ರೈತರ ಬದುಕಿನ ಮೇಲೆ ಕಾಂಗ್ರೆಸ್ ಚೆಲ್ಲಾಟ

8-pnp 1
ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪಾಂಡವಪುರ ಪಟ್ಟಣದ ನೀರಾವರಿ ನಿಗಮದ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಎಚ್.ಎನ್.ಮಂಜುನಾಥ್, ದೊರೆಸ್ವಾಮಿ, ವಿಷ್ಣು ವಿಠಲ ಇತರರು ಇದ್ದರು.
Published on

ಪಾಂಡವಪುರ: ವರುಣನ ಕೃಪೆಯಿಂದ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದ್ದರು, ನಾಲೆಗಳಿಗೆ ನೀರು ಹರಿಸದೆ ಕಾಂಗ್ರೆಸ್ ಸರ್ಕಾರ ರೈತರ ಬದುಕಿನ ಜತೆ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿ ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಮಂಗಳವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ ರೈತರು, ಸುಮಾರು 15 ನಿಮಿಷಗಳ ಕಾಲ ಹೆದ್ದಾರಿ ಸಂಚಾರ ತಡೆದು ಆಕ್ರೋಶ ಹೊರಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ರೈತರ ಬವಣೆ ತಿಳಿದಿಲ್ಲದ ಕಾರಣ ಅಣೆಕಟ್ಟೆ ತುಂಬಿದ್ದರು ನಾಲೆಗಳಿಗೆ ನೀರು ಹರಿಸಿ ರೈತರ ಹಿತ ಕಾಪಾಡುವ ಕೆಲಸ ಮಾಡುತ್ತಿಲ್ಲ. ನಾಲೆ ಕಾಮಗಾರಿ ಆಧುನಿಕರಣದ ನೆಪದಲ್ಲಿ ನೀರು ಹರಿಸದೆ ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಈ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.

ಭತ್ತ ಮತ್ತು ಕಬ್ಬು ನೀರಿಲ್ಲದೆ ಒಣಗುತ್ತಿದೆ. ಕಟಾವು ಹಂತ ತಲುಪಿರುವ ಕಬ್ಬು ಒಣಗಿದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಾರೆ. ನೀರು ಹರಿಸುವಂತೆ ಕಳೆದ ಒಂದು ವಾರದಿಂದ ರೈತರು ಪ್ರತಿಭಟಿಸುತ್ತಿದ್ದರು, ಕಾವೇರಿ ನೀರಾವರಿ ನಿಗಮ ಮತ್ತು ಸರ್ಕಾರ ರೈತರ ಹೋರಾಟಕ್ಕೆ ಮನ್ನಣೆ ನೀಡಿಲ್ಲ. ಇಂದು ರಾತ್ರಿಯೊಳಗೆ ನಾಲೆಗೆ ನೀರು ಹರಿಸದಿದ್ದರೆ ಪಾಂಡವಪುರ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.

ವಿಶ್ವೇಶ್ವರಯ್ಯ ಮತ್ತು ಸಿಡಿಎಸ್ ನಾಲೆಗಳಲ್ಲಿ ಹರಿಯುವ ನೀರಿನ ಮೇಲೆ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಈ ನಾಲೆಗಳಲ್ಲಿ ತಕ್ಷಣಕ್ಕೆ ನೀರು ಹರಿದರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಅಣೆಕಟ್ಟೆಯಲ್ಲಿ ನೀರಿದ್ದರು ಹೋರಾಟ ಮಾಡಿ ನೀರು ಪಡೆದುಕೊಳ್ಳಬೇಕಾದ ಪರಿಸ್ಥಿತಿ ರೈತರಿಗೆ ಎದುರಾಗಿದೆ. ರೈತರ ಬದುಕು ಮತ್ತು ಹೋರಾಟಕ್ಕಿಂತ ನಾಲೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರನ ಹಿತ ಈ ಸರ್ಕಾರಕ್ಕೆ ಮುಖ್ಯವಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೋರಾಟಗಾರರಿಗೆ ನಾಲೆಗೆ ನೀರು ಹರಿಸುವುದಾಗಿ ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಆರ್‌ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ದಿನ ನಾಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದರು. ರೈತರ ಮುಂದೆ ನೀರು ಹರಿಸುವಂತೆ ಸೂಚನೆ ನೀಡಿ ಆನಂತರದಲ್ಲಿ ಬೇಡ ಎಂದಿರುವ ಬಗ್ಗೆ ಅನುಮಾನವಿದೆ. ಅದಕ್ಕಾಗಿಯೇ, ಅಧಿಕಾರಿಗಳು ನೀರು ಹರಿಸದೆ ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳು ಪ್ರತಿದಿನ ಒಂದಿಲ್ಲೊಂದು ಸಬೂಬು ಹೇಳಿಕೊಂಡು ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದ್ದಾರೆ. ಇಂದು ನಾಲೆಗೆ ನೀರು ಹರಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಾರದ ಪೊಲೀಸರು: ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದಿದ್ದರಿಂದ ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜತೆಗೆ ಪ್ರತಿಭಟನೆ ವೇಳೆ ಕೆಲವರು ಗೊಂದಲ ಸೃಷ್ಠಿಸಲು ಮುಂದಾಗಿದ್ದರು. ಆದರೂ, ಸ್ಥಳಕ್ಕೆ ಪೋಲೀಸರು ಬಾರದ ಕಾರಣ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಪ್ರತಿಭಟನೆ ಮುಗಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರಿಂದ ಎಷ್ಟು ಜನ ಸೇರಿದ್ದೀರಿ, ಎಷ್ಟು ಸಮಯ ಪ್ರತಿಭಟನೆ ನಡೆಸಲಾಯಿತು ಎಂದು ಮಾಹಿತಿ ಪಡೆದುಕೊಂಡು ಹೋದರು.

ಹೋರಾಟಗಾರ ಕೆನ್ನಾಳು ಚಿಕ್ಕಣ್ಣ, ಎಣ್ಣೆಹೊಳೆಕೊಪ್ಪಲು ನಿರಂಜನ್, ಹಿರೇಮರಳಿ ಶ್ರೀನಿವಾಸ್, ವಿಷ್ಣು ವಿಠಲ, ನೆಲಮನೆ ಪಿಎಸಿಎಸ್ ಅಧ್ಯಕ್ಷ ಶ್ರೀಕಂಠ, ಹೌಸಿಂಗ್ ಬೋರ್ಡ್ ನಿರ್ದೇಶಕ ಎನ್.ಭಾಸ್ಕರ್, ಪುಟ್ಟೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net