ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆಗೆ ಚಿಂತನೆ

ಡ್ರೋನ್ ಮೂಲಕ ನ್ಯಾನೋ ಯೂರಿಯಾ ಸಿಂಪಡಣೆಗೆ ಚಿಂತನೆ
Published on

ಬನ್ನೂರು: ರಸಗೊಬ್ಬರ ಬೇಕಿರುವುದು ಗಿಡಗಳಿಗೆ ಹೊರತು ಮಣ್ಣಿಗಲ್ಲ. ಇದೀಗ ರಸಗೊಬ್ಬರ ಬಳಕೆಯಲ್ಲಿ ಯೂರಿಯಾ ಬದಲಿಗೆ ನ್ಯಾನೋ ಯೂರಿಯಾ ಅಸ್ತಿತ್ವಕ್ಕೆ ಬಂದಿದ್ದು, ಗಿಡಗಳಿಗೆ ಸಿಂಪಡಣೆ ಮಾಡಬಹುದಾಗಿದೆ. ಇದನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡುವ ವ್ಯವಸ್ಥೆಯನ್ನು ಯಾಚೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ಹೊಂದಿದ್ದು, ಸಿಂಪಡಣೆಗೆ ಎಕರೆಗೆ 250 ರೂ. ಮಾತ್ರ ಖರ್ಚಾಗಲಿದೆ ಎಂದು ಯಾಚೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.

ಯಾಚೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಘವು 10.83 ಲಕ್ಷ ಸಾವಿರ ರೂ. ನಿವ್ವಳ ಲಾಭ ಹೊಂದಿದೆ. ಪ್ರಾರಂಭದಲ್ಲಿ ಕಡಿಮೆ ವಹಿವಾಟಿನ ಮೂಲಕ ಆರಂಭಿಸಲಾದ ಸಹಕಾರ ಸಂಘ ಇಂದು ಕೋಟಿ ರೂ. ಮೀರಿದ ವಹಿವಾಟಿನತ್ತ ಮುಖ ಮಾಡಿದೆ. ಇದಕ್ಕೆ ಊರಿನ ಎಲ್ಲ ಸಹಕಾರಿಗಳು ಹಾಗೂ ಸದಸ್ಯರ ಕೊಡುಗೆ ಮಹತ್ವದ್ದಾಗಿದೆ ಎಂದರು.

ನೊಗದ ಮೂಲಕ ವ್ಯವಸಾಯ ಪದ್ಧತಿ ಆರಂಭಿಸಿದ ರೈತ ಹಂತ ಹಂತವಾಗಿ ಬದಲಾವಣೆಯತ್ತ ಸಾಗುತ್ತಿದ್ದಾನೆ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ರೈತನ ಖರ್ಚನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಕೃಷಿ ಪದ್ಧತಿಗಳು ಆವಿಷ್ಕಾರವಾಗುತ್ತಿವೆ. ಇವುಗಳನ್ನು ಅಳವಡಿಸಿಕೊಂಡು ರೈತ ತನ್ನ ಆದಾಯವನ್ನು ವೃದ್ಧಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಪ್ರತಿ ವರ್ಷ ಆದಾಯ ವೆಚ್ಚದ ಮಾಹಿತಿಯ ಸಭೆಯಲ್ಲಿ ಹೊಸದೊಂದು ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದ್ದು, ಈ ಸಾಲಿನಲ್ಲಿ ಪಿಎಸಿಸಿಎಸ್ ಯಾಚೇನಹಳ್ಳಿ ಹೆಸರಿನಲ್ಲಿ 500 ಎಂಎಲ್ ನೀರಿನ ಬಾಟಲನ್ನು ಕಡಿಮೆ ಬೆಲೆಯಲ್ಲಿ ನೀಡುವ ಯೋಜನೆಯನ್ನು ಶ್ರೀ ಕಂಪನಿಯೊಂದಿಗೆ ಸೇರಿ ರೂಪಿಸಿರುವುದಾಗಿ ಮಾಹಿತಿ ನೀಡಿದರು. ಯಾವುದೇ ಸಮಾರಂಭಕ್ಕೂ ಕಡಿಮೆ ಬೆಲೆಯಲ್ಲಿ ನೀಡುವ ನೀರಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ತಿಳಿಸಿದರು.

ಸಂಘದ ಸದಸ್ಯರಿಗೆ ಅಪಘಾತ ವಿಮೆಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಿದ್ದು, ಇಫ್ರೋ ಕಂಪನಿಯ ಸಹಯೋಗದಲ್ಲಿ ಸಂಘದ ಸದಸ್ಯರಿಗೆ ಅಪಘಾತಗಳಾದರೆ ಅವರಿಗೆ 1 ಲಕ್ಷ ರೂ. ವಿಮೆ ಸೌಲಭ್ಯ ಒದಗಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
2023-24ನೇ ಸಾಲಿನ ಖರ್ಚು-ವೆಚ್ಚದ ಬಗ್ಗೆ ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ. ಕ್ಯಾತೇಗೌಡ ವಿವರಿಸಿದರು. 2024-25ನೇ ಸಾಲಿನ ಅಂದಾಜು ಬಜೆಟ್ ಮಂಡಿಸಿ ಸದಸ್ಯರ ಒಪ್ಪಿಗೆ ಪಡೆಯಲಾಯಿತು.

ಯಾಚೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೈ.ಎಂ. ಚಂದ್ರು, ವೈ.ಕೆ. ಬೋರೇಗೌಡ, ವೈ.ಎಚ್. ಹನುಮಂತೇಗೌಡ, ವೈ.ಜಿ.ಮಹೇಂದ್ರ, ಎಚ್.ಪಿ. ಪ್ರತಿಭಾ ಮಲ್ಲೇಶ್, ಕೆಂಪಮ್ಮ ಸಿದ್ದೇಗೌಡ, ರಾಜು, ವೈ.ಎಂ. ನಾಗೇಂದ್ರ, ದುರ್ಗೇಶ್, ವೈ.ಎಸ್. ಶಿವರಾಮು, ರಾಜಪ್ಪ, ವೈ.ಎ. ಪುಟ್ಟರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net