇಕು. ತಾಲೂಕಿನಲ್ಲಿ ಕಾಫಿ ಮ್ಯೂಸಿಯಂ ಮತ್ತು ರಿಸರ್ಚ್ ಕೇಂದ್ರ ಪ್ರಾರಂಭಕ್ಕೆ ಮುಂದಾಗಬೇಕು ಮನವಿ ಮಾಡಿದರು.


ತಾಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ ಇಂದಿಗೂ ಜನರ ಶೋಷಣೆ ನಡೆಯುತ್ತಿದ್ದು, ಅದನ್ನು ತಪ್ಪಿಸಬೇಕಿದೆ. ತಾಲೂಕು ಕೇಂದ್ರದಿಂದ ದೂರದ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ನಗರಗಳಿಗೆ ಸಂಚರಿಸಲು ಸ್ಥಳೀಯರಿಗೆ ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸಲು ಮುಂದಾಗಬೇಕು. ತಾಲೂಕಿನಲ್ಲಿರುವ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಬೇಕು ಎಂದು ಹೇಳಿದರು.


ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಿದ ಶಾಸಕ ಮಂತರ್‌ಗೌಡ ಮಾತನಾಡಿ, ಈಗಾಗಲೇ ಮಲ್ಲಳ್ಳಿ ಜಲಪಾತಕ್ಕೆ ಕೇಬಲ್ ಕಾರ್ ಅಳವಡಿಸುವ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಬಜೆಟ್‌ನಲ್ಲಿ ಸೇರ್ಪಡೆಯಾಗಬಹುದು. ಕಳೆದ 17 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಹಣ ನೀಡುವ ಸಾಧ್ಯತೆ ಇದೆ ಎಂದರು.
ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿಯ ಉಳಿಕೆ ರಸ್ತೆ ಕಾಮಗಾರಿಗೆ 20 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿದೆ ಎಂದರು.


ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಉಪಾಧ್ಯಕ್ಷ ಕೆ.ಎನ್. ದೀಪಕ್, ಖಜಾಂಚಿ ಅಬ್ದುಲ್ ರಜಾಕ್, ನಿರ್ದೇಶಕರಾದ ಕೆ.ಡಿ. ಜೀವನ್‌ಕುಮಾರ್, ಎಚ್.ಕೆ.ತ್ರಿಶೂಲ್, ಜಿ.ಎಂ. ಹೂವಯ್ಯ, ಕೆ.ಎ.ಪ್ರಕಾಶ್, ವಿ.ಎಂ.ಗೌತಮ್, ಮಂಜುನಾಥ್, ಲಕ್ಷ್ಮಣ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net