

ಕೆ.ಆರ್.ಪೇಟೆ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಜಮೀನುಗಳಿಗೆ ರೈತರು ಓಡಾಡಲು ಹಲವು ವರ್ಷಗಳಿಂದಿದ್ದ ರಸ್ತೆ ಸಮಸ್ಯೆಗೆ ಶಾಸಕ ಎಚ್.ಟಿ.ಮಂಜು ಕಂದಾಯ, ಸರ್ವೇ ಅಧಿಕಾರಿಗಳಿಗೆ ಪರಿಹಾರ ಸೂಚಿಸಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ರೈತರಿಗೆ ಅನುಕೂಲವಾಗಲೆಂದು ಪರ್ಯಾಯ ರಸ್ತೆ ನಿರ್ಮಿಸುವಂತೆ ತಿಳಿಸಿದರು.
ಕಾಲೇಜು ಹಿಂಭಾಗಕ್ಕೆ ಹೊಂದಿಕೊಂಡಂತೆ ರೈತರ ನೂರಾರು ಎಕರೆ ಕೃಷಿ ಭೂಮಿಯಿದ್ದು ರೈತರು ಬೇಸಾಯ ಚಟುವಟಿಕೆ ನಡೆಸುವುದು ಸೇರಿದಂತೆ ತಮ್ಮ ಜಮೀನಿಗೆ ಜಾನುವಾರುಗಳು ಮತ್ತು ಎತ್ತಿನ ಬಂಡಿಗಳೊಂದಿಗೆ ಓಡಾಡಲು ಅಗತ್ಯವಾಗಿ ಬೇಕಾಗಿದ್ದ ಮೂಲ ಕಚ್ಛಾರಸ್ತೆಯನ್ನು ಮೇಲ್ಕಂಡ ಎರಡೂ ಶಿಕ್ಷಣ ಸಂಸ್ಥೆಗಳು ಕಾಂಪೌಂಡ್ ನಿರ್ಮಿಸಿ ರೈತರು ಓಡಾಡಲು ತೀವ್ರವಾದ ಸಂಕಷ್ಟ ಎದುರಾಗಿತ್ತು. ಕಾಲೇಜಿನ ಮಧ್ಯಭಾಗದಲ್ಲಿ ರೈತರು ಓಡಾಡಲು ಬಳಸುತ್ತಿದ್ದ ಕಚ್ಛಾ ರಸ್ತೆಗೆ ಪರ್ಯಾಯವಾಗಿ ಬಸ್ ಡಿಪೋಗೆ ಹೊಂದಿಕೊಂಡಂತೆ ಕಾಂಪೌಂಡ್ ಪಕ್ಕದಲ್ಲಿ 30 ಅಡಿ ವಿಸ್ತೀರ್ಣದ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಿ ರೈತೆರು ಸೇರಿದಂತೆ ಸಾರ್ವಜನಿಕರು ಓಡಾಡಲು ಅನುಕೂಲ ಮಾಡಿಕೊಡುವಂತೆ ತಹಸೀಲ್ದಾರ್ ನಿಸರ್ಗಪ್ರಿಯ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ ಅವರಿಗೆ ಶಾಸಕ ನಿರ್ದೇಶನ ನೀಡಿದರು.
ತಹಸೀಲ್ದಾರ್ ನಿಸರ್ಗಪ್ರಿಯ ಮಾತನಾಡಿ, ಪಾಲಿಟೆಕ್ನಿಕ್‌ಗೆ ಸೇರಿದ ಜಾಗದಲ್ಲಿ ಇಂಜಿನಿಯರಿಂಗ್ ಕಾಲೇಜು ಹಾಗೂ ಬಸ್ ಡಿಪೋ ನಿರ್ಮಿಸಲು ಅವಕಾಶ ಮಾಡಲಾಗಿದೆ. ಪಾಲಿಟೆಕ್ನಿಕ್ ಕಾಂಪೌಂಡ್ ನಿರ್ಮಿಸಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಮಾನವೀಯ ನೆಲೆಗಟ್ಟಿನ ಆಧಾರದಂತೆ ಪರ್ಯಾಯ ರಸ್ತೆಗೆ ಜಾಗ ಬಿಟ್ಟುಕೊಡುವುದು ಅನಿವಾರ್ಯವಾಗಿದೆ. ಆದ್ದರಿಂದ ಪ್ರಸ್ತುತ ಪಾಲಿಟೆಕ್ನಿಕ್ ಕಟ್ಟಡದ ಪಕ್ಕದಲ್ಲಿ ನಿರ್ಮಿಸಿರುವ ಬಸ್ ಡಿಪೋಗೆ ಹೊಂದಿಕೊಂಡಂತೆ 30 ಅಡಿ ಅಗಲದ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡು ರಸ್ತೆ ನಿರ್ಮಿಸಿರುವ ಜಾಗವನ್ನು ಭೂದಾಖಲೆಯಲ್ಲಿ ನಮೂದಿಸಿಕೊಟ್ಟು ಅನುಕೂಲ ಮಾಡಿಕೊಡುತ್ತೇನೆ ಎಂದು ಶಾಸಕರ ನಿರ್ದೇಶನಕ್ಕೆ ಪೂರಕವಾಗಿ ಉತ್ತರಿಸಿದರು.
ಪಾಲಿಟೆಕ್ನಿಕ್ ಪ್ರಾಂಶುಪಾಲ ನಾಗರಾಜು ಮಾತನಾಡಿ, ನಮ್ಮ ಇಲಾಖೆಗೆ ಸೇರಿದ ಭೂದಾಖಲೆಗಳನ್ನು ಸರಿಪಡಿಸಿಕೊಟ್ಟು ನಮ್ಮ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.
ಪಾಲಿಟೆಕ್ನಿಕ್ ಕಟ್ಟಡದ ಹಿಂಭಾಗದ ಜಮೀನುಗಳಿಗೆ ರೈತರು ತಮ್ಮ ಬಂಡಿಗಳು ಹಾಗೂ ಜಾನುವಾರುಗಳೊಂದಿಗೆ ಹೋಗಲು ಅನುಕೂಲವಾಗುವಂತೆ ಬಸ್ ಡಿಪೋ ಕಾಂಪೌಂಡ್‌ಗೆ ಹೊಂದಿಕೊಂಡಂತೆ 30 ಅಡಿ ವಿಸ್ತೀರ್ಣದ ರಸ್ತೆಯನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಡಲಾಗುತ್ತಿದೆ. ಈ ರಸ್ತೆಯನ್ನೇ ಶಾಶ್ವತವಾಗಿ ಅಭಿವೃದ್ಧಿಪಡಿಸಿ ರೈತರಿಗೆ ಹಾಗೂ ಎರಡೂ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಜವಾಬ್ದಾರಿಯನ್ನು ಸ್ವತಃ ನಾನೇ ಹೊರುತ್ತೇನೆ. ರಸ್ತೆ ನಿರ್ಮಿಸಲು ಬೇಕಾದ ವಿಶೇಷ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಡುತ್ತೇನೆ. ರೈತರಿಗೆ ತೊಂದರೆ ನೀಡಿ ನಾವುಗಳೂ ಸಾಧಿಸಬೇಕಾದ್ದು ಏನೂ ಇಲ್ಲ, ಆದ್ದರಿಂದ ನಾಳೆಯಿಂದಲೇ ರಸ್ತೆ ನಿರ್ಮಾಣಕ್ಕೆ ಸ್ಥಳ ಗುರುತಿಸಿಕೊಡಿ ಎಂದು ಸಭೆಯಲ್ಲಿದ್ದ ಭೂದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ ಅವರಿಗೆ ಶಾಸಕ ಎಚ್.ಟಿ.ಮಂಜು ನಿರ್ದೇಶನ ನೀಡಿದರು.
ಸಭೆಯಲ್ಲಿ ರೈತರಾದ ವಿಠಲಾಪುರ ಜಯರಾಂ, ಕೆ.ಎಸ್.ಮಂಜುನಾಥ್, ಶೀಳನೆರೆ ಭರತ್‌ಕುಮಾರ್, ಸೈಕಲ್‌ಶಾಪ್ ಜವರಪ್ಪ, ಕೆ.ಎಸ್.ಗೋಪಾಲ, ಕೆ.ಎಸ್.ಮಧುಸೂದನ್, ಹಂಸರಮೇಶ್, ನಿರಂಜನ, ಕೆ.ಆರ್.ವಾಸು, ಅಂಬೇಡ್ಕರ್ ನಗರದ ಯಜಮಾನ ನಾಗರಾಜು, ರಾಜಸ್ವನಿರೀಕ್ಷಕ ಜ್ಞಾನೇಶ್, ಕಂದಾಯಾಧಿಕಾರಿ ಜಗದೀಶ್, ಪುರಸಭೆ ಮುಖ್ಯಾಧಿಕಾರಿ ಸತೀಶ್, ಪೊಲೀಸ್ ಇನ್ಸ್‌ಪೆಕ್ಟರ್ ಆನಂದೇಗೌಡ ಇದ್ದರು.