ಪ್ರಸಿದ್ಧ ದೇಗುಲಗಳ ಅಭಿವೃದ್ಧಿಗೆ ಚಿಂತನೆ

SRP_02-01jpj
Published on

ಶ್ರೀರಂಗಪಟ್ಟಣ: ಶಕ್ತಿಕೇಂದ್ರ ಆರತಿಉಕ್ಕಡ ಅಹಲ್ಯಾದೇವಿ ದೇವಾಲಯ ಹಾಗೂ ಶ್ರೀನಿಮಿಷಾಂಬ ಸೇರಿದಂತೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕ್ಷೇತ್ರದ ಪ್ರಸಿದ್ಧ ದೇಗುಲಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.


ತಾಲೂಕಿನ ಆರತಿ ಉಕ್ಕಡ ಅಹಲ್ಯಾದೇವಿ ದೇಗುಲ ಹಾಗೂ ಶ್ರೀನಿಮಿಷಾಂಬ ದೇವಾಲಯಕ್ಕೆ ಸೋಮವಾರ ಕ್ಷೇತ್ರದ ಶಾಸಕ ಹಾಗೂ ಸೆಸ್ಕಾಂ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಜತೆಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.


ಕ್ಷೇತ್ರದ ವಿವಿಧ ದೇವಾಲಯಗಳಲ್ಲಿ ಅಭಿವೃದ್ಧಿ ಕುರಿತು ಶಾಸಕ ರಮೇಶ ಬಾಬು ಅವರು ಹಲವು ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನದ ಜತೆಗೆ ಭಕ್ತರು ಹಾಗೂ ದೈವಿಕ ಕಾರ್ಯಕ್ರಮಗಳಿಗೆ ಅಗತ್ಯತೆ ಇರುವ ಅಭಿವೃದ್ಧಿ ನಿರ್ಮಾಣ ಯೋಜನೆಗೆ ಪರಿಶೀಲನೆ ನಡೆಸಲಾಗಿದೆ ಎಂದರು.


ಶೀಘ್ರದಲ್ಲಿ ಸ್ವಚ್ಛ ಕುಡಿಯುವ ನೀರು, ಸ್ವಚ್ಛತೆ, ದೇವಾಲಯಗಳಲ್ಲಿ ಮೂಲ ಸೌಕರ್ಯ ಜತೆಗೆ ದಾಸೋಹ ಭವನ ನಿರ್ಮಾಣ, ದಾಸೋಹಕ್ಕೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ. ಸರ್ಕಾರದ ಹಂತದಲ್ಲಿ ಅನುಮತಿ ಪಡೆದು ಕಾಮಗಾರಿ ಜಾರಿಗೊಳಿಸಲು ಅನುದಾನ ಬಿಡುಗಡೆ ಮಾಡಲಾಗುತ್ತದೆ. ನಿಮಿಷಾಂಬ ದೇಗುಲದಲ್ಲೂ ಅಗತ್ಯತೆ ಇರುವ ಕಾಮಗಾರಿಗಳನ್ನು ನಡೆಸಲಾಗುವುದು ಎಂದರು.


ಇದೆ ವೇಳೆ ಅಹಲ್ಯಾದೇವಿಗೆ ಪೂಜೆ ಸಲ್ಲಿಸಿಕೊಂಡು ಬಂದಿರುವ ಮಾರುಗುಡ್ಡಯ್ಯನ ವಂಶಸ್ಥ ಹಾಗೂ ಬೆಸ್ತಾರ್ ಸಮುದಾಯ ಮುಖಂಡ ಚಂದ್ರು ಮಾತನಾಡಿ, ಪುರಾತನ ಕಾಲದಿಂದ ದೇವಾಲಯ ನಿರ್ವಹಣೆ, ಪೂಜಾ ಕೈಂಕರ್ಯವನ್ನು ನಮ್ಮ ವಂಶಸ್ಥರಿಂದ ನಡೆಯುತ್ತಿದ್ದು, ಕಳೆದ 12 ವರ್ಷಗಳಿಂದ ಕೆಲವು ರಾಜಕೀಯ ವಿರೋಧಿಗಳ ಷಡ್ಯಂತ್ರಕ್ಕೆ ಒಳಗಾಗಿ ಸರ್ಕಾರದ ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದಿದೆ. ಆದರೆ ಅಂದಿನಿಂದ ಕ್ಷೇತ್ರದಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ನಮ್ಮ ವಂಶಸ್ಥರಿಂದ ನಿರ್ಮಾಣ ಹಾಗೂ ನಿರ್ವಹಣೆ ಮಾಡಿಕೊಂಡು ಬಂದಿದ್ದ ದೇಗುಲವನ್ನು ಮತ್ತೆ ನಮಗೆ ಹಸ್ತಾಂತರಿಸಿ ಎಂದು ಆರತಿ ಉಕ್ಕಡ ಗ್ರಾಮಸ್ಥರೊಂದಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು.


ನಿಮಿಷಾಂಬ ಹಾಗೂ ಆರತಿ ಉಕ್ಕಡ ದೇಗುಲಗಳ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಪಂ ಇಒ ವೇಣು, ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್, ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net