ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಸಲು ಗ್ರಾಹಕರ ಒತ್ತಾಯ

06 HANUR 2
ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಮಲೆಮಹದೇಶ್ವರ ಬೆಟ್ಟದಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಆಗ್ರಹಿಸಿ ಗ್ರಾಹಕರು ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮ.ಬೆಟ್ಟದ ಹುಲಿಗೂಡಿನಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಮುಂಭಾಗ ಖಾಲಿ ಸಿಲಿಂಡರ್‌ನೊಂದಿಗೆ ಜಮಾಯಿಸಿದ ಗ್ರಾಹಕರು, ಮ.ಬೆಟ್ಟದ ತಪ್ಪಲಿನಲ್ಲಿ 18 ಗ್ರಾಮಗಳಿದ್ದು, ಬಹುತೇಕರು ಇಂಡೇನ್ ಗ್ಯಾಸ್ ಗ್ರಾಹಕರಾಗಿದ್ದಾರೆ. ಕೆಲವರು ಎಚ್‌ಪಿ ಗ್ಯಾಸ್ ಗ್ರಾಹಕರಿದ್ದು, ಇವರಿಗೆ ಪ್ರತಿ ವಾರಕ್ಕೊಮ್ಮೆ ಮನೆಯ ಮುಂಭಾಗವೇ ಗ್ಯಾಸ್ ಸಿಲಿಂಡರ್ ವಿತರಿಸಲಾಗುತ್ತಿದೆ. ಆದರೆ ಇಂಡೇನ್ ಗ್ಯಾಸ್ ಏಜೆನ್ಸಿ ಪಡೆದವರು ಹಲವು ವರ್ಷಗಳಿಂದಲೂ ಸಮರ್ಪಕವಾಗಿ ಸಿಲಿಂಡರ್ ವಿತರಿಸುತ್ತಿಲ್ಲ. ಇತ್ತ ಏಜೆನ್ಸಿ ಬಾಗಿಲು ತೆಗೆಯುವುದೇ ಇಲ್ಲ. ಸಂಬಂಧಪಟ್ಟವರು ಫೋನ್ ಸ್ವೀಕರಿಸುವುದಿಲ್ಲ. ಇದರಿಂದ ಸಿಲಿಂಡರ್ ಪಡೆಯುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದ್ದರಿಂದ ಗ್ಯಾಸ್ ಏಜೆನ್ಸಿಯನ್ನು ಹಿಂತಿರುಗಿಸಿ ಬೇರೆ ಏಜೆನ್ಸಿಗೆ ಅವಕಾಶ ಕಲ್ಪಿಸಬೇಕು. ಇಲ್ಲವೇ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಎಚ್ಚರಿಕೆ: ಈ ಬಗ್ಗೆ ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರು ಸಮರ್ಪಕ ಗ್ಯಾಸ್ ವಿತರಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ಯಾಸ್ ಏಜೆನ್ಸಿ ಮುಂಭಾಗ ಮಾನವ ಸರಪಳಿ ರಚಿಸಿ ವಾಹನ ಸಂಚಾರ ತಡೆದು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net