

ಮಾಗಡಿ : ವಿಮಾನ ನಿಲ್ದಾಣ ರಾಜಕೀಯವಾಗಿ ಕೈಗೊಳ್ಳುವ ನಿರ್ಧಾರವಲ್ಲ. ಯೋಗ್ಯ ಸ್ಥಳದಲ್ಲಿ ವಿಮಾನ ನಿಲ್ದಾಣಕ್ಕೆ ಮಂಜೂರಾತಿ ಸಿಗಲಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಹೋಬಳಿ ತುಪ್ಪದಹಳ್ಳಿ, ಮೈಲನಹಳ್ಳಿಯಲ್ಲಿ ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಈಗಾಗಲೇ 3 ಸ್ಥಳಗಳನ್ನು ಗುರುತಿಸಿ, ನಾಗರಿಕ ವಿಮಾನಯಾನ ಇಲಾಖೆಗೆ ದಾಖಲೆ ಒದಗಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಕಾನೂನಾತ್ಮಕವಾಗಿ, ತಾಂತ್ರಿಕವಾಗಿ ಜಾಗ ಸರಿಯಿದೆ ಎಂದು ಹೇಳಿದ್ದಲ್ಲಿ ಮಾತ್ರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ, ನಿಲ್ದಾಣ ನಿರ್ಮಾಣವನ್ನು ತೀರ್ಮಾನಿಸಲಿದೆ. ಹಾಗಾಗಿ ವಿಮಾನ ನಿಲ್ದಾಣ ನನ್ನ ಕ್ಷೇತ್ರದಲ್ಲಿಯೇ ಆಗಬೇಕು ಎಂದು ರಾಜಕೀಯವಾಗಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಯಾರಾದರೂ ಒಬ್ಬರು ನಮ್ಮ ಊರಿಗೆ, ನಮ್ಮ ಕ್ಷೇತ್ರಕ್ಕೆ ನಿಲ್ದಾಣ ಕೊಂಡ್ಯೊಯ್ಯುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ತಾಂತ್ರಿಕ, ಕಾನೂನಾತ್ಮಕವಲ್ಲದೇ ಯಾವ ಸ್ಥಳ ವಿಮಾನ ನಿಲ್ದಾಣ ಮಾಡಿದರೆ ಹೆಚ್ಚು ಮಂದಿಗೆ ಅನುಕೂಲವಾಗುತ್ತದೆ ಎಂದು ಪರಿಶೀಲಿಸಿ ಮಂಜೂರು ಮಾಡಲಾಗುವುದು ಎಂದರು.
ಮನೆಮನೆಗೆ ನೀರು: ಮನೆಮನೆಗೆ ನಲ್ಲಿ ಮೂಲಕ ನೀರು ಒದಗಿಸಲು ಜಲಜೀವನ್ ಮಿಷನ್ ಯೋಜನೆ ರೂಪಿಸಲಾಗಿದ್ದು, ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಬಾರದು. ಅದಕ್ಕಾಗಿ ಶುದ್ಧ ನೀರು ಕುಡಿಯಬೇಕು ಎಂದು ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರಲ್ಲದೇ ಸ್ಥಳಿಯರನ್ನೇ ವಾಟರ್‌ಮನ್‌ಗಳನ್ನಾಗಿ ನೇಮಿಸಲಾಗುವುದು ಎಂದು ಸುಧಾಕರ್ ಹೇಳಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ರೈತಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುರೇಶ್, ಸಪ್ತಗಿರಿ ಶಂಕರ್ ನಾಯ್ಕ, ಹೋಬಳಿ ಅಧ್ಯಕ್ಷ ಸಿಎಂ.ಮಂಜುನಾಥ್, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ, ಉಪಾಧ್ಯಕ್ಷೆ ರೂಪಾ ರಘುನಾಥ್, ಗ್ರಾಪಂ ಲಕ್ಷ್ಮಣ್, ಲಲಿತಮ್ಮ ಚಿಕ್ಕಣ್ಣ, ನೇತ್ರೇಶ್, ಮಾರಣ್ಣ, ಶ್ರೀನಿವಾಸ್, ಬಸವರಾಜು, ಶಂಕರಪ್ಪ, ರಮೇಶ್, ಕೇಶವ ರಾವ್, ಅಪ್ಪು, ಬಾಬು ರಾವ್, ಜಯಣ್ಣ, ಸಿದ್ದರಾಜು, ಶಿವರಾಜು, ಸ್ವಾಮಿ, ನಿರ್ಮಿತಿ ಕೇಂದ್ರದ ಕರಿಯಪ್ಪ, ಯೋಗೇಶ್ ಗೌಡ, ಗಂಗಾಧರ್, ಜಯರಾಮು, ಎಸ್‌ಸಿ ಮೋರ್ಚಾ ಅಧ್ಯಕ್ಷ ಉಮೇಶ್ ಇದ್ದರು.
ಸೋಲೂರು ನೆಲಮಂಗಲಕ್ಕೆ ಸೇರಲಿ
ಸೋಲೂರು ಹೋಬಳಿ ಚುನಾವಣೆಯಲ್ಲಿ ಒಂದು ಕ್ಷೇತ್ರಕ್ಕೆ, ಕಂದಾಯ ಭೂಮಿಯಾಗಿ ಮತ್ತೊಂದು ಕ್ಷೇತ್ರಕ್ಕೆ ಸೇರಿರುವುದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಇದು ರಾಜಕೀಯ ಉದ್ದೇಶ, ಪೈಪೋಟಿ ಅಲ್ಲ. ಜನಸಾಮಾನ್ಯರಿಗೆ ಒಳ್ಳೆಯದಾಗುವುದು ಮುಖ್ಯ. ಸೋಲೂರು ಹೋಬಳಿ ಮಾಗಡಿಯಲ್ಲಿ ಇದ್ದರೆ ಸೂಕ್ತವೇ? ಅಥವಾ ನೆಲಮಂಗಲ ತಾಲೂಕಿಗೆ ಸೇರ್ಪಡೆಯಾದರೆ ಜನರಿಗೆ ಅನುಕೂಲವಾಗುತ್ತದೆಯೇ ಎಂದು ಎರಡೂ ತಾಲೂಕುಗಳ ಶಾಸಕರು ಯೋಚಿಸಬೇಕು. ನಾನು ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರಿಸಿದರೆ ಜನರಿಗೆ ಹೆಚ್ಚು ಲಾಭವಾಗುತ್ತದೆ ಎಂದು ಸರ್ಕಾರಕ್ಕೆ ಪತ್ರಬರೆದಿದ್ದೇನೆ. ಅವಶ್ಯಕತೆ ಇದ್ದರೆ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ, ಕಂದಾಯ ಸಚಿವರು ಇತ್ತ ಗಮನ ಹರಿಸಿ, ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸುವ ತಾಲೂಕಿಗೆ ಹೋಬಳಿಯನ್ನು ಸೇರಿಸಬೇಕು ಎಂದು ಸುಧಾಕರ್ ಒತ್ತಾಯಿಸಿದರು.