

ಪುತ್ತೂರು ಗ್ರಾಮಾಂತರ: ಕರ್ನಾಟಕ ಗಡಿ ಪ್ರದೇಶದಲ್ಲಿರುವ ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಗೆ ಮಾಜಿ ಶಾಸಕ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲೆಯ ಪ್ರಗತಿ ಮತ್ತು ಶೈಕ್ಷಣಿಕ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗಡಿ ಪ್ರದೇಶದಲ್ಲಿರುವ ಈ ಶಾಲೆ ಪದವಿಪೂರ್ವ ಕಾಲೇಜು ಆಗಿ ಮೇಲ್ದರ್ಜೆಗೇರಿ ಪ್ರಗತಿ ಸಾಧಿಸುವುದರೊಂದಿಗೆ ಉತ್ತಮ ಶಿಕ್ಷಣ ನೀಡುವ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು. ಪುತ್ತೂರು ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ವಿನಂತಿಸಿಕೊಂಡರು. ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀರಾಮ ಪಕ್ಕಳ ಕರ್ನೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಸೋಮಣ್ಣ ಬೇವಿನಮರದ ಅವರನ್ನು ಸನ್ಮಾನಿಸಲಾಯಿತು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ, ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ಇಬ್ರಾಹಿಂ ಪಳ್ಳತ್ತೂರು, ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯ ವಿಕ್ರಮ್ ರೈ ಸಾಂತ್ಯ, ನೆಟ್ಟಣಿಗೆ ಮುಡ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸೂಫಿ ಬಾಂಟಡ್ಕ, ಮಧುರ ಶಿಕ್ಷಣ ಸಂಸ್ಥೆ ಸಂಚಾಲಕ ಅಬ್ದುಲ್ ರಹಿಮಾನ್ ಮೇನಾಲ, ಸ್ಥಳೀಯರಾದ ಯಾಕುಬ್ ನಾಗನಡ್ಕ, ಅಬ್ದುಲ್ ಖಾದರ್ ಸುರುಳಿಮೂಲೆ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಶಿಕ್ಷಕ ಪ್ರೇಮ್‌ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಇಂದಿರಾ ವಂದಿಸಿದರು. ಶಿಕ್ಷಕ ಪುರುಷೋತ್ತಮ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ದೇವಿಪ್ರಕಾಶ್ ಶೆಟ್ಟಿ, ದಮಯಂತಿ, ಮೋನಿಷಾ, ಮೀನಾಕ್ಷಿ, ಮಾಲಿನಿ ಇದ್ದರು.