

ಮಂಗಳೂರು: ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಅಂಡಾರು ಗ್ರಾಮ ಪಂಚಾಯಿತಿಗೊಳಪಟ್ಟ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ಮೊರಂಟೆಬೈಲು ಪ್ರದೇಶಕ್ಕೆ ಅರಣ್ಯ ಇಲಾಖೆ ಗಸ್ತು ರಸ್ತೆ(ಪ್ಯಾಟ್ರೋಲಿಂಗ್ ಪಾಥ್) ನಿರ್ಮಿಸುತ್ತಿದ್ದು, ಈ ಮೂಲಕ ಇಲ್ಲಿನ ಕುಟುಂಬದ ದಶಕಗಳ ಸಮಸ್ಯೆಗೆ ಮುಕ್ತಿ ದೊರೆಯುತ್ತಿದೆ. ನಕ್ಸಲ್ ಸಕ್ರಿಯ ಪ್ರದೇಶವಾಗಿದ್ದ ಮುಟ್ಲುಪಾಡಿಯಿಂದ 4 ಕಿ.ಮೀ. ದೂರದ ದಟ್ಟಾರಣ್ಯದ ಮೊರಂಟೆಬೈಲು ಎಂಬಲ್ಲಿ 3 ಕುಟುಂಬದ 19 ಮಂದಿ ವಾಸವಾಗಿದ್ದು, ಕಾಲುದಾರಿಯಲ್ಲೇ ಪಯಣ ಸಾಗಿತ್ತು. ಕುಟುಂಬದಲ್ಲಿ ನಡೆದಾಡಲು ಅಶಕ್ತವಾಗಿರುವ ಅನಾರೋಗ್ಯಪೀಡಿತ 13 ವರ್ಷ ಪ್ರಾಯದ ಬಾಲಕಿಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕೊಂಡೊಯ್ಯಬೇಕಾದ ಸ್ಥಿತಿಯಿತ್ತು. ರಸ್ತೆ ನಿರ್ಮಾಣದ ಮೊದಲ ಹಂತದ ಕಾಮಗಾರಿ ಫೆ.4ರಂದು ಆರಂಭಗೊಂಡಿದೆ. ಸಾಮಾಜಿಕ ಅರಣ್ಯ ವ್ಯಾಪ್ತಿಗೆ ಒಳಪಟ್ಟ ಪ್ರದೇಶದ ಏರುಹಾದಿಯಲ್ಲಿ ಜೆಸಿಬಿ ಬಳಸಿ ಈಗಾಗಲೇ ಒಂದು ಕಿ.ಮೀ. ರಸ್ತೆ ನಿರ್ಮಿಸಲಾಗಿದೆ. ಕೆಲವೇ ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ನನಗೀಗ 81 ವರ್ಷ ಪ್ರಾಯ. ನನ್ನ ತಂದೆಯ ಕಾಲದಿಂದಲೂ ರಸ್ತೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೆ ರಸ್ತೆ ನಿರ್ಮಾಣ ಕನಸಾಗಿಯೇ ಉಳಿದಿತ್ತು. ಮಾಧ್ಯಮಗಳ ವರದಿ ನಮ್ಮ ಹೋರಾಟಕ್ಕೆ ಶಕ್ತಿ ತುಂಬಿದೆ. ಇದೀಗ ಶತಮಾನದ ಕನಸು ನನಸಾಗುತ್ತಿದೆ. ವಾಸು ಮಲೆಕುಡಿಯ, ಮೊರಂಟೆಬೈಲು ನಿವಾಸಿ