

ಹಾಸನ: ಸಮರ್ಪಕ ವಿದ್ಯುತ್ ಪೂರೈಕೆಗೆ ರಾಜ್ಯದಲ್ಲಿ 100 ಸಬ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸೂಕ್ತ ಜಾಗ ನೀಡಿದರೆ ಇನ್ನಷ್ಟು ಸಬ್‌ಸ್ಟೇಷನ್‌ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಸಿಟಿಸಿಎಲ್) ವತಿಯಿಂದ ಅರಸೀಕೆರೆ ತಾಲೂಕಿನ ಕಸಬಾ ಹೋಬಳಿ, ಸೂಳೆಕೆರೆ(ಆಗ್ಗುಂದ) ಗ್ರಾಮದಲ್ಲಿ ನಿರ್ಮಿಸಿರುವ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಲಭ್ಯವಿದೆ. ಅದನ್ನು ಸಮರ್ಪಕವಾಗಿ ಪೂರೈಸಲು ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರ ಈಗಾಗಲೇ 100 ಸಬ್ ಸ್ಟೇಷನ್‌ಗಳ ನಿರ್ಮಾಣಕ್ಕೆ ಕ್ರಮವಹಿಸಿದೆ. ಇನ್ನಷ್ಟು ಸಬ್‌ಸ್ಟೇಷನ್‌ಗಳು ಬೇಕು ಎಂಬ ಬೇಡಿಕೆ ಇದ್ದು, ಜಾಗದ ಕೊರತೆ ಇದೆ. ಸೂಕ್ತ ಜಾಗ ನೀಡಿದರೆ ಬೇಡಿಕೆಗೆ ತಕ್ಕಂತೆ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಕೃಷಿ ಪಂಪ್ ಸೆಟ್‌ಗಳಿಗೆ ಹಗಲು ವೇಳೆ ಸತತ 7 ಗಂಟೆ ವಿದ್ಯುತ್ ಪೂರೈಸುವ ಉದ್ದೇಶದಿಂದ ಕುಸುಮ್- ಸಿ ಯೋಜನೆಯಡಿ ಕೃಷಿ ಫೀಡರ್‌ಗಳ ಸೌರೀಕರಣ ಮಾಡಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ ರಾಜ್ಯದಲ್ಲಿ 2,400 ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಖಾಸಗಿಯವರು 10 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಈ ಯೋಜನೆ ಪೂರ್ಣಗೊಂಡರೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಮಸ್ಯೆ ಬಹುತೇಕ ಬಗೆಹರಿಯಲಿದೆ ಎಂದು ಹೇಳಿದರು.
ನಿರಂತರ ಜ್ಯೋತಿ ಯೋಜನೆಯಡಿ ಗೃಹ ಬಳಕೆಗೆ ನಿರಂತರ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಯಾವುದೇ ಸಮಸ್ಯೆ ಇದ್ದಲ್ಲಿ ಅದನ್ನು ತ್ವರಿತವಾಗಿ ಬಗೆಹರಿಸಲಾಗುವುದು. ವಿದ್ಯುತ್ ಪೂರೈಕೆ ವಿಚಾರಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದಲೇ ಮೂಲಸೌಕರ್ಯ ಹೆಚ್ಚಿಸಲು ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕೃಷಿಕರ ಅಭಿವೃದ್ಧಿಗಾಗಿ ಉತ್ತಮ ಯೋಜನೆಗಳನ್ನು ರೂಪಿಸಿ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರಲ್ಲದೆ, ಗೃಹ ಜ್ಯೋತಿ ಯೋಜನೆಯಡಿ ಸಾರ್ವಜನಿಕರಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗುತ್ತದೆ ಎಂದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಅರಸೀಕೆರೆ ಬರಡು ಭೂಮಿ ಎಂದು ಹೇಳಲಾಗುತ್ತಿತ್ತು. ಆದರೆ, ಹಲವು ಯೋಜನೆಗಳ ಮೂಲಕ ತಾಲೂಕಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದೀಗ ರೈತರಿಗೆ ಉತ್ತಮ ವಿದ್ಯುತ್ ಸೌಲಭ್ಯ ನೀಡಬೇಕಿದ್ದು, ಅರಸೀಕೆರೆಗೆ 100 ಮೆಗಾವಾಟ್ ವಿದ್ಯುತ್ ಬೇಕಾಗಿದೆ. ಜತೆಗೆ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಕಾರಣ ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಇದೆ. ಈ ಕಾರಣದಿಂದಾಗಿ ನಿರಂತರ ಜ್ಯೋತಿ ಮೂಲಕ ಈ ಸಮಸ್ಯೆ ಬಗೆಹರಿಸಲು ಕ್ರಮವಹಿಸ ಬೇಕಿದೆ. ಅಲ್ಲದೇ ತಾಲೂಕು ವ್ಯಾಪ್ತಿಯಲ್ಲಿ ಇನ್ನಷ್ಟು ಸಬ್ ಸ್ಟೇಷನ್‌ಗಳನ್ನು ಆರಂಭಿಸಿ ಎಂದು ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಧರ್ಮಶೇಖರ್, ಅಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕವಿತಾ, ದುಮ್ಮೇನ ಹಳ್ಳಿ ಗ್ರಾಪಂ ಅಧ್ಯಕ್ಷ ಎ.ಎಂ.ಅಜ್ಜಯ್ಯ, ಕ.ವಿ.ಪ್ರ.ನಿ.ನಿ ಅಧೀಕ್ಷಕ ಮಹೇಶ್, ಕಾರ್ಯಪಾಲಕ ಅಭಿಯಂತರರಾದ ಶಿವಾನಂದ, ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್ ಇತರರಿದ್ದರು.
ಸೋಲಾರ್ ಪಾರ್ಕ್ ಪರಿಶೀಲನೆ
ಅರಸೀಕೆರೆ ತಾಲೂಕಿನ ಸಂಕೋಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಇಂಧನ ಸಚಿವ ಕೆ.ಜೆ.ಜಾರ್ಜ್, ಕುಸುಮ್-ಸಿ ಯೋಜನೆಯಡಿ ಗ್ರಾಮದ 25 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಸೋಲಾರ್ ಪಾರ್ಕ್ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿ, ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನ ವೇಳೆ ವಿದ್ಯುತ್ ನೀಡಬೇಕೆಂಬ ಉದ್ದೇಶದಿಂದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕುಸುಮ್-ಸಿ ಯೋಜನೆ ಬಗ್ಗೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು. ಗುತ್ತಿಗೆದಾರರು ಸರಿಯಾದ ಸಮಯದಲ್ಲಿ ಕೆಲಸ ಆರಂಭಿಸದಿದ್ದರೆ ಅವರಿಗೆ ನೋಟಿಸ್ ನೀಡಿ, ಟೆಂಡರ್ ರದ್ದುಪಡಿಸಿ, ಹೊಸ ಟೆಂಡರ್ ಕರೆದು ಬೇರೆಯವರಿಗೆ ನೀಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.