ಗ್ರಾಹಕ ಸಂತುಷ್ಟಗೊಂಡರೆ ಜೀವನ ಹಸನು

25 vpt 2.2
Published on

ವಿರಾಜಪೇಟೆ: ಗ್ರಾಹಕ ಸಂತುಷ್ಟಗೊಂಡರೆ ಮಾಲೀಕ, ಕೆಲಸಗಾರರ ಜೀವನ ಹಸನಾಗುತ್ತದೆ ಎಂದು ಚಿನ್ನ- ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೆ.ಕೆ.ಶ್ರೀನಿವಾಸ್ ಹೇಳಿದರು.


ವಿರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದಿಂದ ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ವಾರ್ಷಿಕ ಸಭೆ ನಡೆದಿರಲಿಲ್ಲ. ಇದೀಗ ಸಭೆಯೊಂದಿಗೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 2001ರಲ್ಲಿ ಆರಂಭವಾದ ಸಂಘವು 24 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ ಎಂದರು.


ವಿರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಪಿ.ಪ್ರಶಾಂತ್ ಮಾತನಾಡಿ, ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಪದಾಧಿಕಾರಿಗಳು, ಸದಸ್ಯರು ಕೈಜೋಡಿಸಿದ್ದಾರೆ. ಸಂಘವು ಇದೀಗ ಸುಮಾರು 40 ಲಕ್ಷ ರೂ. ಲಾಭದಲ್ಲಿದೆ. ಸುಮಾರು 19 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.


ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಪಿಯುಸಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಲಾಯಿತು.
ಖಜಾಂಚಿ ಎ.ಎನ್.ದಶರಥ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಉಲ್ಲಾಸ್ ಶೇಟ್, ಸಹ ಕಾರ್ಯದರ್ಶಿ ವಿ.ವಿ.ಜಿತೇಂದ್ರ, ನಿವೃತ್ತ ಶಿಕ್ಷಕ ಎ.ವಿ.ವೆಂಕಟೇಶ್ ಶೇಟ್, ಎ.ಪಿ.ಲೋಕೇಶ್ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಆಯ್ಕೆ: ಬಳಿಕ ವಿರಾಜಪೇಟೆ ತಾಲೂಕು ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆರ್.ರಾಜೇಶ್ ಶೇಟ್, ಕಾರ್ಯದರ್ಶಿಯಾಗಿ ಎ.ಪಿ.ಲೋಕೇಶ್ ಆಯ್ಕೆಯಾದರು. ನಿರ್ಗಮಿತ ಅಧ್ಯಕ್ಷರಿಂದ ನೂತನ ಅಧ್ಯಕ್ಷರಿಗೆ ಸಂಘದ ದಾಖಲೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net