

ಯಲ್ಲಾಪುರ: ಲಾಕ್ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗಾಗಿ ಸರ್ಕಾರ ವಿದ್ಯಾಗಮ ಯೋಜನೆ ಜಾರಿಗೆ ತಂದಿತ್ತು. ಅದೇ ಯೋಜನೆಯ ಹೆಸರಿನಲ್ಲಿ ಪಟ್ಟಣದ ಗಣಪತಿ ಗಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆರ್.ಐ. ನಾಯ್ಕ ಅವರು ಶಾಲೆಯ ಆವಾರದಲ್ಲಿ ಸ್ವಂತ ಖರ್ಚಿನಲ್ಲಿ ಕಲಾ ಮಂದಿರವನ್ನು ನಿರ್ವಿುಸಿ ಮಾದರಿಯಾಗಿದ್ದಾರೆ.
ಅಂದಾಜು 3 ಲಕ್ಷ ರೂಪಾಯಿ ವೆಚ್ಚದಲ್ಲಿ ವಿದ್ಯಾಗಮ ಕಲಾ ಮಂದಿರ ನಿರ್ವಣವಾಗಿದ್ದು, ದಾನಿಗಳ ನೆರವಿಗೆ ಕೈಚಾಚದೆ ಎಲ್ಲ ವೆಚ್ಚವನ್ನು ಸ್ವತಃ ಅವರೆ ಭರಿಸಿದ್ದಾರೆ. ಆರ್ಥಿಕ ಸಮಸ್ಯೆ ಎದುರಾದಾಗ ಶಿಕ್ಷಕರ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದಾರೆ.
‘ಲಾಕ್ಡೌನ್ ವೇಳೆ ವಿದ್ಯಾಗಮ ಯೋಜನೆಯ ಮೂಲಕ ಮಕ್ಕಳ ಕಲಿಕೆಗೆ ಸರ್ಕಾರ ಪ್ರೋತ್ಸಾಹಿಸಿದ್ದು, ಶಿಕ್ಷಕರ ವೇತನ ಕಡಿತಗೊಳಿಸದೆ ಪೂರ್ಣ ಸಂಬಳ ನೀಡಿತ್ತು. ಅದರಲ್ಲಿ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಇಚ್ಛೆಯಿತ್ತು. ಬೇರೆ ಕಡೆಗಳಲ್ಲಿ ಶಾಲೆಯ ಕಾರ್ಯಕ್ರಮಗಳು ನಡೆಯುವಾಗ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲೇ ರಂಗ ಮಂದಿರ ಇದ್ದರೆ ಚೆನ್ನಾಗಿತ್ತು ಎಂಬ ಆಶಯ ವ್ಯಕ್ತಪಡಿಸಿದ್ದರು. ಆ ಕಾರಣಕ್ಕಾಗಿ ರಂಗ ಮಂದಿರ ನಿರ್ವಣದ ಕನಸು ಮೊಳಕೆಯೊಡೆಯಿತು’ ಎನ್ನುತ್ತಾರೆ ಆರ್.ಐ. ನಾಯ್ಕ.
6-7 ತಿಂಗಳುಗಳಿಂದ ನಡೆದ ವಿದ್ಯಾಗಮ ಕಲಾ ಮಂದಿರದ ಕಾಮಗಾರಿ ಪೂರ್ಣಗೊಂಡಿದ್ದು, ಏ. 2ರಂದು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ. ವಿದ್ಯಾಗಮದ ನೆನಪಿಗಾಗಿ ಆ ಹೆಸರನ್ನೆ ಕಲಾ ಮಂದಿರಕ್ಕೆ ಇಡಲಾಗಿದೆ.
ಮಾದರಿ ಶಿಕ್ಷಕ: ನಿರಂತರವಾಗಿ ಕ್ರಿಯಾಶೀಲ ಕಾರ್ಯಗಳ ಮೂಲಕ ಆರ್.ಐ. ನಾಯ್ಕ ಮಾದರಿಯ ಶಿಕ್ಷಕರಾಗಿದ್ದಾರೆ. ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಬೆಳಗಿನ ಉಪಾಹಾರ ನೀಡಿದ್ದಾರೆ. ಲಾಕ್ಡೌನ್ ವೇಳೆ ಹಾಗೂ ನಂತರ ನಿರಂತರವಾಗಿ ಪ್ರತಿವಾರ ವಿದ್ಯಾರ್ಥಿಗಳಿಗೆ ಬಾಳೆಹಣ್ಣುಗಳನ್ನು ವಿತರಿಸಿದ್ದಾರೆ. ತಮ್ಮ ಶಾಲೆ ಮಾತ್ರವಲ್ಲದೆ ಕಿರವತ್ತು, ಹೊಸಳ್ಳಿ ಭಾಗದ ವಿದ್ಯಾರ್ಥಿಗಳಿಗೂ ಬಾಳೆಹಣ್ಣುಗಳನ್ನು ವಿತರಿಸಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಪ್ರತಿ ತಿಂಗಳು 1500 ರೂಪಾಯಿ ನೀಡುತ್ತ ಬಂದಿದ್ದಾರೆ. ಸೈನಿಕರ ನಿಧಿಗೂ ಧನಸಹಾಯ ಮಾಡಿದ್ದಾರೆ. ಇವರ ಶ್ರಮಕ್ಕೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ದೊರಕಿವೆ.
ಹಲವು ಶಿಕ್ಷಕರು ನಿವೃತ್ತಿಯ ನಂತರ ಶಾಲೆಗೆ ಕೊಡುಗೆ ನೀಡುತ್ತಾರೆ. ನಾನು ಸೇವೆಯಲ್ಲಿದ್ದಾಗಲೆ ಶಾಲೆಗಾಗಿ ಏನಾದರೂ ಕೊಡುಗೆ ನೀಡಬೇಕೆಂಬ ಯೋಚನೆಯಿಂದ ಕಲಾ ಮಂದಿರ ನಿರ್ವಣಕ್ಕೆ ಮುಂದಾದೆ. ದಾನಿಗಳ ನೆರವು ಪಡೆದರೆ ರಂಗಮಂದಿರ ನಿರ್ಮಾಣ ಕಷ್ಟದ ಕೆಲಸವಾಗಿರಲಿಲ್ಲ. ಆದರೆ, ಶಾಲೆಗೆ ಇದು ಸಂಪೂರ್ಣ ನನ್ನದೆ ಕೊಡುಗೆಯಾಗಿರಬೇಕೆಂದು ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದ್ದೇನೆ. | ಆರ್.ಐ. ನಾಯ್ಕ, ಗಣಪತಿ ಗಲ್ಲಿ ಶಾಲೆಯ ಮುಖ್ಯಾಧ್ಯಾಪಕ