ಸಂವಿಧಾನ ಬದಲು ಡಿಸಿಎಂ ವಿರುದ್ಧ ಸಿಡಿದೆದ್ದ ಬಿಜೆಪಿ

BJP_Protest
Published on

ತುಮಕೂರು: ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನ ಬದಲಿಸಲು ಸಿದ್ಧ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿಕೆ ಖಂಡಿಸಿ ಬಿಜೆಪಿ ಜಿಲ್ಲಾ ಟಕದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಶಿವಕುಮಾರ್​ ಪ್ರತಿಕೃತಿ ದಹಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ನಗರದ ಟೌನ್​ಹಾಲ್​ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಟಕದ ನೇತೃತ್ವದಲ್ಲಿ ಮಂಗಳವಾರ ಸಂವಿಧಾನ ಬದಲಿಸುವ ಡಿ.ಕೆ.ಶಿವಕುಮಾರ್​ ಹೇಳಿಕೆ ಖಂಡಿಸಿ ಪ್ರತಿಭಟಿಸಿ ಘೋಷಣೆಗಳನ್ನು ಕೂಗಲಾಯಿತು. ಕಾಂಗ್ರೆಸ್​ ನಾಯಕರಿಗೆ ತಾಕತ್ತಿದ್ದರೆ ಸಂವಿಧಾನ ಬದಲಾವಣೆಗೆ ಕೈ ಹಾಕಲಿ ಎಂದು ಪ್ರತಿಭಟನಾನಿರತರು ಸವಾಲು ಹಾಕಿದರು.

ಪ್ರತಿಭಟನಾನಿರತರನ್ನು ಉದೇಶಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮಿಸಲು ನೀಡುವ ಕ್ರಮ ವಿರೋಧಿಸಿ ಬಿಜೆಪಿ ಪ್ರತಿಭಟನೆಯ ನಡುವೆ ಸಿಎಂ ಸಿದ್ದರಾಮಯ್ಯ ಸರ್ಕಾರವು ಮಸೂದೆ ಮಂಡನೆ ಮಾಡಿದೆ. ಧರ್ಮಾಧಾರಿತ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲದ ಕಾರಣ ಸಂವಿಧಾನವನ್ನೇ ತಿದ್ದುಪಡಿ ಮಾಡಿ ಮುಸ್ಲಿಂಮರಿಗೆ ಮೀಸಲಾತಿ ಉಳಿಸಿಕೊಳ್ಳುವುದಾಗಿ ಶಿವಕುಮಾರ್​ ಹೇಳಿರುವುದು ಖಂಡನೀಯ ಎಂದರು.

ಹೆಸರಿಗೆ ತಾವು ಅಹಿಂದ ನಾಯಕರೆಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ಸಿಗರು ದಲಿತರ ಹಣ, ಅನ್ನಕ್ಕೆ ಕನ್ನ ಹಾಕಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾ ಇತರರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್​ ಸರ್ಕಾರ ತೊಲಗುವವರೆಗೂ ಸರ್ಕಾರದ ವಿರುದ್ಧ ಬಿಜೆಪಿ ವಿರೋಧ ಪಕ್ಷವಾಗಿ ಪರಿಣಾಮಕಾರಿ ಹೋರಾಟ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲಾಗುತ್ತಿದೆ. ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಮುಸ್ಲಿಂಮರಿಗೆ ಸರ್ಕಾರ ಕಾಮಗಾರಿಯ ಗುತ್ತಿಗೆಯಲ್ಲಿ ಮೀಸಲಾತಿ ನೀಡಿ, ಅದನ್ನು ಉಳಿಸಿಕೊಳ್ಳಲು ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವುದು ಹೇಯ ಕೃತ್ಯ, ಸಂವಿಧಾನ ಬದಲಾವಣೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಎಚ್ಚರಿಸಿದರು.

ಜಿಲ್ಲಾ ಉಪಾಧ್ಯಕ್ಷ ವೈ.ಎಚ್​.ಹುಚ್ಚಯ್ಯ ಮಾತನಾಡಿ, ಧರ್ಮದ ಆಧಾರದಲ್ಲಿ ಯಾವುದೇ ಮೀಸಲಾತಿ ನೀಡಲು ಅವಕಾಶವಿಲ್ಲ ಎಂದು ಡಾ.ಬಿ.ಆರ್​.ಅಂಬೇಡ್ಕರ್​ ಅವರು ರಚಿಸಿರುವ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ. ಮುಸಲ್ಮಾನರಿಗೆ ಮೀಸಲಾತಿ ನೀಡುವ ಸಲುವಾಗಿ ಸಂವಿಧಾನವನ್ನೇ ಬದಲಾವಣೆ ಮಾಡಲು ತಯಾರಿದ್ದೇವೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿಕೆ ಉದ್ಧಟತನದ್ದು. ತಾಕತ್ತಿದ್ದರೆ ಸಂವಿಧಾನ ಬದಲಾವಣೆ ಮಾಡಲಿ. ಸಂವಿಧಾನ ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ, ಬಜೆಟ್​ನಲ್ಲಿ 4 ಸಾವಿರ ಕೋಟಿ ರೂ., ಅನುದಾನವನ್ನು ಮುಸ್ಲಿಂಮರಿಗೆ ಮೀಸಲಿಟ್ಟಿದ್ದಾರೆ. ಸಂವಿಧಾನ ಬಾಹಿರವಾಗಿ ಶೇಕಡ 4ರಷ್ಟು ಮೀಸಲಾತಿಯನ್ನು ಕಾಮಗಾರಿಯಲ್ಲಿ ನೀಡಿ ಅವರನ್ನ ಓಲೈಸಲು ಮುಂದಾಗಿದ್ದಾರೆ. ಮುಸಲ್ಮಾನರಿಗಾಗಿ ಸಂವಿಧಾನವನ್ನೇ ಬದಲಾಯಿಸುವ ಹೇಳಿಕೆ ಧೋರಣೆ ಖಂಡನೀಯ ಎಂದರು.

ರಾಜ್ಯ ಬಿಜೆಪಿ ವಕ್ತಾರ ಎಚ್​.ಎನ್​.ಚಂದ್ರಶೇಖರ್​, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಚ್​.ಎ. ಆಂಜನಪ್ಪ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಎಚ್​.ನವಚೇತನ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್​ಗೌಡ, ಕಾರ್ಯದರ್ಶಿ ಎಚ್​.ಎಂ.ರವೀಶಯ್ಯ, ನಗರಾಧ್ಯಕ್ಷ ಧನುಷ್​, ಮುಖಂಡರಾದ ಟಿ.ಎಚ್​.ಹನುಮಂತರಾಜು, ಬಂಬೂ ಮೋಹನ್​, ಮಲ್ಲಿಕಾರ್ಜುನ್​, ಸಿ.ಎನ್​.ರಮೇಶ್​, ವಿಷ್ಣುವರ್ಧನ್​, ಪುಟ್ಟರಾಜು, ಇಂದ್ರಕುಮಾರ್​, ಟಿ.ಆರ್​.ಸದಾಶಿವಯ್ಯ, ಸತ್ಯಮಂಗಲ ಜಗದೀಶ್​, ನಂಜುಂಡಸ್ವಾಮಿ, ಗಣೇಶ್​ಪ್ರಸಾದ್​, ಆಟೋ ಯಡಿಯೂರಪ್ಪ, ನಿಸರ್ಗ ರಮೇಶ್​, ಜೆ.ಜಗದೀಶ್​, ಮರಿತಿಮ್ಮಯ್ಯ, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಕಾಂಗ್ರೆಸ್​ ಸರ್ಕಾರಕ್ಕೆ ಶನಿಕಾಟ ಶುರುವಾಗಿದೆ. ನಿತ್ಯ ಒಂದಲ್ಲೊಂದು ಅವಾಂತರಗಳಲ್ಲಿ ಸಿಲುಕಿಕೊಳ್ಳುತ್ತಿದೆ. ಸಮಾಜ ವಿರೋಧಿ ಕೆಲಸ ಮಾಡುವುದು, ದಲಿತರ ಹಣ ಲಪಟಾಯಿಸುವುದರಲ್ಲಿ ಕಾಂಗ್ರೆಸ್​ ನಾಯಕರು ಮುಳುಗಿದ್ದಾರೆ. ಒಂದು ವರ್ಗದ ಓಲೈಕೆ ಮಾಡಲು ದ್ವೇಷ ತುಂಬುವ ಸಮಾಜ ಕಂಟಕ ಕೆಲಸಕ್ಕೆ ಕೈ ಹಾಕಿದ್ದಾರೆ. ಎಚ್​.ಎಸ್​.ರವಿಶಂಕರ್​ ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net