ವಕೀಲರಿಗೆ ಸಂವಿಧಾನ ಪ್ರತಿಪಾದಿಸುವ ಆಂಶಗಳೇ ಮೌಲ್ಯ: ಸಿಜೆಐ ನ್ಯಾ. ಚಂದ್ರಚೂಡ್

NLSIu convocation
Published on

ಬೆಂಗಳೂರು ವಕೀಲರಿಗೆ ಸಂವಿಧಾನ ಪ್ರತಿಪಾದಿಸುವ ಅಂಶಗಳೇ ಮೌಲ್ಯಗಳಾಗಿದ್ದು, ಸ್ವಂತಿಕೆಯಿಂದ ನಡೆದುಕೊಳ್ಳುವ ವಕೀಲರು ವೃತ್ತಿಯಲ್ಲಿ ಯಶಸ್ಸು ಕಾಣಲಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಪದವೀಧರ ಕಾನೂನು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸುಮನಹಳ್ಳಿಯಲ್ಲಿರುವ ಡಾ. ಬಾಬು ಜಗ ಜೀವನ್ ರಾಮ್ ಭವನದಲ್ಲಿ ಭಾನುವಾರ ‘ಭಾರತದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಎಸ್‌ಐಯು) 32ನೇ ಘಟಿಕೋತ್ಸವದಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.

ವೃತ್ತಿ ಜೀವನದಲ್ಲಿನ ಸ್ವಂತಿಕೆ, ವೈಯಕ್ತಿಕ ಅನುಭವಗಳು, ಮೌಲ್ಯಗಳು ಮತ್ತು ಆಕಾಂಕ್ಷೆಗಳು ನಿಮ್ಮ ಸುತ್ತಲಿನ ಜನರ ಜತೆಗೆ ಬೆಸೆಯಲು ನೆರವಾಗುತ್ತದೆ. ನೀವು ಚಾಣಾಕ್ಷರೆಂದು ಕರೆಸಿಕೊಳ್ಳುವ ಜತೆಗೆ ಕರುಣೆಯುಳ್ಳ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ತಿಳಿಸಿದರು.

ಆದರೆ, ಅನಿಶ್ಚಿತತೆಯ ಸಂದರ್ಭದಲ್ಲಿ ತೆಗೆದುಕೊಳ್ಳುವ ತೀರ್ಮಾನಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇಂದಿನ ಕಾಲದಲ್ಲಿ ಸಂಕೀರ್ಣ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಇದು ದೀರ್ಘಾಕಾಲದಲ್ಲಿ ನೆಮ್ಮದಿಗೆ ಭಂಗ ತರುತ್ತದೆ. ಆದ್ದರಿಂದ ನೈಜ ನಾಯಕರು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ಅರಿತು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ವಿವಿಯ ಕುಲಪತಿ ಸುಧೀರ್ ಕೃಷ್ಣಸ್ವಾಮಿ, ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.

1079 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿ 48 ಚಿನ್ನದ ಪದಕಗಳು ಸೇರಿ ಒಟ್ಟು 1,079 ಪದವೀಧರ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಸಿಜೆಐ ನ್ಯಾ. ಡಿ.ವೈ. ಚಂದ್ರಚೂಡ್ ಪದವಿ ಪ್ರದಾನ ಮಾಡಿದರು.

ಇದರಲ್ಲಿ 2 ಪಿಎಚ್.ಡಿ, 52 ಸ್ನಾತಕೋತ್ತರ ಸಾರ್ವಜನಿಕ ನೀತಿ ಕಾರ್ಯಕ್ರಮಗಳು, 90 ಸ್ನಾತಕೋತ್ತರ ಕಾನೂನು ಕಾರ್ಯಕ್ರಮ, 85 ಕಲಾ ಮತ್ತು ಕಾನೂನು (ಆನರ್ಸ್) ಮತ್ತು 850 ಆನ್‌ಲೈನ್ ಮತ್ತು ಹೈಬ್ರಿಡ್ ಶಿಕ್ಷಣ ಕಾರ್ಯಕ್ರಮಗಳು (ಸ್ನಾತಕೋತ್ತರ ಕಾನೂನು ಪದವಿ ಮತ್ತು 7 ಸ್ನಾತಕೋತ್ತರ ಡಿಪ್ಲೊಮೊ) ಸೇರಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net