ಶಾಶ್ವತ ಸಂಪರ್ಕಕ್ಕೆ ಕಿಂಡಿ ಅಣೆಕಟ್ಟು ನಿರ್ಮಾಣ: ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆ

Kdb_Sanka
Published on

ಕಡಬ: ಸರ್ಕಾರದ ಅನುದಾನವನ್ನು ಕಾಯದೆ ಸಾರ್ವಜನಿಕರಿಗೆ ಅನುಕೂಲವಾಗುವ ಸಂಪರ್ಕ ಸೇತುವೆಯನ್ನು ನಿರ್ಮಿಸುವ ಮೂಲಕ ಇಲ್ಲಿಯ ಜನರು ಇತರರಿಗೆ ಆದರ್ಶರಾಗಿದ್ದಿರಿ, ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ಶಾಶ್ವತ ಸಂಪರ್ಕವನ್ನು ಕಲ್ಪಿಸಲಾಗುವುದು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಭಾನುವಾರ ಕೋಡಿಂಬಾಳ ಹಾಗೂ ಕೇನ್ಯ ಗ್ರಾಮದ ಕುಮಾರಧಾರಾ ನದಿಗೆ ಊರವರೆ ನಿರ್ಮಿಸಿದ್ದ ತಾತ್ಕಾಲಿಕ ಸಂಪರ್ಕ ಸೇತುವೆ ಉದ್ಘಾಟಿಸಿ ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಕಡಬ ತಾಲೂಕು ಕೇಂದ್ರವಾಗಬೇಕಾದರೆ ಮೊದಲು ತಾಲೂಕು ಕೇಂದ್ರಕ್ಕೆ ತಾಲೂಕಿನ ಇತರ ಭಾಗಗಳಿಂದ ಸಂಪರ್ಕದ್ದೆ ಸಮಸ್ಯೆಯಾಗಿತ್ತು. ಆದರೆ ಈಗ ಪಾಲೋಳಿ ಸೇರಿದಂತೆ ಇತರ ಭಾಗದಲ್ಲಿ ಸೇತುವೆಗಳು ನಿರ್ಮಾಣವಾಗುವ ಮೂಲಕ ತಾಲೂಕು ಕೇಂದ್ರಕ್ಕೆ ಗ್ರಾಮಗಳ ಸಂಪರ್ಕ ಹತ್ತಿರವಾಗಿದೆ ಎಂದರು.

ಬಳ್ಪ ಗ್ರಾ.ಪಂ. ಸದಸ್ಯ, ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ ಕಣ್ಕಲ್, ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ, ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್.ಕೆ., ಪ್ರಮುಖರಾದ ಅಶೋಕ್ ಕುಮಾರ್, ಸಂಜೀವ ನಾಕ್, ಸಂಚಾಲಕ ವಾಸುದೇವ ಗೌಡ ಕೆರೆಕೋಡಿ ಉಪಸ್ಥಿತರಿದ್ದರು. ಪ್ರಮುಖರಾದ ಕೇಶವ ಬೇರಿಕೆ, ಸುಬ್ರಹ್ಮಣ್ಯ ಕಣ್ಕಲ್, ಗಿರೀಶ್, ರಾಮಚಂದ್ರ, ಉದಯ ಅಮ್ಮಣ್ಣಾಯ, ಹರೀಶ್ ಕಣ್ಕಲ್ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ದಯಾನಂದ ಉಂಡಿಲ ಸ್ವಾಗತಿಸಿದರು. ಉಪನ್ಯಾಸಕ ವಾಸುದೇವ ಗೌಡ ಕೋಲ್ಪೆ ನಿರೂಪಿಸಿ, ವಂದನಾರ್ಪಣೆ ಸಲ್ಲಿಸಿದರು. ಶಾಸಕರಿಗೆ ಸೇತುವೆ ನಿರ್ಮಾಣದ ಬಗ್ಗೆ ಮನವಿ ನೀಡಲಾಯಿತು.

ಸನ್ಮಾನ:

ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳಲ್ಲಿ ವಿಶೇಷ ರಿಯಾಯಿತಿ ನೀಡಿದ ರಾಜೇಶ್ ಗುಂಡಿಮಜಲು ಹಾಗೂ ಅವರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಮಜ್ಜಾರು ದೈವಸ್ಥಾನದಲ್ಲಿ ತಂಬಿಲ ಸೇವೆ:

ತಾತ್ಕಾಲಿಕ ಸೇತುವೆಯ ಉದ್ಘಾಟನೆಗೆ ಮುನ್ನ ಶಾಸಕಿ ಭಾಗೀರಥಿ ಮುರುಳ್ಯ ಮಜ್ಜಾರು ದೈವಸ್ಥಾನದಲ್ಲಿ ಬಿಜೆಪಿ ವತಿಯಿಂದ ದೈವಗಳಿಗೆ ಸಲ್ಲಿಸಲಾಗಿದ್ದ ತಂಬಿಲ ಸೇವೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಶಾಸಕಿಯವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net