

ಕಾರ್ಕಳ: ಎಲ್ಲೂರು ಗ್ರಾಮದಿಂದ ನಂದಿಕೂರು ಇನ್ನಾ ಗ್ರಾಮದ ಮೂಲಕ ಜನವಸತಿ ಮಾರ್ಗದಲ್ಲಿ ಸಾರ್ವಜನಿಕರ ವಿರೋಧದ ಮಧ್ಯೆ ಕೇರಳಕ್ಕೆ 400 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ಟವರ್ ಅಳವಡಿಸುವ ಸರ್ಕಾರದ ಕ್ರಮ ಖಂಡನೀಯ ಎಂದು ಬಿಜೆಪಿ ಕಾರ್ಕಳ ಮಂಡಲ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಹೇಳಿದ್ದಾರೆ.
ಸಾರ್ವಜನಿಕರ ವಿರೋಧವಿದ್ದರೂ ಸರ್ಕಾರ, ಜಿಲ್ಲಾಡಳಿತ ಬಲತ್ಕಾರವಾಗಿ ಈ ಮಾರ್ಗದಲ್ಲಿ ಟವರ್ ನಿರ್ಮಿಸಲು ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಕಾಮಗಾರಿಗೆ ನಿರ್ಧರಿಸಿತ್ತು.
ಜನತೆಯ ಜತೆಗೆ ಅಭಿವೃದ್ಧಿಯನ್ನು ಕೊಂಡೊಯ್ಯಬೇಕೇ ಹೊರತು ನಾಗರಿಕರ ವಿರೋಧವಿದ್ದಾಗ ಬಲವಂತದಿಂದ ನಡೆಸುವುದಲ್ಲ. ಸರ್ಕಾರ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಒತ್ತಡ ಹಾಕಿ ಜನರ ವಿರೋಧ ಕಟ್ಟಿಕೊಂಡು ಕಾಮಗಾರಿ ನಡೆಸಲು ಮುಂದಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.