

ಸಕಲೇಶಪುರ: ಪಟ್ಟಣದ ನಾಗರಿಕರಿಗೆ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂಬ ನಿಟ್ಟಿನಲ್ಲಿ ನೂತನ ಫಿಲ್ಟರ್ ಹೌಸ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಚಂಕನಗರ ಬಡಾವಣೆಯಲ್ಲಿರುವ ಪುರಸಭೆಯ ಫಿಲ್ಟರ್ ಹೌಸ್ ಆವರಣದಲ್ಲಿ ನೂತನ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಹಲವು ವರ್ಷಗಳಿಂದ ಪಟ್ಟಣದ ಫಿಲ್ಟರ್ ಹೌಸ್ ಕಾರ್ಯನಿರ್ವಹಿಸುತ್ತಿದ್ದು, ಆದರೆ ಶುದ್ಧ ಕುಡಿಯುವ ನೀರು ಜನರಿಗೆ ಸರಿಯಾಗಿ ಲಭ್ಯವಾಗದ ಕಾರಣ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನೂತನ ಫಿಲ್ಟರ್ ಹೌಸ್ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ದಿನಕ್ಕೆ 40 ಲಕ್ಷ ಲೀಟರ್ ನೀರು ಶುದ್ಧೀಕರಣಗೊಳ್ಳುವುದರಿಂದ ಜನರಿಗೆ ಬಹಳ ಅನುಕೂಲವಾಗುತ್ತದೆ. ಒಟ್ಟು ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಕಾಮಗಾರಿ ಯೋಜನೆಯನ್ನು ಮಾಡಲಾಗುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ಪಟ್ಟಣದ ಕೆಲವು ಬಡಾವಣೆಗಳ ನಿವಾಸಿಗಳಿಗೆ ಶುದ್ಧ ಹಾಗೂ ಗುಣಮಟ್ಟದ ನೀರು ದೊರಕಲಿದೆ ಎಂದರು.
ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಉಪಾಧ್ಯಕ್ಷೆ ಜರೀನಾ, ಪುರಸಭಾ ಸದಸ್ಯರಾದ ಪ್ರದೀಪ್, ಪ್ರಜ್ವಲ್, ವನಜಾಕ್ಷಿ, ಸರಿತಾ, ಅನ್ನಪೂರ್ಣ, ವಿದ್ಯಾ, ಇಸ್ರಾರ್, ಬಿಜೆಪಿ ಮುಖಂಡರಾದ ಸುಧೀಶ್, ಲೋಕೇಶ್, ರುದ್ರಕುಮಾರ್ ಮುಂತಾದವರು ಹಾಜರಿದ್ದರು.