

ಕೊಳ್ಳೇಗಾಲ: ಸಂವಿಧಾನ ನಮಗೆ ಬದುಕುವ ಹಕ್ಕು ಕೊಟ್ಟಿದೆ, ಎಲ್ಲ ಧರ್ಮದವರು ಗೌರವಯುತವಾಗಿ ಬದುಕಲು, ಮೂಲ ಹಕ್ಕುಗಳನ್ನು ಹೊಂದಲು ಸಂವಿಧಾನ ಸಹಕಾರಿ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಎನ್.ಆರ್.ಲೋಕಪ್ಪ ತಿಳಿಸಿದರು.
ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾನೂನಿನ ಅರಿವಿಲ್ಲದೆ ಸಂಕಷ್ಟಕ್ಕೆ ಸಿಲುಕಬಾರದು. ಸಾಮಾಜಿಕವಾಗಿ, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರು ಕಾನೂನು ಸೇವೆಗಳ ಲಭ್ಯತೆ ಪಡೆಯಬೇಕು. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ಕಾನೂನು ಸೇವಾ ಸಮಿತಿಗಳನ್ನು ರಚಿಸಿ ಧರ್ಮ, ಜಾತಿ, ಪಂಗಡದ ಭೇದ ಭಾವವಿಲ್ಲದೆ ಕಾನೂನು ಸೇವೆಗಳನ್ನು ಪೂರೈಸಿ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಪೋಕ್ಸೊ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಬೇಕು, ಉತ್ತಮ ವಿದ್ಯಾಭ್ಯಾಸದೊಂದಿಗೆ ಗುರಿ ತಲುಪಬೇಕು, ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಬಾರದು, ಕಾನೂನನ್ನು ಯಾರೂ ಕಡೆಗಣಿಸಬಾರದು, ಜೀವನವನ್ನು ಅಂತ್ಯಗೊಳಿಸುವ ಕೃತ್ಯಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ಮಾತನಾಡಿ, ಉಚಿತ ಕಾನೂನು ನೆರವು ಅರಿವನ್ನು ಎಲ್ಲರಲ್ಲಿ ಮೂಡಿಸುವುದು ಅಗತ್ಯ. ಕಾನೂನಿನಿಂದ ವಂಚಿತರಾದವರು ಈ ಕಾರ್ಯಕ್ರಮದ ನೆರವು ಪಡೆಯಬೇಕು. ಕಾನೂನಿನ ಅರಿವಿದ್ದರೆ ತಪ್ಪುಗಳಾಗಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರದ ಕಾನೂನನ್ನು ನಾವು ತಿಳಿಯುವುದರ ಜತೆಗೆ ಇತರರಿಗೆ ತಿಳಿಸಬೇಕು. ದೇಶವನ್ನು ಸಬಲಗೊಳಿಸಬೇಕಾದರೆ ಕಾ ನೂನನ್ನು ಅರ್ಥಮಾಡಿಕೊಂಡು ಪ್ರಜ್ಞಾವಂತರಾಗಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎನ್.ನಂದಿನಿ ಮಾತನಾಡಿದರು.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬಸವರಾಜು, ಉಪಾಧ್ಯಕ್ಷೆ ಸೀಮಾ ತಹಸೀನ್ ಸುಲ್ತಾನಾ, ಕಾರ್ಯದರ್ಶಿ ಮೋಹನ್‌ಕುಮಾರ್, ಪ್ರಾಂಶುಪಾಲ ಡಿ.ಕೃಷ್ಣೇಗೌಡ ಮತ್ತಿತರರಿದ್ದರು.