

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಪ್ರಾಧಿಕಾರ ಕಚೇರಿ ಸಮೀಪದಲ್ಲಿ ಅವನತಿಯತ್ತ ಸಾಗುತ್ತಿದ್ದ ಮೈಸೂರು ಮಹಾರಾಜರು ನಿರ್ಮಿಸಿದ ಜಡೇಕಲ್ಲು ಮಂಟಪವನ್ನು (ಕುರ್ಜು) ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಿಪೇರಿ ಪಡಿಸುವುದರ ಮೂಲಕ ಸಂರಕ್ಷಿಸಿದ್ದು, ಈ ಬಗ್ಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪವಾಡ ಪುರುಷ ಶ್ರೀ ಮಹದೇಶ್ವರರು ನೆಲೆಸಿರುವ ಮ.ಬೆಟ್ಟಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರವಾಗಿದ್ದು, ಮಹಾ ರಥೋತ್ಸವ ನಡೆಯುವ ತೇರು, ಮಾದಪ್ಪನ ಮೂರ್ತಿಗೆ ಅಲಂಕರಿಸುವ ಮುತ್ತು, ರತ್ನದ ಹಾರ ಹಾಗೂ ಇನ್ನಿತರ ಚಿನ್ನಾಭರಣಗಳನ್ನು ನೀಡಿದ್ದಾರೆ. ಅಲ್ಲದೆ ಪ್ರಾಧಿಕಾರದ ಕಚೇರಿ ಸಮೀಪ ಸಾಲೂರು ಬೃಹನ್ಮಠಕ್ಕೆ ತೆರಳುವ ಮಾರ್ಗದ ಬದಿಯ ಆವರಣದಲ್ಲಿ ಜಡೇಕಲ್ಲು ಮಂಟಪವನ್ನು ನಿರ್ಮಿಸಿಕೊಟ್ಟಿದ್ದರು. ಇದರ ಆವರಣದಲ್ಲಿ ಹಿಂದೆ ಮದುವೆ ಹಾಗೂ ಕೊಂಡೋತ್ಸವವನ್ನು ನೆರವೇರಿಸಲಾಗುತ್ತಿತ್ತು. ಭಕ್ತರು ತಂಗುವ ತಾಣವಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಕಳೆದ ಹಲವು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದ ಪರಿಣಾಮ ಮಂಟಪ ಹಾಳಾಗಿ ಅವನತಿಯತ್ತ ಸಾಗಿತ್ತು. ಇದರಿಂದ ಭಕ್ತರಲ್ಲಿ ಬೇಸರವನ್ನು ಉಂಟು ಮಾಡಿದ್ದು, ಸಂರಕ್ಷಣೆಗೆ ಒತ್ತಾಯಿಸಿದ್ದರು.
ಈ ಬಗ್ಗೆ 2023, ಜ.5 ಹಾಗೂ 2024, ಡಿ.26ರಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ದಕ್ಷಿಣ ದ್ವಾರ ಹನೂರು ಕ್ಷೇತ್ರ ಫೇಸ್‌ಬುಕ್ ಖಾತೆಯಲ್ಲಿ ಕುರ್ಜು ಸಂರಕ್ಷಿಸಿ ಅಂದವನ್ನು ಹೆಚ್ಚಿಸುವಂತೆ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸಿದ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಅವರು ಮಂಟಪವನ್ನು ದುರಸ್ತಿಪಡಿಸಿ ಬಣ್ಣವನ್ನು ತುಂಬಿಸಿದ್ದಾರೆ. ಆವರಣದ ಸುತ್ತಲೂ ಪಾರ್ಕ್ ಮಾದರಿಯಲ್ಲಿ ಗಿಡ ಹಾಗೂ ಹಸಿರು ಹುಲ್ಲಿನಿಂದ ಅಂದವನ್ನು ಹೆಚ್ಚಿಸಿದ್ದು, ಭಕ್ತರ ಗಮನ ಸೆಳೆಯುವಂತೆ ಮಾಡಿದೆ. ಈ ಕಾರ್ಯದ ಬಗ್ಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.