ಕರೊನಾ ಔಷಧ ಸಾಗಿಸುತ್ತಿದ್ದ ಕಂಟೇನರ್ ಅಪಘಾತ

6-RNR-03
Published on

ರಾಣೆಬೆನ್ನೂರ: ಕರೊನಾ ಸೋಂಕಿತರಿಗೆ ನೀಡುವ ಔಷಧ ಸಾಗಿಸುತ್ತಿದ್ದ ಸರ್ಕಾರಿ ಕಂಟೇನರ್​ವೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ವಾಹನದಲ್ಲಿ ಸಹಾಯ ಕೇಳಿಕೊಂಡು ಬಂದಿದ್ದ ಯುವಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಡಿಯೋಲ್ ಢಾಬಾ ಬಳಿ ಎನ್​ಎಚ್-04 ರಸ್ತೆಯಲ್ಲಿ ಶುಕ್ರವಾರ ಸಂಭವಿಸಿದೆ.

ಗದಗ ಜಿಲ್ಲೆ ರೋಣ ತಾಲೂಕಿನ ಎರೇಬೆಲೇರಿ ಗ್ರಾಮದ ಹನುಮಂತಪ್ಪ ಈರಪ್ಪ ಮೇಲಮನಿ (18) ಮೃತ ದುರ್ದೈವಿ. ಕಂಟೇನರ್ ಚಾಲಕ ಹುಬ್ಬಳ್ಳಿಯ ಉಣಕಲ್ಲ ನಿವಾಸಿ ಮಂಜುನಾಥ ಅಬ್ಬಿಗೇರಿ (30) ಪಾರಾಗಿದ್ದಾನೆ.

ಕಂಟೇನರ್ ವಾಹನ ಬೆಂಗಳೂರಿನಿಂದ ಕರೊನಾ ಸೋಂಕಿತರಿಗೆ ನೀಡುವ ಔಷಧ ತುಂಬಿಕೊಂಡು ಧಾರವಾಡದ ಡಿಎಚ್​ಒ ಕಚೇರಿಗೆ ಬರುತ್ತಿತ್ತು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿದ ಕಂಟೇನರ್ ಮುಂದೆ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕ್ಲಿನರ್ ಜಾಗದಲ್ಲಿ ಕುಳಿತ್ತಿದ್ದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಚಾಲಕನಿಗೆ ಯಾವುದೇ ಗಾಯಗಳಾಗಿಲ್ಲ.

ಮೃತ ಹನುಮಂತಪ್ಪ ಹಾಗೂ ಮಂಜುನಾಥ ಸ್ನೇಹಿತರಾಗಿದ್ದರು. ಆದ್ದರಿಂದ ಬೆಂಗಳೂರಿನಿಂದ ಬರುವಾಗ ಹನುಮಂತಪ್ಪ, ಹುಬ್ಬಳ್ಳಿವರೆಗೆ ತಲುಪಿಸಲು ಮಂಜುನಾಥನಿಗೆ ಕೇಳಿಕೊಂಡಿದ್ದನು. ಹೀಗಾಗಿ ಮಂಜುನಾಥ ಆತನನ್ನು ಕಂಟೇನರ್ ವಾಹನದಲ್ಲಿ ಕರೆದುಕೊಂಡು ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net