

ಸುಬ್ರಹ್ಮಣ್ಯ: ಪಶ್ಚಿಮ ಘಟ್ಟ ಪ್ರದೇಶವನ್ನು ಸೂಕ್ಷ್ಮ ವಲಯಕ್ಕೆ ಸೇರ್ಪಡೆಗೊಳಿಸುವ ಕ್ರಮವನ್ನು ತೀವ್ರವಾಗಿ ವಿರೋಧಿಸಲಾಗುವುದು. ನಾವು ಪರಿಸರ ವಿರೋಧಿಗಳಲ್ಲ, ಆದರೆ ತಲೆತಲಾಂತರದಿಂದ ಇಲ್ಲಿ ವಾಸವಿದ್ದು ಪರಿಸರ ಉಳಿಸಿ ಬೆಳೆಸಿ ಜೀವನ ಕಟ್ಟಿಕೊಂಡವರು. ನಮಗೆ ಈಗಿನಂತೆ ಮೂಲಸೌಕರ್ಯ ಉಳಿಸಿಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಡುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಪ್ರಥಮವಾಗಿ ನದಿ ಪೂಜೆ ಮೂಲಕ ಪ್ರಕೃತಿಯ ಆರಾಧನೆ ಮಾಡಿ ನಮ್ಮ ಹೋರಾಟ ಪ್ರಾರಂಭಿಸುತ್ತೇವೆ. ಆಗಸ್ಟ್ 20ರಂದು ಕುಮಾರಧಾರಾ ನದಿಗೆ ಪೂಜೆ ಮಾಡುವ ಮೂಲಕ ರೈತರ ಬೇಡಿಕೆ ಮುಂದಿಡುತ್ತೇವೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಸುಬ್ರಹ್ಮಣ್ಯದಲ್ಲಿ ಸಮಾಲೋಚನಾ ಸಭೆ ಬಳಿಕ ಸಭೆ ವಿವರ ನೀಡಿದರು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಕುಸಿತವಾಗಲು ನೈಜವಾದ ಕಾರಣದ ಬಗ್ಗೆಯೂ ಅಧ್ಯಾಯನ ನಡೆಸುತ್ತೇವೆ. ಬಳಿಕ ನಮ್ಮ ಬೇಡಿಕೆ ಮುಂದಿಡುತ್ತೇವೆ. ನಮ್ಮ ಆಶಯ ಈಡೇರದಿದ್ದರೆ ಹಂತ ಹಂತವಾಗಿ ಯೋಜನೆ ವಿರುದ್ಧ ರೈತರೆಲ್ಲರೂ ಒಟ್ಟಾಗಿ ಹೋರಾಟ ಹಮ್ಮಿಕೊಳ್ಳಲಿದ್ದೇವೆ. ಸುಬ್ರಹ್ಮಣ್ಯದಲ್ಲಿ ರೈತ ರಕ್ಷಣಾ ಚಳವಳಿ ಸಮಾವೇಶ ನಡೆಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.
ಸಮಾಲೋಚನಾ ಸಭೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಯಪ್ರಕಾಶ್ ಕೂಜುಗೋಡು, ಅಚ್ಚುತ್ತ ಗೌಡ, ಶ್ರೀಕಾಂತ್ ಎನ್., ಅಶೋಕ್ ಕುಮಾರ್, ಮಾಧವ.ಕೆ, ಬುಕ್ಷಿತ್ ಎನ್.ಎಂ., ಮುತ್ತಪ್ಪ ಗೌಡ, ಮಿಥುನ್ ಕುಮಾರ್, ಸತೀಶ್ ಶೆಟ್ಟಿ, ತಾರನಾಥ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿವಾಕರ ಮುಂಡೋಡಿ, ಗಿರೀಶ್ ಆಚಾರ್ಯ ಪೈಲಾಜೆ, ಲಕ್ಷ್ಮೀಶ ಇಜಿನಡ್ಕ ಉಪಸ್ಥಿತರಿದ್ದರು.