ಧರ್ಮಸ್ಥಳ ಸಂಗ್ರಹಾಲಯಕ್ಕೆ ಹಾಯಿ ದೋಣಿ

ferry
ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಹಸ್ತಾಂತರಗೊಳ್ಳಲಿರುವ ಕುಂದಾಪುರದ ಹಾಯಿ ದೋಣಿ
Published on

ಗಂಗೊಳ್ಳಿ: ಕುಂದಾಪುರದ ಪಂಚಾಗಂಗಾ ನದಿಯಲ್ಲಿ ಚಿಪ್ಪು ಸಾಗಾಟ ಮಾಡುತ್ತಿದ್ದ ಬಾಲಾಜಿ ಹೆಸರಿನ ಹಾಯಿ ದೋಣಿ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ಸೇರಿಕೊಳ್ಳುತ್ತಿದೆ.

ಕುಂದಾಪುರ ಖಾರ್ವಿ ಮಧ್ಯಕೇರಿಯ ನಿವಾಸಿ ದಿ.ಶಂಕರ್ ಖಾರ್ವಿ ಪುತ್ರ ವೆಂಕಟೇಶ್ ಮಾಲಿಕತ್ವದ ಈ ಹಾಯಿ ದೋಣಿ ಸೇವೆಯಿಂದ ಮುಕ್ತವಾಗಿದ್ದು, ಅದರ ಸದ್ಭಳಕೆ ಉದ್ದೇಶದಿಂದ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ನೀಡಲು ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಒಪ್ಪಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಈ ಹಾಯಿ ದೋಣಿ ಶ್ರೀ ಕ್ಷೇತ್ರಕ್ಕೆ ಕೊಂಕಣ ಖಾರ್ವಿ ಸಮಾಜದ ಕಾಣಿಕೆಯಾಗಿ ಜೂ.9ರಂದು ಧರ್ಮಸ್ಥಳದ ವಸ್ತು ಸಂಗ್ರಹಾಲಯ ಸೇರಿಕೊಳ್ಳುತ್ತಿದೆ.

ಸುಮಾರು 14 ವರ್ಷಗಳ ಹಿಂದೆ ಚಿಪ್ಪು ಸಾಗಾಟದ ಉದ್ದೇಶಕ್ಕೆ ಕಂಡ್ಲೂರು ಸಮೀಪ ದೊರೆತ ಸುಮಾರು 20 ಅಡಿ ಸುತ್ತಳತೆಯ ಬೃಹತ್ ಮರದಿಂದ ಈ ಹಾಯಿ ದೋಣಿ ನಿರ್ಮಿಸಲಾಗಿದೆ. ಸುಮಾರು 51 ಅಡಿ ಉದ್ದ, 10 ಅಡಿ ಅಗಲದ ಈ ದೋಣಿಯಲ್ಲಿ ಒಂದು ಮುಕ್ಕಾಲು ಲೋಡ್ ಚಿಪ್ಪು ಸಾಗಾಟ ಮಾಡಲಾಗುತ್ತಿತ್ತು. ಅಂದಿನ ದಿನಗಳಲ್ಲಿಯೇ ದೋಣಿ ನಿರ್ಮಿಸಲು 2.5 ಲಕ್ಷ ರೂ. ವೆಚ್ಚವಾಗಿತ್ತು.

ಜೂ 9ರಂದು ಕುಂದಾಪುರ ಫೇರ‌್ರಿ ರಸ್ತೆಯಿಂದ ಮೆರವಣಿಗೆಯ ಮೂಲಕ ದೋಣಿಯನ್ನು ಕುಂದಾಪುರ ಶಾಸ್ತ್ರೀ ಸರ್ಕಲ್ ತನಕ ತಂದು ಬೀಳ್ಕೊಡಲಾಗುವುದು. ಧರ್ಮಸ್ಥಳದಲ್ಲಿ ವಿದ್ಯುಕ್ತವಾಗಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಹಸ್ತಾಂತರ ಮಾಡಲು ಸಿದ್ಧತೆ ನಡೆದಿದೆ ಎಂದು ಕುಂದಾಪುರ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಜಯಾನಂದ ಖಾರ್ವಿ ತಿಳಿಸಿದ್ದಾರೆ. ದಿನಕರ ಖಾರ್ವಿ, ಸತೀಶ್ ಖಾರ್ವಿ ಉಪಸ್ಥಿತರಿದ್ದರು.

ನಮ್ಮ ತಂದೆಯವರಿಗೆ ದೊಡ್ಡ ದೋಣಿ ಮಾಡುವ ಕನಸಿತ್ತು. ಅವರು ತಾಂಡೇಲರಾಗಿದ್ದರು. ನಾನು ಟೈಲರಿಂಗ್ ವೃತ್ತಿ ಮಾಡುತ್ತಿದ್ದೆ. ತಂದೆ ನಿರ್ವಹಿಸುತ್ತಿದ್ದ ಕೆಲಸ ನಿರ್ವಹಿಸುವ ಇಚ್ಛೆಯಿಂದ ಈ ದೋಣಿ ಕಟ್ಟಿಸಿದೆ. ಈಗ ಚಿಪ್ಪು ಉದ್ಯಮಕ್ಕೆ ಜನರು ಬರುವುದು ಕಡಿಮೆಯಾಗಿದೆ. ಹಾಗಾಗಿ ದೋಣಿ ನಿರ್ವಹಣೆ ಇಲ್ಲದೆ ಹಾಳಾಗಬಾರದು. ನೂರಾರು ವರ್ಷ ಇರಬೇಕು. ಏಕೆಂದರೆ ಇದು ನಿರ್ಜಿವ ವಸ್ತು ವಾದರೂ ನಮಗೆ ಬದುಕು ಕೊಟ್ಟಿದೆ. ಹಾಗಾಗಿ ಇಷ್ಟೊಂದು ಉದ್ದದ ದೋಣಿ ಧರ್ಮಸ್ಥಳದ ವಸ್ತು ಪ್ರದರ್ಶನಾಲಯದಲ್ಲಿ ಇರಿಸುವ ಬಗ್ಗೆ ಹೆಗ್ಗಡೆಯವರಲ್ಲಿ ಮನವಿ ಮಾಡಿದಾಗ ಅನುಮತಿ ಸಿಕ್ಕಿತು. ಮೊದಲಿಂತೆ ದೋಣಿ ವ್ಯವಸ್ಥಿತಗೊಳಿಸಿ, ಹಾಯ್ ಜೋಡಣೆ ಮಾಡಿಯೇ ಧರ್ಮಸ್ಥಳಕ್ಕೆ ನೀಡಲಾಗುವುದು.-ವೆಂಕಟೇಶ ಖಾರ್ವಿ ದೋಣಿ ಮಾಲಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net